Monsoon Rain: ದೇಶಾದ್ಯಂತ ಮುಂಗಾರು ಮಳೆ ಅಬ್ಬರ, ಹಿಮಾಚಲದಲ್ಲಿ 6 ಮಂದಿ ಸಾವು, ಹತ್ತು ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಗೆ ಆರು ಜನರು ಸಾವನ್ನಪ್ಪಿದ್ದಾರೆ. ಸುಮಾರು 10 ಜನರು ಗಾಯಗೊಂಡಿದ್ದಾರೆ. 303 ಪ್ರಾಣಿಗಳು ಸಾವನ್ನಪ್ಪಿವೆ. ಮಳೆಯ ಅನಾಹುತದಿಂದ ಇದುವರೆಗೂ ಸುಮಾರು 3 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ದೇಶಾದ್ಯಂತ ಮುಂಗಾರು ಮಳೆಯ (Monsoon Rains) ಅಬ್ಬರ ಜೋರಾಗಿದೆ. ಉತ್ತರದಿಂದ ದಕ್ಷಿಣದವರೆಗೂ ಮಾನ್ಸೂನ್ ಅಬ್ಬರಿಸುತ್ತಿದೆ. 1961ರ ನಂತರ ಮೊದಲ ಬಾರಿಗೆ ಒಂದೇ ದಿನ ದೆಹಲಿ ಮತ್ತು ಮುಂಬೈ ಎರಡು ನಗರಗಳಿಗೂ ಮುಂಗಾರು ಅಪ್ಪಳಿಸಿದೆ. ಮುಂದಿನ ಎರಡು ದಿನಗಳಲ್ಲಿ ಎರಡು ನಗರಗಳಲ್ಲಿ ಭಾರೀ ಬೀಳುವ ಮನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ. ನಿನ್ನೆ ಮಾನ್ಸೂನ್ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ-ಎನ್‌ಸಿಆರ್ ಮತ್ತು ಹರಿಯಾಣದ ಹೆಚ್ಚಿನ ಭಾಗಗಳನ್ನು ಆವರಿಸಿತ್ತು. ಇಂದು ಗುಜರಾತ್, ಹರಿಯಾಣ ಮತ್ತು ಪಂಜಾಬ್‌ನ ಕೆಲವು ಭಾಗಗಳಲ್ಲಿ ಆವರಿಸಿದ್ದು ದೇಶದ ಬಹುತೇಕ ಭಾಗಗಳಲ್ಲಿ ಮಾನ್ಸೂನ್ ಈಗ ಆವರಿಸಿದೆ. ನಿಗದಿತ ಸಮಯಕ್ಕಿಂತ ಎರಡು ದಿನಗಳ ಮೊದಲು ದೆಹಲಿಯನ್ನು ಮಾನ್ಸೂನ್ ಅಪ್ಪಳಿಸಿದೆ. ಆದರೆ ಮುಂಬೈಗೆ ಎರಡು ವಾರಗಳ ತಡವಾಗಿ ಪ್ರವೇಶಿಸಿದೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಗೆ ಆರು ಜನರು ಸಾವನ್ನಪ್ಪಿದ್ದಾರೆ. ಸುಮಾರು 10 ಜನರು ಗಾಯಗೊಂಡಿದ್ದಾರೆ. 303 ಪ್ರಾಣಿಗಳು ಸಾವನ್ನಪ್ಪಿವೆ. ಮಳೆಯ ಅನಾಹುತದಿಂದ ಇದುವರೆಗೂ ಸುಮಾರು 3 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಒಳಗೊಂಡಂತೆ 124 ರಸ್ತೆಗಳು ಹಾನಿಗೊಳಗಾಗಿವೆ. ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತದಿಂದಾಗಿ ಮನಾಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ.
ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶವೊಂದರಲ್ಲೇ ಒಟ್ಟು 301 ರಸ್ತೆಗಳನ್ನು ಮುಚ್ಚಲಾಗಿದ್ದು, 140 ವಿದ್ಯುತ್ ಪರಿವರ್ತಕಗಳು ಸ್ಥಗಿತಗೊಂಡಿವೆ. ಜಮ್ಮು ಮತ್ತು ಕಾಶ್ಮೀರದಾಧ್ಯಂತ ಭಾರೀ ಮಳೆ ಸುರಿಯುತ್ತಿದೆ. 10ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ಮುಚ್ಚಲು ರಾಂಬನ್ ಜಿಲ್ಲಾಡಳಿತ ಆದೇಶಿಸಿದೆ. ಭೂಕುಸಿತದಿಂದ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಹಲವು ಟ್ರಕ್‌ಗಳು ಸಿಲುಕಿಕೊಂಡಿವೆ. 250-ಕಿಮೀ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ, ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯ ನಡುವೆ ಬಹು ಭೂಕುಸಿತದಿಂದಾಗಿ ನಿರ್ಬಂಧಿಸಲಾಗಿದೆ.
ಇನ್ನು ಮಹಾರಾಷ್ಟ್ರದ ಭಿವಂಡಿಯಲ್ಲಿ ಭಾರೀ ಮಳೆಗೆ ರಸ್ತೆ , ಬಸ್ ಸ್ಟಾಂಡ್ಗಳು ಜಲಾವೃತವಾಗಿದೆ. ಮುಂಬೈನಲ್ಲಿ ಸಾಧಾರಣ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಮುಂಬೈನ ಘಾಟ್ಕೋಪರ್ ಪೂರ್ವ ಪ್ರದೇಶದಲ್ಲಿ 24 ಗಂಟೆಗಳಲ್ಲಿ ಎರಡನೇ ಮನೆ ಕುಸಿದ ಘಟನೆ ವರದಿಯಾಗಿದೆ. ಘಾಟ್ಕೋಪರ್ ಪೂರ್ವದ ರಮಾಬಾಯಿ ಅಂಬೇಡ್ಕರ್ ಕಾಲೋನಿಯಲ್ಲಿ ಇಂದು ಮೊದಲ ಮಹಡಿಯ ಒಂದು ಭಾಗ ಕುಸಿದು ನಾಲ್ವರು ಗಾಯಗೊಂಡಿದ್ದಾರೆ. ನಿರಂತರ ಮಳೆಯಿಂದಾಗಿ ಥಾಣೆ ಪಶ್ಚಿಮದಲ್ಲಿ 40 ಅಡಿ ಉದ್ದದ ಗೋಡೆ ಕುಸಿದಿದೆ. ಆದ್ರೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಮುಂದಿನ 24 ಗಂಟೆಗಳಲ್ಲಿ ಒಡಿಶಾದ ಹಲವು ಜಿಲ್ಲೆಗಳಿಗೆ ಹೆಚ್ಚು ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ.
ಇನ್ನು ಉತ್ತರಖಂಡದಲ್ಲೂ ಮುಂಗಾರು ಮಳೆಯ ಎಫೆಕ್ಟ್ ಹೆಚ್ಚಿದ್ದು, ಚಾರ್ ಧಾಮ್ ಯಾತ್ರೆ ಕೈಗೊಳ್ಳುವವರಿಗೆ ಎಚ್ಚರಿಕೆ ನೀಡಲಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾನಿ ಕಂಟ್ರೋಲ್ ರೂಂಗೆ ಭೇಟಿ ನೀಡಿ ಚಾರ್ ಧಾನ್ ಯಾತ್ರಿಗಳ ಪರಿಸ್ಥಿತಿ ಅವಲೋಕಿಸಿದ್ದಾರೆ. ಯಾತ್ರಿಗಳಿಗೆ ಜಾಗರೂಕರಾಗಿರುವಂತೆ ಸೂಚಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