ಭಾರತದಲ್ಲಿ ಕೊರೊನಾ ಲಸಿಕೆಯ ತೀವ್ರ ಕೊರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದೇಶದಿಂದ ಲಸಿಕೆ ಅಮದು ಮಾಡಿಕೊಳ್ಳಲು ರಾಜ್ಯ ಸರ್ಕಾರಗಳೇ ಜಾಗತಿಕ ಟೆಂಡರ್ ಕರೆದಿದ್ದವು. ಆದರೆ, ಆಮೆರಿಕಾದ ಫೈಜರ್, ಮಾಡೆರ್ನಾ ಕಂಪನಿಗಳು ಈ ಟೆಂಡರ್ನಲ್ಲಿ ಭಾಗವಹಿಸುವುದಿಲ್ಲ ಮತ್ತು ರಾಜ್ಯಗಳಿಗೆ ನೇರವಾಗಿ ಲಸಿಕೆಯನ್ನು ಪೂರೈಸುವುದೂ ಇಲ್ಲ ಎಂದು ಹೇಳಿವೆ. ಕೇಂದ್ರ ಸರ್ಕಾರವೇ ವಿದೇಶಿ ಕಂಪನಿಗಳಿಂದ ಲಸಿಕೆ ಖರೀದಿಸಿ ರಾಜ್ಯ ಸರ್ಕಾರಗಳಿಗೆ ಪೂರೈಸುವುದೊಂದೇ ಈಗಿರುವ ಆಯ್ಕೆ.
ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧದ ಲಸಿಕೆಗೆ ತೀವ್ರ ಕೊರತೆ ಎದುರಾದ ಕಾರಣ ಕರ್ನಾಟಕವೂ ಸೇರಿದಂತೆ 10 ರಾಜ್ಯ ಸರ್ಕಾರಗಳೇ ನೇರವಾಗಿ ಲಸಿಕೆಯ ಪೂರೈಕೆಗೆ ಜಾಗತಿಕ ಟೆಂಡರ್ ಕರೆದಿದ್ದವು. ಆದರೇ ಲಸಿಕೆಯ ಜಾಗತಿಕ ಟೆಂಡರ್ನಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಏಕೆಂದರೆ, ಆಮೆರಿಕಾದ ಲಸಿಕಾ ಕಂಪನಿಗಳಾದ ಫೈಜರ್ ಮತ್ತು ಮಾಡೆರ್ನಾ ಕಂಪನಿಗಳು ನಾವು ಲಸಿಕೆ ಪೂರೈಕೆಗೆ ರಾಜ್ಯ ಸರ್ಕಾರಗಳ ಜೊತೆಗೆ ವ್ಯವಹಾರವನ್ನೇ ಮಾಡಲ್ಲ. ನಾವು ಏನಿದ್ದರೂ, ಭಾರತ ಸರ್ಕಾರದ ಜೊತೆಗೆ ಮಾತ್ರ ವ್ಯವಹಾರ ಮಾಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿವೆ. ಭಾನುವಾರವೇ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಫೈಜರ್ ಕಂಪನಿಯು ನಾವು ಕೇಂದ್ರ ಸರ್ಕಾರದ ಜೊತೆಗೆ ಮಾತ್ರ ಲಸಿಕೆ ಪೂರೈಕೆಯ ವ್ಯವಹಾರ ಮಾಡುತ್ತೇವೆ ಎಂದು ತಿಳಿಸಿತ್ತು.
ಈ ಕುರಿತು ಸೋಮವಾರ (ಮೇ 24) ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಫೈಜರ್ ಮತ್ತು ಮಾಡೆರ್ನಾ ಕಂಪನಿಗಳು ನಮಗೆ ನೇರವಾಗಿ ಲಸಿಕೆ ಪೂರೈಸಲ್ಲ ಎಂದು ಹೇಳಿವೆ. ಹೀಗಾಗಿ ಕೇಂದ್ರ ಸರ್ಕಾರವೇ ವಿದೇಶದಿಂದ ಲಸಿಕೆ ಖರೀದಿಸಿ ರಾಜ್ಯ ಸರ್ಕಾರಗಳಿಗೆ ಪೂರೈಸಲಿ ಎಂದು ಹೇಳಿದ್ದಾರೆ.
