ಮೊರ್ಬಿ ಸೇತುವೆ ಕುಸಿತ; ಗುಜರಾತ್​​ ಸಿಎಂ ರಾಜೀನಾಮೆಗೆ ಪಟ್ಟು ಹಿಡಿದ ಅರವಿಂದ್ ಕೇಜ್ರಿವಾಲ್

| Updated By: ಸುಷ್ಮಾ ಚಕ್ರೆ

Updated on: Nov 01, 2022 | 2:17 PM

ಮೊರ್ಬಿ ಸೇತುವೆ ದುರಂತವು ಭ್ರಷ್ಟಾಚಾರದ ಪರಿಣಾಮವಾಗಿದೆ. ಗಡಿಯಾರಗಳನ್ನು ತಯಾರಿಸುವ ಕಂಪನಿಗೆ ಸೇತುವೆಯ ಟೆಂಡರ್ ಅನ್ನು ಏಕೆ ನೀಡಲಾಯಿತು? ಇದರರ್ಥ ಅವರು ಬಿಜೆಪಿ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದರು ಎಂದರ್ಥ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಮೊರ್ಬಿ ಸೇತುವೆ ಕುಸಿತ; ಗುಜರಾತ್​​ ಸಿಎಂ ರಾಜೀನಾಮೆಗೆ ಪಟ್ಟು ಹಿಡಿದ ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Follow us on

ನವದೆಹಲಿ: 134 ಜನರ ಸಾವಿಗೆ ಕಾರಣವಾದ ಗುಜರಾತ್​ನ ಮೋರ್ಬಿ ಸೇತುವೆ (Morbi Bridge Tragedy) ದುರಂತದ ಕುರಿತು ಗುಜರಾತ್‌ನ ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದಿರುವ ಆಮ್ ಆದ್ಮಿ ಪಕ್ಷದ (AAP) ನಾಯಕ ಅರವಿಂದ್ ಕೇಜ್ರಿವಾಲ್ (Arvind Kejriwal), ಈ ಘಟನೆಯ ಹಿಂದೆ ದೊಡ್ಡ ಭ್ರಷ್ಟಾಚಾರವಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗೂ ಮೊದಲು ಗುಜರಾತ್‌ನ ರಾಜಕೀಯದಲ್ಲಿ ತಳವೂರಲು ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷ ಇದೀಗ ಮೊರ್ಬಿ ಸೇತುವೆ ದುರಂತದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೊರ್ಬಿ ಸೇತುವೆ ದುರಂತವು ಭ್ರಷ್ಟಾಚಾರದ ಪರಿಣಾಮವಾಗಿದೆ. ಗಡಿಯಾರಗಳನ್ನು ತಯಾರಿಸುವ ಕಂಪನಿಗೆ ಸೇತುವೆಯ ಟೆಂಡರ್ ಅನ್ನು ಏಕೆ ನೀಡಲಾಯಿತು? ಇದರರ್ಥ ಅವರು ಬಿಜೆಪಿ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದರು ಎಂದರ್ಥ. ಈ ಪ್ರಕರಣದ ಎಫ್‌ಐಆರ್‌ನಲ್ಲಿ ಕಂಪನಿ ಅಥವಾ ಅದರ ಮಾಲೀಕರನ್ನು ಉಲ್ಲೇಖಿಸಲಾಗಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: Morbi bridge collapse: ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ಪ್ರಧಾನಿ ಮೋದಿ

ಆ ಕಂಪನಿಯ ಮಾಲೀಕರಿಂದ ಬಿಜೆಪಿ ಪಕ್ಷವು ಭಾರಿ ದೇಣಿಗೆ ಪಡೆದಿದೆ ಎಂಬ ಆರೋಪಗಳಿವೆ. ಅಂತಹ ಆರೋಪಗಳ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಭೇಟಿಗೂ ಮುನ್ನ ಸಿವಿಲ್ ಆಸ್ಪತ್ರೆಯಲ್ಲಿ ರಾತ್ರಿಯಿಡೀ ಸ್ವಚ್ಛತಾ ಅಭಿಯಾನ ನಡೆಸಿರುವುದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಎಎಪಿಯಿಂದ ಟೀಕೆಗೆ ಗುರಿಯಾಗಿದೆ.

ಗುಜರಾತ್​​ನ ಮೊರ್ಬಿಯಲ್ಲಿ ಭಾನುವಾರ ಸಂಜೆ ಕೇಬಲ್ ಸೇತುವೆ ಕುಸಿತವಾಗಿ 134ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮೊರ್ಬಿಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿದ್ದಾರೆ. ಪ್ರಧಾನಿ ಮೋದಿ ಇಂದು ಮಧ್ಯಾಹ್ನ ಮೊರ್ಬಿಗೆ ಭೇಟಿ ನೀಡಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ. ಗುಜರಾತ್ ರಾಜಧಾನಿ ಗಾಂಧಿನಗರದಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಮೊರ್ಬಿಯಲ್ಲಿ ಭಾನುವಾರ ನಡೆದ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದುವರೆಗೆ 170ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: Morbi Tragedy: ಗುಜರಾತ್​​​ ಕೇಬಲ್ ಸೇತುವೆ ದುರಂತ; ಮೊರ್ಬಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೃತರ ಪ್ರತಿ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. ಗುಜರಾತ್ ಸರ್ಕಾರ ಮೃತರ ಕುಟುಂಬಕ್ಕೆ 4 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