ನೋಯ್ಡಾ ಮಾರ್ಚ್ 12 : ಕಳೆದ ವರ್ಷ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಈಗ ಗ್ರೇಟರ್ ನೋಯ್ಡಾದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ (Seema Haider)ಅವರು ಪೌರತ್ವ (ತಿದ್ದುಪಡಿ) ಕಾಯ್ದೆಯ ( Citizenship (Amendment) Act) ಅನುಷ್ಠಾನ ಕುರಿತು ಕೇಂದ್ರದ ಅಧಿಸೂಚನೆ ಕ್ರಮವನ್ನು ಶ್ಲಾಘಿಸಿದ್ದಾರೆ. ಹಿಂದೂ ಧರ್ಮ ಸ್ವೀಕರಿಸಿ ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಮೀನಾ ಅವರನ್ನು ವಿವಾಹವಾಗಿದ್ದೇನೆ ಎಂದು ಹೇಳಿಕೊಳ್ಳುವ ಹೈದರ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದು, ಸಿಎಎ ಭಾರತೀಯ ಪೌರತ್ವವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಆದಾಗ್ಯೂ, ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಸಿಎಎ ಮೂಲಕ ಪೌರತ್ವ ನೀಡಲಾಗುತ್ತದೆ. ಆದಾಗ್ಯೂ,ಸೀಮಾ ಹೈದರ್ ಸಿಎಎ ನೇರ ಫಲಾನುಭವಿ ಆಗುವುದಿಲ್ಲ.
ಭಾರತ ಸರ್ಕಾರ ಇಂದು ನಮ್ಮ ದೇಶದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತಂದಿದೆ. ನಮಗೆ ತುಂಬಾ ಸಂತೋಷವಾಗಿದೆ. ಇದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತೇವೆ. ನಿಜ ಹೇಳಬೇಕೆಂದರೆ ಮೋದಿ ಜೀ ಅವರು ವಾಗ್ದಾನ ಮಾಡಿದ್ದನ್ನು ಪೂರೈಸಿದ್ದಾರೆ. ನನ್ನ ಜೀವನದುದ್ದಕ್ಕೂ ನಾನು ಅವರಿಗೆ ಋಣಿಯಾಗಿರುತ್ತೇನೆ. ನಾನು ಅವರಿಗೆ ಧನ್ಯವಾದ ಹೇಳುತ್ತಲೇ ಇರುತ್ತೇನೆ” ಎಂದು ವಿಡಿಯೊ ಸಂದೇಶದಲ್ಲಿ ಸೀಮಾ ಹೈದರ್ ಹೇಳಿದ್ದಾರೆ.
VIDEO | Seema Haider, the Pakistani woman who entered India illegally to marry a man she met online, celebrates with her family in UP’s Noida after Centre announces implementation of CAA.
“We are very happy, we congratulate the Indian government. PM Modi has done what he… pic.twitter.com/MtMrV9FVCp
— Press Trust of India (@PTI_News) March 11, 2024
“ಈ ಸಂತೋಷದ ಸಂದರ್ಭದಲ್ಲಿ, ನನ್ನ ಸಹೋದರ ವಕೀಲ ಎ ಪಿ ಸಿಂಗ್ ಅವರ ಕೆಲಸಕ್ಕಾಗಿ ನಾನು ಅಭಿನಂದಿಸುತ್ತೇನೆ. ಏಕೆಂದರೆ ಈಗ ನನ್ನ ಪೌರತ್ವ ಸಂಬಂಧಿತ ಅಡೆತಡೆಗಳು ಈ ಕಾನೂನಿನೊಂದಿಗೆ ನಿವಾರಣೆಯಾಗುತ್ತವೆ” ಎಂದು ಹೇಳಿದ ಸೀಮಾ ಹೈದರ್ ಮಾತು ಮುಗಿಸುವ ಮುನ್ನ “ಜೈ ಶ್ರೀ ರಾಮ್” “ರಾಧೆ ರಾಧೆ” ಮತ್ತು “ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗಿದ್ದಾರೆ.
ವಕೀಲ ಸಿಂಗ್ ಅವರು ಕೇಂದ್ರದ ಘೋಷಣೆಯನ್ನು ಶ್ಲಾಘಿಸಿದ್ದು, ಭಾರತದಲ್ಲಿ ಪೌರತ್ವ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ವಿವಿಧ ಧರ್ಮಗಳ ಜನರಿಗೆ ಈ ನಿರ್ಧಾರವು ಸಹಾಯ ಮಾಡುತ್ತದೆ ಎಂದು ಹೇಳಿದರು.
“ಈ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಮತ್ತು ಭಾರತದಲ್ಲಿ ಹೇಗೋ ಬದುಕು ಸಾಗಿಸಿದ ಜನರಿಗೆ ಇದು ದೊಡ್ಡ ದಿನವಾಗಿದೆ” ಎಂದು ಸಿಂಗ್ ಹೇಳಿದರು.
ಕಳೆದ ತಿಂಗಳು, ಸೀಮಾ ಹೈದರ್ ಅವರ ಪಾಕಿಸ್ತಾನಿ ಪತಿ ಗುಲಾಮ್ ಹೈದರ್ ತಮ್ಮ ನಾಲ್ಕು ಮಕ್ಕಳ ಪಾಲನೆಗಾಗಿ ಭಾರತೀಯ ವಕೀಲರನ್ನು ನೇಮಿಸಿಕೊಂಡಿದ್ದರು.
ಇದನ್ನೂ ಓದಿ: ಭಾರತೀಯ ಮುಸ್ಲಿಮರು ಸಿಎಎ ಸ್ವಾಗತಿಸಬೇಕು: ಅಖಿಲ ಭಾರತ ಮುಸ್ಲಿಂ ಜಮಾತ್ ಮುಖ್ಯಸ್ಥ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್ ಮೂಲದ ಸೀಮಾ ಕಳೆದ ವರ್ಷ ಮೇ ತಿಂಗಳಲ್ಲಿ ತನ್ನ ಮಕ್ಕಳನ್ನು ಕರೆದುಕೊಂಡು ಕರಾಚಿಯಲ್ಲಿರುವ ತನ್ನ ಮನೆಯಿಂದ ನೇಪಾಳದ ಮೂಲಕ ಭಾರತಕ್ಕೆ ಪ್ರಯಾಣ ಬೆಳೆಸಿದ್ದಳು. ಗ್ರೇಟರ್ ನೋಯ್ಡಾದಲ್ಲಿ ಭಾರತೀಯ ಪ್ರಜೆ (ಈಗ ಅವರ ಪತಿ) ಸಚಿನ್ ಮೀನಾ ಅವರೊಂದಿಗೆ ವಾಸಿಸುತ್ತಿರುವುದನ್ನು ಭಾರತೀಯ ಅಧಿಕಾರಿಗಳು ಕಂಡುಕೊಂಡಾಗ ಸೀಮಾ ಸುದ್ದಿಯಾಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