ಮಾಡೆರ್ನಾ ಕಂಪನಿಯು ಈ ವರ್ಷದ ಅಂತ್ಯದವರಗೂ ಭಾರತಕ್ಕೆ ಪೂರೈಸಲು ಲಸಿಕೆಯ ದಾಸ್ತಾನು ಇಲ್ಲ ಎಂದು ಪಂಜಾಬ್ ಸರ್ಕಾರಕ್ಕೆ ತಿಳಿಸಿದೆ. ಆದರೇ, ಫೈಜರ್ ಕಂಪನಿ ಮಾತ್ರ ಮೊದಲಿನಿಂದಲೂ ನೇರವಾಗಿ ಭಾರತ ಸರ್ಕಾರಕ್ಕೆ ಮಾತ್ರ ನೇರವಾಗಿ ಲಸಿಕೆ ಪೂರೈಸುತ್ತೇವೆ ಎಂದು ಹೇಳುತ್ತಿದೆ. ನಾವು ರಾಜ್ಯ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆ, ಕಂಪನಿಗಳೊಂದಿಗೆ ಲಸಿಕೆ ಪೂರೈಕೆಯ ವ್ಯವಹಾರ ಮಾಡಲ್ಲ ಎಂದು ಫೈಜರ್ ಕಂಪನಿ ಹೇಳುತ್ತಿದೆ.
ಕೋರ್ಟ್ ಕೇಸುಗಳಿಂದ ರಕ್ಷಣೆ ಬೇಕೆಂಬ ಫೈಜರ್ ಷರತ್ತು
ಫೈಜರ್ ಕಂಪನಿಯ ಲಸಿಕೆಯು ಭಾರತಕ್ಕೆ ಬರಲು ಕಂಪನಿಯ ಷರತ್ತೊಂದು ಅಡ್ಡಿಯಾಗಿದೆ. ಭಾರತದಲ್ಲಿ ಒಂದು ವೇಳೆ ತಮ್ಮ ಲಸಿಕೆಯ ಅಡ್ಡಪರಿಣಾಮಗಳಿಂದಾಗಿ ಜನರಿಗೆ ತೊಂದರೆಯಾದರೆ ಕೋರ್ಟ್ನಲ್ಲಿ ಕೇಸ್ ದಾಖಲಿಸದಂತೆ ಕಾನೂನಿನ ರಕ್ಷಣೆ ನೀಡಬೇಕೆಂದು ಫೈಜರ್ ಕಂಪನಿಯು ಕೇಳುತ್ತಿದೆ. ಆದರೇ, ಈ ಷರತ್ತಿಗೆ ಭಾರತ ಸರ್ಕಾರ ಒಪ್ಪಿಲ್ಲ. ಫೈಜರ್ ಕಂಪನಿಯ ಲಸಿಕೆಗೆ ಕೋರ್ಟ್ ಕೇಸ್ನಿಂದ ವಿನಾಯಿತಿ ನೀಡುವ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಫೈಜರ್ ಕಂಪನಿಯ ನಡುವೆ ಮಾತುಕತೆ ನಡೆಯುತ್ತಿದೆ. ಈ ಮಾತುಕತೆ ಯಶಸ್ವಿಯಾಗುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರ ಇದೆ. ಫೈಜರ್ ಕಂಪನಿಯು ಇನ್ನೂ ಭಾರತದ ಔಷಧ ನಿಯಂತ್ರಕರಿಗೆ (ಡಿಸಿಜಿಐ) ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿಲ್ಲ. ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಹಿಂತೆಗೆದುಕೊಂಡಿದೆ.
