ದೆಹಲಿ: ರಾಜ್ಯಸಭೆಯಲ್ಲಿ (Rajya sabha) ಸಭಾಪತಿ ಪೀಠದ ಎದುರು ನಾಮಫಲಕ ಪ್ರದರ್ಶನ ಮಾಡಿದ್ದಕ್ಕೆ 19 ಸದಸ್ಯರನ್ನು ಒಂದು ವಾರ ಕಲಾಪದಿಂದ ಅಮಾನತು ಮಾಡಲಾಗಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ (TMC) ಸದಸ್ಯೆ ಸುಶ್ಮಿತಾ ದೇವ್, ಡಾ ಶಂತನು ಸೇನ್, ಡೋಲಾ ಸೇನ್, ಡಿಎಂಕೆ ಸದಸ್ಯೆ ಕನಿಮೋಳಿ ಸೇರಿದಂತೆ 19 ಸದಸ್ಯರನ್ನು ಅಮಾನತು ಮಾಡಲಾಗಿದೆ. ಜಿಎಸ್‌ಟಿ (GST), ಬೆಲೆ ಏರಿಕೆ ವಿರುದ್ಧ ಇವರು ಪ್ಲೆಕಾರ್ಡ್ ಹಿಡಿದು ಸದನದ ಬಾವಿಗಿಳಿದು ಘೋಷಣೆ ಕೂಗಿದ್ದಾರೆ. ಈ ರೀತಿ ಸದನದ ಬಾವಿಗಿಳಿದಿರುವುದು ದುರ್ನಡತೆ ಎಂದು ಹೇಳಿ ಇವರನ್ನು ಒಂದು ವಾರ ಕಲಾಪದಿಂದ ಅಮಾನತು ಮಾಡಲಾಗಿದೆ . ಸೋಮವಾರ ಇದೇ ರೀತಿ ಪ್ಲೆಕಾರ್ಡ್ ಹಿಡಿದು ಘೋಷಣೆ ಕೂಗಿದ ನಾಲ್ವರು ಸಂಸದರನ್ನು ಲೋಕಸಭೆಯ ಕಲಾಪದಿಂದ ಅಮಾನತು ಮಾಡಲಾಗಿತ್ತು. ಇದಕ್ಕಿಂತ ಮುಂಚೆ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರತಿಪಕ್ಷಗಳು ಜಿಎಸ್‌ಟಿ ರೋಲ್‌ಬ್ಯಾಕ್ ಎಂದು ಘೋಷಣೆ ಕೂಗಿವೆ. ಉಪಸಭಾಪತಿಯವರು ದಯವಿಟ್ಟು ನಿಮ್ಮ ಸ್ಥಾನಗಳಿಗೆ ಹಿಂತಿರುಗಿ. ನೀವು ಸದನವನ್ನು ಕಾರ್ಯರೂಪಕ್ಕೆ ತರಲು ಬಿಡುತ್ತಿಲ್ಲ ಎಂಬುದನ್ನು ಇಡೀ ರಾಷ್ಟ್ರವೇ ನೋಡುತ್ತಿದೆ ಎಂದು ಹೇಳಿದ್ದಾರೆ.
‘ಕಾರ್ಗಿಲ್ ವಿಜಯ್ ದಿವಸ್’ನಂದು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ 11 ಗಂಟೆಗೆ ಸದನದ ಕಲಾಪ ಪ್ರಾರಂಭವಾಯಿತು. ಜಿಎಸ್‌ಟಿ ದರ ಏರಿಕೆ, ಹಣದುಬ್ಬರ, ಕೇಂದ್ರೀಯ ಸಂಸ್ಥೆಗಳ ದುರುಪಯೋಗ ಮತ್ತು ಇತರ ವಿಷಯಗಳ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ನಿಯಮ 267 ರ ಅಡಿಯಲ್ಲಿ ವ್ಯವಹಾರವನ್ನು ಸ್ಥಗಿತಗೊಳಿಸುವಂತೆ ವಿರೋಧ ಪಕ್ಷದ ಸದಸ್ಯರು ನೋಟಿಸ್ ನೀಡಿದ್ದಾರೆ.
