ದೆಹಲಿ, ಡಿ.21: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ಜೇಬುಗಳ್ಳರ ಹೇಳಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ಈ ಆದೇಶವನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉದ್ಯಮಿ ಗೌತಮ್ ಅದಾನಿಯನ್ನು ‘ಪಿಕ್‌ಪಾಕೆಟ್‌ಗಳು’ ಎಂದು ಹೇಳಿಕೆಯನ್ನು ನೀಡಿದರು. 8 ವಾರದ ಒಳಗಾಗಿ ಕ್ರಮ ಕೈಗೊಳ್ಳುವಂತೆ ಭಾರತ ಚುನಾವಣಾ ಆಯೋಗಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಹೇಳಿಕೆಗಳು ಉತ್ತಮವಲ್ಲ, ಇದನ್ನು ಚುನಾವಣೆ ಸಮಯದಲ್ಲಿ ನೀಡಿರುವ ಕಾರಣ, ಈ ಬಗ್ಗೆ ಚುನಾವಣಾ ಆಯೋಗವೇ ಕ್ರಮ ಕೈಗೊಳ್ಳಬೇಕು. ಎಂಟು ವಾರದ ಒಳಗೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಿ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸುವುದಿಲ್ಲ. ಈ ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ ಎಂದು ಹೈಕೋರ್ಟ್ ಸ್ಪಷ್ಟವಾಗಿ ಆದೇಶದಲ್ಲಿ ಹೇಳಿದೆ.
ರಾಹುಲ್ ಗಾಂಧಿ ಅವರು ಚುನಾವಣೆ ಸಮಯದಲ್ಲಿ ನೀಡಿದ ಈ ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ನವೆಂಬರ್ 23 ರಂದು ರಾಹುಲ್ ಅವರಿಗೆ ನೋಟಿಸ್ ನೀಡಿದೆ. ನವೆಂಬರ್ 26 ರೊಳಗೆ ಉತ್ತರಿಸದಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿತ್ತು. ಇದೀಗ ಅವರು ಈ ನೋಟಿಸ್ಗೆ ಉತ್ತರ ನೀಡದ ಕಾರಣ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಪ್ರಧಾನಿ ನನ್ನನ್ನು ನಿಂದಿಸುತ್ತಾರೆ, ನಾನು ತಲೆಕೆಡಿಸಿಕೊಳ್ಳುವುದಿಲ್ಲ: ರಾಹುಲ್ ಗಾಂಧಿ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ‘ಅತ್ಯಂತ ಹಿರಿಯ ನಾಯಕರಿಗೆ’ ಇಂತಹ ಭಾಷೆ ಬಳಸುವುದು ಸೂಕ್ತವಲ್ಲ ಎಂದು ಹೇಳಿದೆ. ಚುನಾವಣಾ ನೀತಿ ಸಂಹಿತೆಯ ಪ್ರಕಾರ, ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ದೃಢೀಕರಿಸದ ಆರೋಪಗಳನ್ನು ಮಾಡಲು ನಾಯಕರಿಗೆ ಅವಕಾಶವಿಲ್ಲ ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Thu, 21 December 23