ಇನ್ನುಳಿದ ವಿದೇಶಿ ಲಸಿಕಾ ಕಂಪನಿಗಳಾದ ಜಾನ್ಸನ್ ಅಂಡ್ ಜಾನ್ಸನ್, ಆಕ್ಸ್ಫರ್ಡ್ ವಿವಿ-ಅಸ್ಟ್ರಾಜನೆಕ ಸೇರಿದಂತೆ ಬೇರೆ ಕಂಪನಿಗಳು ಕೂಡ ನೇರವಾಗಿ ಭಾರತಕ್ಕೆ ಸರ್ಕಾರಕ್ಕೆ ಮಾತ್ರ ಲಸಿಕೆ ಪೂರೈಸುವ ನಿಲುವುನ್ನು ವ್ಯಕ್ತಪಡಿಸಬಹುದು. ಹೀಗಾಗಿ ಈಗ ಉಳಿದಿರುವ ಒಂದೇ ಆಯ್ಕೆ ಅಂದರೆ, ಕೇಂದ್ರ ಸರ್ಕಾರವೇ ಫೈಜರ್, ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್, ಆಕ್ಸಫರ್ಡ್ ವಿವಿ-ಅಸ್ಟ್ರಾಜನೆಕ ಕಂಪನಿಗಳ ಜೊತೆಗೆ ಮಾತನಾಡಿ ರಾಜ್ಯ ಸರ್ಕಾರಗಳಿಗೆ ಅಗತ್ಯವಾಗಿ ಬೇಕಾಗಿರುವ ಕೊರೊನಾ ಲಸಿಕೆಯನ್ನು ಖರೀದಿಸಿ ನೀಡಬೇಕಾಗಿದೆ. ಈ ಖರೀದಿಗೆ ಬೇಕಾದ ಹಣವನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಲು ರಾಜ್ಯ ಸರ್ಕಾರಗಳು ಸಿದ್ಧವಾಗಿವೆ. ಸುಮಾರು 10 ರಾಜ್ಯಗಳು 21 ಕೋಟಿ ಡೋಸ್ ಲಸಿಕೆಯ ಪೂರೈಕೆಗೆ ಜಾಗತಿಕ ಟೆಂಡರ್ ಕರೆದಿವೆ. ಲಸಿಕೆಯ ಕೊರತೆಯಿಂದ ಉಂಟಾದ ಸಾರ್ವಜನಿಕ ಒತ್ತಡದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಗಳು ಲಸಿಕೆಯ ಜಾಗತಿಕ ಟೆಂಡರ್ ಕರೆದಿವೆ ಎನ್ನುವುದು ವಿಶೇಷ. ಜೊತೆಗೆ ದೇಶದಲ್ಲಿ 18ರಿಂದ 44 ವರ್ಷ ವಯೋಮಾನದೊಳಗಿನವರಿಗೆ ರಾಜ್ಯ ಸರ್ಕಾರಗಳೇ ತಮ್ಮ ಸ್ವಂತ ಖರ್ಚಿನಲ್ಲಿ ಲಸಿಕೆ ನೀಡಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ಈಗ ದೇಶಾದ್ಯಂತ 18-44 ವರ್ಷ ವಯೋಮಾನದವರಲ್ಲೇ ಲಸಿಕೆಯ ಬೇಡಿಕೆ ಹೆಚ್ಚಾಗಿದೆ.
ರಾಜ್ಯ ಸರ್ಕಾರಗಳ ಲಸಿಕೆಯ ಜಾಗತಿಕ ಟೆಂಡರ್ನಲ್ಲಿ ಭಾಗವಹಿಸಲು ವಿದೇಶಿ ಲಸಿಕಾ ಕಂಪನಿಗಳು ಆಸಕ್ತಿ ವಹಿಸುತ್ತಿಲ್ಲ. ಏಕೆಂದರೇ, ವಿದೇಶಿ ಲಸಿಕಾ ಕಂಪನಿಗಳು ಈ ವರ್ಷ ಉತ್ಪಾದಿಸುವ ಲಸಿಕೆಯನ್ನು ಈಗಾಗಲೇ ಬೇರೆ ಬೇರೆ ದೇಶಗಳು ಮುಂಚಿತವಾಗಿಯೇ ಬುಕ್ ಮಾಡಿಕೊಂಡು ಖರೀದಿ ಒಪ್ಪಂದ ಮಾಡಿಕೊಂಡಿವೆ. ಆ ಒಪ್ಪಂದದ ಪ್ರಕಾರ, ಲಸಿಕೆ ಪೂರೈಸಬೇಕಾದ ಒತ್ತಡದಲ್ಲಿ ಲಸಿಕಾ ಕಂಪನಿಗಳಿವೆ. ಹೀಗಾಗಿ ರಾಜ್ಯ ಸರ್ಕಾರಗಳು ಲಸಿಕೆ ಪೂರೈಕೆಗಾಗಿ ಕರೆದಿರುವ ಲಸಿಕೆ ಪೂರೈಕೆಯ ಜಾಗತಿಕ ಟೆಂಡರ್ ಮೇಲೆ ನಮ್ಮ ಜನರು ಹೆಚ್ಚಿನ ಭರವಸೆ ಇಟ್ಟುಕೊಳ್ಳುವಂತಿಲ್ಲ. ಲಸಿಕೆ ಕೊರತೆಯಿಂದ ಆಕ್ರೋಶಗೊಂಡಿರುವ ಜನರು, ವಿರೋಧ ಪಕ್ಷಗಳ ಕಣ್ಣೊರೆಸಲು ಮಾತ್ರ ರಾಜ್ಯ ಸರ್ಕಾರಗಳು ಲಸಿಕೆಯ ಜಾಗತಿಕ ಟೆಂಡರ್ ಕರೆಯುವ ಅಸ್ತ್ರ ಪ್ರಯೋಗಿಸಿವೆ.
