Monsoon Session: ಅಸಂಸದೀಯ ಪದಗಳ ಘೋಷಣೆ ಬೆನ್ನಲ್ಲೇ ಸಂಸತ್​​ನಲ್ಲಿ ಕರಪತ್ರ, ಫಲಕಗಳಿಗೆ ನಿಷೇಧ

| Updated By: ಸುಷ್ಮಾ ಚಕ್ರೆ

Updated on: Jul 16, 2022 | 3:16 PM

ಲೋಕಸಭೆಯ ಸೆಕ್ರೆಟರಿಯೇಟ್ ಹೊರಡಿಸಿದ ಸೂಚನೆಯಲ್ಲಿ, ಯಾವುದೇ ಸಾಹಿತ್ಯ, ಪ್ರಶ್ನಾವಳಿ, ಕರಪತ್ರಗಳು, ಪತ್ರಿಕಾ ಟಿಪ್ಪಣಿಗಳು, ಕರಪತ್ರಗಳು ಅಥವಾ ಯಾವುದೇ ವಿಷಯವನ್ನು ಸ್ಪೀಕರ್ ಅವರ ಪೂರ್ವಾನುಮತಿಯಿಲ್ಲದೆ ಹಂಚಬಾರದು.

Monsoon Session: ಅಸಂಸದೀಯ ಪದಗಳ ಘೋಷಣೆ ಬೆನ್ನಲ್ಲೇ ಸಂಸತ್​​ನಲ್ಲಿ ಕರಪತ್ರ, ಫಲಕಗಳಿಗೆ ನಿಷೇಧ
ಸಂಸತ್​ ಭವನ
Image Credit source: India.com
Follow us on

ನವದೆಹಲಿ: ಸಂಸತ್ ಅಧಿವೇಶನದಲ್ಲಿ ಬಳಸಲು ನಿಷೇಧ ಹೇರಿರುವ ‘ಅಸಂಸದೀಯ’ ಪದಗಳ ವಿವಾದಾತ್ಮಕ ಪಟ್ಟಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಸಂಸದೀಯ ಪದಗಳು (Unparliamentary Words) ಎಂದು ಪಟ್ಟಿ ಮಾಡಲಾದ ಜುಮ್ಲಾಜೀವಿ, ಬಾಲ ಬುದ್ಧಿ, ಕೊವಿಡ್ ಹರಡುವವ, ನಾಚಿಕೆಗೇಡು, ದುರ್ಬಳಕೆ, ಭ್ರಷ್ಟ, ನಾಟಕ, ಆಷಾಢಭೂತಿ, ಅಸಮರ್ಥ, ಶಕುನಿ, ಸರ್ವಾಧಿಕಾರಿ, ರಕ್ತಪಾತ, ಮೊಸಳೆಕಣ್ಣೀರು, ಚೇಲಾ, ಚಮಚಾಗಿರಿ ಮುಂತಾದ ಪದಗಳನ್ನು ಸಂಸತ್​​ ಅಧಿವೇಶನದಲ್ಲಿ (Parliament Session) ಬಳಸುವಂತಿಲ್ಲ ಎಂದು ಆದೇಶಿಸಲಾಗಿತ್ತು. ಅದರ ಬೆನ್ನಲ್ಲೇ ಮುಂಗಾರು ಅಧಿವೇಶನದಲ್ಲಿ ಸದನದಲ್ಲಿ ಯಾವುದೇ ಕರಪತ್ರಗಳು ಅಥವಾ ಫಲಕಗಳನ್ನು ಹಂಚುವುದನ್ನು ನಿಷೇಧಿಸಿ ಲೋಕಸಭೆಯ ಸಚಿವಾಲಯ ಮತ್ತೊಂದು ಸೂಚನೆ ನೀಡಿದೆ.

ಲೋಕಸಭೆಯ ಸೆಕ್ರೆಟರಿಯೇಟ್ ಹೊರಡಿಸಿದ ಸೂಚನೆಯಲ್ಲಿ, ಯಾವುದೇ ಸಾಹಿತ್ಯ, ಪ್ರಶ್ನಾವಳಿ, ಕರಪತ್ರಗಳು, ಪತ್ರಿಕಾ ಟಿಪ್ಪಣಿಗಳು, ಕರಪತ್ರಗಳು ಅಥವಾ ಯಾವುದೇ ವಿಷಯವನ್ನು ಸ್ಪೀಕರ್ ಅವರ ಪೂರ್ವಾನುಮತಿಯಿಲ್ಲದೆ ಹಂಚಬಾರದು. ಸಂಸತ್ ಭವನದ ಸಂಕೀರ್ಣದೊಳಗೆ ಫಲಕಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ಯಾವುದೇ ಪದವನ್ನು ನಿಷೇಧಿಸಿಲ್ಲ, ಅಸಂಸದೀಯ ಪದಗಳ ಪಟ್ಟಿ ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ ಲೋಕಸಭಾ ಸ್ಪೀಕರ್​​

