Monsoon 2021: ಮುಂಬೈ ಪ್ರವೇಶಿಸಿದ ನೈಋತ್ಯ ಮುಂಗಾರು; ಮಹಾನಗರಿಯಲ್ಲಿ ಭರ್ಜರಿ ಮಳೆ, ರೈಲ್ವೆ ಸಂಚಾರ ಸ್ಥಗಿತ

| Updated By: Lakshmi Hegde

Updated on: Jun 09, 2021 | 12:34 PM

Karnataka Monsoon 2021: ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ಮಳೆ ಶುರುವಾಗಿದ್ದು, ಕಳೆದ ಎರಡು ದಿನಗಳಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಆದರೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿ ಇಂದಿನಿಂದ ಮತ್ತೆ ಮೂರು ದಿನ ಹೆಚ್ಚಿನ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Monsoon 2021: ಮುಂಬೈ ಪ್ರವೇಶಿಸಿದ ನೈಋತ್ಯ ಮುಂಗಾರು; ಮಹಾನಗರಿಯಲ್ಲಿ ಭರ್ಜರಿ ಮಳೆ, ರೈಲ್ವೆ ಸಂಚಾರ ಸ್ಥಗಿತ
ಮುಂಬೈನಲ್ಲಿ ವಿಪರೀತ ಮಳೆ
Follow us on

ಮುಂಬೈ: ನೈಋತ್ಯ ಮಾನ್ಸೂನ್​ ಇಂದು ಮುಂಬೈನ್ನು ಪ್ರವೇಶಿಸಿದ್ದು, ಬೆಳಗ್ಗೆಯಿಂದ ಸಿಕ್ಕಾಪಟೆ ಮಳೆಯಾಗುತ್ತಿದೆ. ಸಾಮಾನ್ಯವಾಗಿ ಮುಂಬೈಗೆ ಪ್ರತಿವರ್ಷ ಜೂನ್​ 10ರಂದು ಮಾನ್ಸೂನ್​ ಪ್ರವೇಶಿಸುತ್ತದೆ. ಆದರೆ ಈ ಬಾರಿ ಮುಂಚಿತವಾಗಿಯೇ ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಯ ಡೈರೆಕ್ಟರ್​ ಜನರಲ್​ ಡಾ. ಜಯಂತ ಸರ್ಕಾರ್​ ತಿಳಿಸಿದ್ದಾರೆ.

ಮುಂಬೈನಲ್ಲಿ ನಿನ್ನೆಯಿಂದಲೂ ಮಳೆಯಾಗುತ್ತಿದ್ದು ಕೋಲಾಬಾ, ಮಹಾಲಕ್ಷ್ಮೀ ಮತ್ತು ದಾದರ್​ ಏರಿಯಾಗಳಲ್ಲಿ 20ಮಿಮೀನಿಂದ 40ಮಿಮೀವ ರೆಗೆ ಸರಾಸರಿ ಮಳೆಯಾಗಿದೆ. ಹಾಗೇ, ಉತ್ತರ ಮುಂಬೈನ ಚಿಂಚೋಲಿ, ಬೊರಿವಾಲಿ ಮತ್ತು ದಹಿಸಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ದಿನದ ಮೊದಲರ್ಧದಲ್ಲೇ 60ಮಿಮೀ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಹವಾಮಾನ ಇಲಾಖೆ, ಸದ್ಯ ಮುಂಬೈ ಪ್ರವೇಶ ಮಾಡಿರುವ ನೈಋತ್ಯ ಮಾನ್ಸೂನ್​, ಇನ್ನೆರಡು ದಿನಗಳಲ್ಲಿ ಮಹಾರಾಷ್ಟ್ರದ ಇನ್ನಷ್ಟು ಪ್ರದೇಶಗಳಿಗೆ ಮತ್ತು ತೆಲಂಗಾಣ, ಆಂಧ್ರಪ್ರದೇಶ, ಓಡಿಶಾದ ಕೆಲವು ಭಾಗಗಳನ್ನು ಪ್ರವೇಶಿಸುವ ಸಾಧ್ಯತೆ ಇದೆ. ಹಾಗೇ ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಿಗೂ ನೈಋತ್ವ ಮುಂಗಾರು ಪ್ರವೇಶ ಆಗಲಿದೆ ಎಂದು ತಿಳಿಸಿದೆ.