ಕೋಟಿಗಟ್ಟಲೆ ನೋಂದಣಿ
ಭಾರತದಲ್ಲಿ ಏಪ್ರಿಲ್ 28ರಿಂದ 18-44 ವರ್ಷದೊಳಗಿನವರು ಲಸಿಕೆ ಪಡೆಯಲು ಕೋವಿನ್ ಪೋರ್ಟಲ್ನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಅವಕಾಶ ಕೊಡಲಾಗಿದೆ. ಈ ವಯೋಮಾನದವರ ಪೈಕಿ ಈಗಾಗಲೇ 6.5 ಕೋಟಿಗಿಂತ ಹೆಚ್ಚಿನ ಜನರು ಲಸಿಕೆ ಪಡೆಯಲು ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ಆದರೇ, ಮೇ 1 ರಿಂದ ಮೇ 24ರ ಸೋಮವಾರ ಬೆಳಿಗ್ಗೆವರೆಗೂ 18-44ವಯೋಮಾನದವರ ಪೈಕಿ 1 ಕೋಟಿ 6 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಇನ್ನೂ ಕೇಂದ್ರ ಸರ್ಕಾರವು ಹೇಳಿರುವ ಪ್ರಕಾರ, ಜೂನ್ ಅಂತ್ಯದವರೆಗೂ ರಾಜ್ಯ ಸರ್ಕಾರಗಳಿಗೆ 18-44 ವರ್ಷ ವಯೋಮಾನದವರಿಗೆ ಲಸಿಕೆ ನೀಡಲು 2 ಕಂಪನಿಗಳು 5 ಕೋಟಿ ಡೋಸ್ ಲಸಿಕೆ ಪೂರೈಸುತ್ತವೆ. ಆದರೇ, ಜೂನ್ ಅಂತ್ಯದ ವೇಳೆಗೆ ಲಸಿಕೆಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ 18-44 ವಯೋಮಾನದವರಿಗೆ ಜೂನ್ ಅಂತ್ಯದವರೆಗೆ 5 ಕೋಟಿ ಡೋಸ್ ಲಸಿಕೆ ಪೂರೈಸಿದರೂ, ಕೊರತೆ ಆಗಲಿದೆ. ಜುಲೈ ಅಂತ್ಯದ ವೇಳೆಗೆ 18-44 ವಯೋಮಾನದ 20 ಕೋಟಿ ಜನರು ಲಸಿಕೆ ಪಡೆಯಲು ರಿಜಿಸ್ಟ್ರೇಷನ್ ಮಾಡಿಕೊಳ್ಳುವ ಅಂದಾಜಿದೆ. ಜುಲೈ ಅಂತ್ಯದ ವೇಳೆಗೆ ಸೆರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕಂಪನಿಗಳು ರಾಜ್ಯ ಸರ್ಕಾರಗಳಿಗೆ 13 ಕೋಟಿ ಡೋಸ್ ಲಸಿಕೆ ಪೂರೈಸಬಹುದು. ಆದರೆ, 20 ಕೋಟಿಗಿಂತ ಹೆಚ್ಚಿನ ಜನರು ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುತ್ತಾರೆ. ಹೀಗಾಗಿ ಇನ್ನೂ 7 ಕೋಟಿ ಡೋಸ್ ಲಸಿಕೆಯ ಕೊರತೆಯಾಗಲಿದೆ.
ತಮ್ಮ ರಾಜ್ಯಗಳ 18ರಿಂದ 44 ವಯೋಮಾನದ ವರ್ಗದ ಬೇಡಿಕೆಯನ್ನು ಈಡೇರಿಸಲು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್, ದೆಹಲಿ, ಉತ್ತರಾಖಂಡ್, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳು ಲಸಿಕೆಯ ಪೂರೈಕೆಗೆ ಜಾಗತಿಕ ಟೆಂಡರ್ ಕರೆಯುವ ತೀರ್ಮಾನ ಕೈಗೊಂಡಿದ್ದವು. ಉತ್ತರ ಪ್ರದೇಶ ರಾಜ್ಯ ಸರ್ಕಾರ 4 ಕೋಟಿ ಡೋಸ್, ತಮಿಳುನಾಡು ಸರ್ಕಾರ 5 ಕೋಟಿ ಡೋಸ್, ಒರಿಸ್ಸಾ ಸರ್ಕಾರ 3.8 ಕೋಟಿ ಡೋಸ್, ಕೇರಳ ಸರ್ಕಾರ 3 ಕೋಟಿ ಡೋಸ್, ಕರ್ನಾಟಕ ಸರ್ಕಾರ 2 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಜಾಗತಿಕ ಟೆಂಡರ್ ಕರೆದಿದ್ದವು.