ಜುಲೈ 18ರಿಂದ ಪ್ರಾರಂಭವಾಗುವ ಮುಂಗಾರು ಅಧಿವೇಶನದ ಮೊದಲು ಸಂಸತ್ತಿನ ಉಭಯ ಸದನಗಳಲ್ಲಿ ಅಸಂಸದೀಯವೆಂದು ಪರಿಗಣಿಸಲಾಗುವ ಪದಗಳ ಪಟ್ಟಿಯನ್ನು ಹೊಂದಿರುವ ಕಿರುಪುಸ್ತಕವನ್ನು ಲೋಕಸಭೆಯ ಸೆಕ್ರೆಟರಿಯೇಟ್ ಬಿಡುಗಡೆ ಮಾಡುವ ಕುರಿತು ವಿರೋಧ ಪಕ್ಷಗಳ ವಿರೋಧ ವ್ಯಕ್ತವಾಗಿತ್ತು. ಅದರ ನಡುವೆ ಹೊಸ ಸೂಚನೆಯನ್ನು ಹೊರಡಿಸಲಾಗಿದ್ದು, ಸಂಸತ್ ಭವನದ ಕಾಂಪ್ಲೆಕ್ಸ್​ನೊಳಗೆ ಪಾಂಪ್ಲೆಟ್, ಫಲಕಗಳನ್ನು ಬಳಸದಿರಲು ಸೂಚಿಸಲಾಗಿದೆ.

ಈ ಹಿಂದೆಯೂ ಸಹ ವಿರೋಧ ಪಕ್ಷದ ಸದಸ್ಯರು ತಮ್ಮ ಆಸನಗಳಿಂದ ಭಿತ್ತಿ ಪತ್ರಗಳನ್ನು ಹಿಡಿದು ಬಾವಿಯೊಳಗೆ ನಿಂತಿದ್ದು, ಉಭಯ ಸದನಗಳಲ್ಲಿ ಸ್ಪೀಕರ್ ಕೆಂಗಣ್ಣಿಗೆ ಗುರಿಯಾಗಿದ್ದ ಹಲವಾರು ನಿದರ್ಶನಗಳಿವೆ. ಇತ್ತೀಚೆಗಿನ ಅಧಿವೇಶನಗಳಲ್ಲಿ ಸಂಸತ್ತಿನ ಸದಸ್ಯರು ಭಿತ್ತಿಪತ್ರಗಳನ್ನು ಹಿಡಿದುಕೊಂಡು, ಫಲಕಗಳನ್ನು ಮತ್ತು ಕರಪತ್ರಗಳನ್ನು ಹರಿದು ಪೀಠದ ಮೇಲೆ ಎಸೆದ ದೃಶ್ಯಗಳು ರಾಜ್ಯಸಭೆಯಲ್ಲಿ ಕಂಡುಬಂದಿತ್ತು. ಈ ವರ್ತನೆ ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಚರ್ಚೆಗೆ ಒಳಗಾಗಿತ್ತು.

ಇದನ್ನೂ ಓದಿ: Unparliamentary Words: ಲೋಕಸಭೆ ಸಚಿವಾಲಯದಿಂದ ಅಸಂಸದೀಯ ಪದಗಳ ಪಟ್ಟಿ ಬಿಡುಗಡೆ; ಈ ಪದಗಳನ್ನ ಬಳಕೆ ಮಾಡಿದರೆ ಕಲಾಪದಿಂದ ಹೊರಗೆ

ಇದೀಗ ಸಂಸತ್​ ಆವರಣದೊಳಗೆ ಭಿತ್ತಿಪತ್ರ, ಫಲಕಗಳನ್ನು ಬಳಸದಂತೆ ಸೂಚನೆ ನೀಡಿರುವುದನ್ನು ಕಾಂಗ್ರೆಸ್ ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಸೇರಿದಂತೆ ಹಲವಾರು ಸಂಸದರು ಟೀಕಿಸಿದ್ದಾರೆ. ಇಂತಹ ಸುತ್ತೋಲೆಯನ್ನು ಹೊರತರುತ್ತಿರುವುದು ಇದೇ ಮೊದಲಲ್ಲ ಎಂದು ತೋರಿಸಲು ಹಲವಾರು ದಾಖಲೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಲಾಗಿದೆ. ಯುಪಿಎ ಆಡಳಿತದಲ್ಲಿ ಹೊರಡಿಸಲಾದ ಇಂತಹ ಹಲವು ಸುತ್ತೋಲೆಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.

Published On - 2:37 pm, Sat, 16 July 22