ರೈಲು ಸಂಚಾರ ಸ್ಥಗಿತ
ಮುಂಬೈನಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣ ಸಿಎಸ್​​ಎಂಟಿ ಮತ್ತು ವಶಿ ನಡುವಿನ ಹಾರ್ಬರ್​ ಲೈನ್​​ ರೈಲ್ವೆ ಇಂದು ಬೆಳಗ್ಗೆ 10.20ರಿಂದ ಸಂಚಾರ ಸ್ಥಗಿತಗೊಂಡಿದೆ. ಹಾಗೇ ಸಿಯಾನ್​-ಕುರ್ಲಾ ವಿಭಾಗದಲ್ಲೂ ವಿಪರೀತ ನೀರು ತುಂಬುವ ಕಾರಣ, ಸಿಎಸ್​ಎಂಟಿ-ಥಾಣೆ ನಡುವಿನ ಮುಖ್ಯಲೈನ್​ನಲ್ಲಿ ಕೂಡ ರೈಲ್ವೆ ಸಂಚಾರ ಇಂದು ಬೆಳಗ್ಗೆಯಿಂದ ಸ್ಥಗಿತಗೊಂಡಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಸಿಪಿಆರ್​ಒ ತಿಳಿಸಿದ್ದಾರೆ. ಇನ್ನೂ ಮುಂದಿನ ಐದು ದಿನಗಳ ಕಾಲ ಇದೇ ಸ್ಥಿತಿ ಮುಂದುವರಿಯಲಿದ್ದು, ಎಚ್ಚರಿಕೆಯಿಂದ ಇರಬೇಕು ಎಂದು ಮುಂಬೈ ಪ್ರಾದೇಶಿಕ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ಇಂದು ಮುಂಬೈನಲ್ಲಿ ವಿಪರೀತ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ತುಂಬಿದೆ. ಟ್ರಾಫಿಕ್​ ಜಾಮ್​ ಆಗಿದೆ. ಮುಂಬೈನ ಮೆಟ್ರೋಪಾಲಿಟಿನ್​ ಸೇರಿ, ಕೊಂಕಣದ ಎಲ್ಲ ಜಿಲ್ಲೆಗಳಲ್ಲಿ ಜೂ.12ರವರೆಗೆ ಸಿಕ್ಕಾಪಟೆ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲೂ ಮಳೆ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ಮಳೆ ಶುರುವಾಗಿದ್ದು, ಕಳೆದ ಎರಡು ದಿನಗಳಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಆದರೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿ ಇಂದಿನಿಂದ ಮತ್ತೆ ಮೂರು ದಿನ ಹೆಚ್ಚಿನ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂ.3ರಂದು ಮುಂಗಾರು ಕೇರಳವನ್ನು ಪ್ರವೇಶಿಸಿದಾಗಿನಿಂದಲೂ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಕೃಷಿಕರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಬೆಂಗಳೂರಲ್ಲೂ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದೆ. ದೇಶಾದ್ಯಂತ ಬಹುತೇಕ ರಾಜ್ಯ, ಜಿಲ್ಲೆಗಳಲ್ಲಿ ಮಳೆಯ ಸಿಂಚನ ಶುರುವಾಗಿದೆ. ಮಾನ್ಸೂನ್​ ಒಂದೊಂದೇ ಪ್ರದೇಶವನ್ನಾಗಿ ಪ್ರವೇಶಿಸುತ್ತಿದೆ.

Published On - 12:33 pm, Wed, 9 June 21