ಆದರೇ, 5 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಜಾಗತಿಕ ಟೆಂಡರ್ ಕರೆದಿರುವ ತಮಿಳುನಾಡು ಸರ್ಕಾರವು 18-44 ವಯೋಮಾನದ 53,216 ಜನರಿಗೆ ಮಾತ್ರ ಲಸಿಕೆ ನೀಡಿದೆ. ಕೇರಳ ಸರ್ಕಾರವು 30,555 ಜನರಿಗೆ ಮಾತ್ರ ಲಸಿಕೆ ನೀಡಿದೆ. ಕರ್ನಾಟಕ ಸರ್ಕಾರವು 1.97 ಲಕ್ಷ ಜನರಿಗೆ ಮಾತ್ರ ಲಸಿಕೆ ನೀಡಿದೆ.
ಲಸಿಕೆಯ ಪೂರೈಕೆಗೆ ಜಾಗತಿಕ ಟೆಂಡರ್ ಕರೆಯುವ ಮೂಲಕ ಭಾರತದ ವಿವಿಧ ರಾಜ್ಯ ಸರ್ಕಾರಗಳು ತಮ್ಮ ನಡುವೆಯೇ ಲಸಿಕೆಗಾಗಿ ಸ್ಪರ್ಧೆ ಮಾಡಬೇಕಾದ ಸ್ಥಿತಿ ಎದುರಾಗಿದೆ. ಲಸಿಕೆಯ ಕೊರತೆಯಿಂದ ಜನರು, ವಿರೋಧ ಪಕ್ಷಗಳ ಆಕ್ರೋಶವನ್ನು ತಣ್ಣಗಾಗಿಸಲು ಕೂಡ ರಾಜ್ಯ ಸರ್ಕಾರಗಳು ಲಸಿಕೆ ಪೂರೈಕೆಗೆ ಜಾಗತಿಕ ಟೆಂಡರ್ ಕರೆಯುವ ಕೆಲಸ ಮಾಡಿವೆ. ಈಗ ವಿದೇಶಿ ಲಸಿಕಾ ಕಂಪನಿಗಳು ರಾಜ್ಯ ಸರ್ಕಾರಗಳಿಗೆ ನೇರವಾಗಿ ಲಸಿಕೆ ಪೂರೈಸಲ್ಲ ಎನ್ನುತ್ತಿರುವುದರಿಂದ ಎಲ್ಲ ರಾಜ್ಯ ಸರ್ಕಾರಗಳಿಗೆ ಒಟ್ಟು ಅಗತ್ಯವಿರುವ ಪ್ರಮಾಣದ ಲಸಿಕೆಯನ್ನು ಕೇಂದ್ರ ಸರ್ಕಾರವೇ ಜಾಗತಿಕ ಟೆಂಡರ್ ಮೂಲಕ ಆದಷ್ಟು ಬೇಗ ಖರೀದಿಸಿ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ಪೂರೈಸುವುದು ಒಳ್ಳೆಯದು.
(Moderna Pfizer Vaccine Companies says no for direct supply of vaccine to State Governments in India new challenge in vaccine drive)
ಇದನ್ನೂ ಓದಿ: WHO ಪಟ್ಟಿಯಲಿಲ್ಲ ಕೊವ್ಯಾಕ್ಸಿನ್.. ಲಸಿಕೆಗೆ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ, ಭಾರತ್ ಬಯೋಟೆಕ್ ಸರ್ಕಸ್
ಇದನ್ನೂ ಓದಿ: ಕೊವಿಡ್ ಸೋಂಕಿನಿಂದ ರಕ್ಷಿಸಲು ಲಸಿಕೆಯ 3ನೇ ಡೋಸ್ ನೀಡಬೇಕು ಎಂದ ಮಾಡೆರ್ನಾ ಕಂಪನಿಯ ಸಿಇಒ