ಜುಲೈ 21 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ . ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಮೊದಲಾದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ. ಕಳೆದ ಹಲವು ದಿನಗಳಿಂದ ಬೆಲೆ ಏರಿಕೆ ಮತ್ತು ಜಿಎಸ್‌ಟಿ ಹೆಚ್ಚಳದಂತಹ ವಿಷಯಗಳ ಕುರಿತು ತುರ್ತು ಚರ್ಚೆಗೆ ಪ್ರತಿಪಕ್ಷಗಳ ಸಂಸದರು ಒತ್ತಾಯಿಸುತ್ತಿದ್ದು, ಸದನ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಪ್ರತಿಭಟನಾ ನಿರತ ಸಂಸದರು ಇಂಗ್ಲಿಷ್, ಹಿಂದಿ, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಘೋಷಣೆಗಳನ್ನು ಕೂಗಿದರು.
ಮೋದಿ ಜಿ ಜವಾಬ್ ದೋ, ‘ಜಿಎಸ್‌ಟಿ ವಾಪಾಸ್ ಲೊ’, ‘ಗುಜರಾತ್ ಸಿಎಂ ರಿಸೈನ್ ಕರೋ’ ಎಂಬುದಾಗಿ ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿದರು.
ಶಿಸ್ತು ಕ್ರಮ ಎದುರಿಸುತ್ತಿರುವ ಎಲ್ಲ 19 ಸಂಸದರ ಪಟ್ಟಿ ಇಲ್ಲಿದೆ.
1. ಸುಶ್ಮಿತಾ ದೇವ್ (ತೃಣಮೂಲ ಕಾಂಗ್ರೆಸ್)
2. ಮೌಸಮ್ ನೂರ್ (ತೃಣಮೂಲ ಕಾಂಗ್ರೆಸ್)
3. ಶಾಂತಾ ಛೆಟ್ರಿ (ತೃಣಮೂಲ ಕಾಂಗ್ರೆಸ್)
4. ಡೋಲಾ ಸೇನ್ (ತೃಣಮೂಲ ಕಾಂಗ್ರೆಸ್)
5. ಶಂತನು ಸೇನ್ (ತೃಣಮೂಲ ಕಾಂಗ್ರೆಸ್)
6. ಅಬಿರ್ ರಂಜನ್ ಬಿಸ್ವಾಸ್ (ತೃಣಮೂಲ ಕಾಂಗ್ರೆಸ್)
7. ನದಿಮುಲ್ ಹಕ್ (ತೃಣಮೂಲ ಕಾಂಗ್ರೆಸ್)
8. ಕನಿಮೊಳಿ ಎನ್ವಿಎನ್ ಸೋಮು (ಡಿಎಂಕೆ)
9. ಎಂಎಂ ಅಬ್ದುಲ್ಲಾ (ಡಿಎಂಕೆ)
10. ಆರ್ ಗಿರಿರಾಜನ್ (ಡಿಎಂಕೆ)
11. ಎಸ್ ಕಲ್ಯಾಣಸುಂದರಂ (ಡಿಎಂಕೆ)
12. ಎಂ ಷಣ್ಮುಗಂ (ಡಿಎಂಕೆ)
13. ಎನ್.ಆರ್. ಜನಾರ್ಥನನ್ ಇಲಾಂಗೊ (ಡಿಎಂಕೆ)
14. ಬಿ ಲಿಂಗಯ್ಯ ಯಾದವ್ (ಟಿಆರ್‌ಎಸ್)
15. ವಡ್ಡಿರಾಜು ರವಿಚಂದ್ರ (ಟಿಆರ್‌ಎಸ್)
16. ಡಿ ದಾಮೋದರ್ ರಾವ್ (ಟಿಆರ್‌ಎಸ್)
17. ವಿ ಶಿವದಾಸನ್ (ಸಿಪಿಎಂ)
18. ಎಎ ರಹೀಮ್ ಖಾನ್ (ಸಿಪಿಎಂ)
19. ಪಿ ಸಂತೋಷ್ ಕುಮಾರ್ (ಸಿಪಿಐ)
Published On - 2:46 pm, Tue, 26 July 22