ವಾಷಿಂಗ್ಟನ್: ಗುಜರಾತ್‌ನ ಮೊರ್ಬಿ (Morbi Tragedy) ನಗರದಲ್ಲಿ ಕೇಬಲ್ ಸೇತುವೆ ಕುಸಿದು 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ (Joe Biden) ತೀವ್ರ ಸಂತಾಪ ಸೂಚಿಸಿದ್ದಾರೆ. 1 ಶತಮಾನಕ್ಕೂ ಹೆಚ್ಚು ಹಳೆಯದಾದ ಕೇಬಲ್ ಸೇತುವೆಯನ್ನು ಇತ್ತೀಚೆಗೆ ದುರಸ್ತಿ ಮಾಡಿ, ನವೀಕರಣಗೊಳಿಸಲಾಗಿತ್ತು. ಕಳೆದ 6 ದಿನಗಳ ಹಿಂದೆ ಈ ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಗಿತ್ತು. ಭಾನುವಾರ ಸಂಜೆ ಸೇತುವೆಯನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಈ ವೇಳೆ ಭಾರ ತಾಳಲಾರದೆ ಸೇತುವೆ ಕುಸಿದುಬಿದ್ದಿತ್ತು. ನದಿಯಲ್ಲಿ ಬಿದ್ದವರಿಗಾಗಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಲೇ ಇದೆ.
“ನಾವು ಹಾಗೂ ನಮ್ಮ ಮನಸು ಭಾರತದೊಂದಿಗಿದೆ. ಸೇತುವೆ ಕುಸಿತದ ಸಮಯದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಜಿಲ್ ಮತ್ತು ನಾನು ನಮ್ಮ ಆಳವಾದ ಸಂತಾಪವನ್ನು ಕಳುಹಿಸುತ್ತೇವೆ. ಹಲವಾರು ಜೀವಗಳನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಗುಜರಾತ್ ಜನರೊಂದಿಗೆ ನಾವಿದ್ದೇವೆ” ಎಂದು ಜೋ ಬೈಡೆನ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಗುಜರಾತ್: ಮೊರ್ಬಿ ನದಿ ತೂಗುಸೇತುವೆ ಮೇಲೆ ಕೆಲ ಯುವಕರು ನಡೆಸಿದ ಹುಚ್ಚಾಟ ಉಳಿದವರ ಪಾಲಿಗೆ ಮುಳುವಾಯಿತೇ?
“ಅಮೆರಿಕಾ ಮತ್ತು ಭಾರತದ ಪ್ರಜೆಗಳ ನಡುವೆ ಉತ್ತಮ ಬಾಂಧವ್ಯವಿದೆ. ಈ ಕಷ್ಟದ ಸಮಯದಲ್ಲಿ ನಾವು ಭಾರತೀಯ ಜನರೊಂದಿಗೆ ನಿಲ್ಲುತ್ತೇವೆ ಮತ್ತು ಅವರನ್ನು ಬೆಂಬಲಿಸುತ್ತೇವೆ” ಎಂದು ಜೋ ಬೈಡೆನ್ ಹೇಳಿದ್ದಾರೆ.
Jill and I send our deepest condolences to the families who lost loved ones during the bridge collapse in India, and join the people of Gujarat in mourning the loss of too many lives cut short. In this difficult hour, we will continue to stand with and support the Indian people.
— President Biden (@POTUS) October 31, 2022
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೃತರ ಪ್ರತಿ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. ಗುಜರಾತ್ ಸರ್ಕಾರ ಮೃತರ ಕುಟುಂಬಕ್ಕೆ 4 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದೆ.
ಇದನ್ನೂ ಓದಿ: Morbi Bridge Tragedy: ಮೊರ್ಬಿ ಸೇತುವೆ ಕುಸಿತ ದುರಂತದಲ್ಲಿ ಬಿಜೆಪಿ ಸಂಸದರ ಕುಟುಂಬದ 12 ಮಂದಿ ಸಾವು
ಗುಜರಾತ್‌ನ ಮೊರ್ಬಿಯಲ್ಲಿ ಅಕ್ಟೋಬರ್ 30 ಒಂದು ‘ಕರಾಳ ಭಾನುವಾರ’ವಾಗಿತ್ತು. ಪ್ರಸಿದ್ಧ ತೂಗು ಸೇತುವೆ ಮೇಲೆ ನಡೆಯಲು 17 ರೂ. ಕೊಟ್ಟು ಪಡೆದ ಪಾಸ್ ಅನೇಕರಿಗೆ ಅದು ಸಾವಿನ ಟಿಕೆಟ್ ಆಗಿತ್ತು. 15 ವರ್ಷಗಳ ಕಾಲ ಸೇತುವೆಯ ನಿರ್ವಹಣೆ ಮತ್ತು ಉಸ್ತುವಾರಿ ವಹಿಸಿಕೊಂಡ ಒರೆವಾ ಕಂಪನಿಯು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಶತಮಾನದಷ್ಟು ಹಳೆಯದಾದ, ಕೇವಲ 150ರಿಂದ 200 ಜನರ ಸಾಮರ್ಥ್ಯದ ಸೇತುವೆಯ ಮೇಲೆ ಹೋಗಲು ಬರೋಬ್ಬರಿ 650 ಜನರಿಗೆ ಟಿಕೆಟ್ ನೀಡಿತ್ತು. ವೀಕೆಂಡ್ ಆದ್ದರಿಂದ ಜನ ಕಿಕ್ಕಿರಿದು ಸೇರಿದ್ದರು. ಇದು ದುರಂತಕ್ಕೆ ಕಾರಣವಾಯಿತು ಎನ್ನಲಾಗಿದೆ.
ಗುಜರಾತ್‌ನ ಮೊರ್ಬಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒರೆವಾ ಪೊಲೀಸ್ ಅಧಿಕಾರಿಗಳು ಸೇತುವೆಯನ್ನು ನವೀಕರಿಸಿದ ಕಂಪನಿ, ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ 9 ಜನರನ್ನು ಬಂಧಿಸಿದ್ದಾರೆ.