ಬಹುತೇಕ ಸೇನಾ ಸಿಬ್ಬಂದಿ ಅತಿಯಾದ ಒತ್ತಡ ಎದುರಿಸುತ್ತಿದ್ದಾರೆ.. ಭಾರತೀಯ ಸೇನೆ ಹೇಳೋದೇನು?
ಅರ್ಧಕ್ಕಿಂತ ಹೆಚ್ಚು ಪ್ರಮಾಣದ ಸೇನಾ ಸಿಬ್ಬಂದಿಗಳು ಅತಿಯಾದ ಒತ್ತಡದಲ್ಲಿ ಇರುವ ಬಗ್ಗೆ ಯುನೈಟೆಡ್ ಸರ್ವೀಸಸ್ ಎಂಬ ಭಾರತೀಯ ಸಂಸ್ಥೆ (USI) ಅಧ್ಯಯನ ವರದಿ ಮಾಡಿದೆ.
ದೆಹಲಿ: ಅರ್ಧಕ್ಕಿಂತ ಹೆಚ್ಚು ಪ್ರಮಾಣದ ಸೇನಾ ಸಿಬ್ಬಂದಿ ಅತಿಯಾದ ಒತ್ತಡದಲ್ಲಿ ಇರುವ ಬಗ್ಗೆ ಅಧ್ಯಯನವೊಂದು ವರದಿ ಮಾಡಿದೆ. ಪ್ರತಿ ವರ್ಷ ಆತ್ಮಹತ್ಯೆ, ಕೊಲೆ ಹಾಗೂ ಅಹಿತಕರ ಘಟನೆಗಳಿಂದಾಗಿ ಹೆಚ್ಚಿನ ಯೋಧರನ್ನು ಕಳೆದುಕೊಳ್ಳುತ್ತಿರುವ ಕಾರಣದಿಂದ ಸೇನಾ ಸಿಬ್ಬಂದಿ ಹೆಚ್ಚು ಒತ್ತಡಕ್ಕೆ ಒಳಗಾಗಿರುವ ಬಗ್ಗೆ ಅಧ್ಯಯನ ಮಾಹಿತಿ ನೀಡಿದೆ.
ಗಡಿಗಳಲ್ಲಿ ವಿರೋಧಿಗಳ ದಾಳಿ, ಒಳನಾಡುಗಳಲ್ಲಿ ಭಯೋತ್ಪಾದಕ ದಾಳಿಗಿಂತ ಹೆಚ್ಚಾಗಿ ಆತ್ಮಹತ್ಯೆ, ಕೊಲೆ ಇನ್ನಿತರ ಅಹಿತಕರ ಘಟನೆಗಳು ಯೋಧರನ್ನು ಮತ್ತಷ್ಟು ಒತ್ತಡಕ್ಕೊಳಗಾಗುವಂತೆ ಮಾಡುತ್ತದೆ ಎಂದು ಭಾರತೀಯ ಯುನೈಟೆಡ್ ಸರ್ವೀಸಸ್ ಸಂಸ್ಥೆ (USI) ತಿಳಿಸಿದೆ.
ಆದರೆ, ಭಾರತೀಯ ಭೂಸೇನೆ ಈ ವರದಿಯನ್ನು ತಿರಸ್ಕರಿಸಿದೆ. ವರದಿಗೆ ಪರಿಗಣಿಸಿರುವ ಮಾದರಿ ಪ್ರಮಾಣ ಅತಿ ಕಡಿಮೆಯಾಗಿದೆ ಹಾಗೂ ಕಡಿಮೆ ಸಂಖ್ಯೆಯ ಮಾದರಿಗಳ ಅನ್ವಯ ಇಷ್ಟು ದೊಡ್ಡ ನಿರ್ಣಯಕ್ಕೆ ಬರುವುದು ಸಾಧ್ಯವಿಲ್ಲ ಎಂದು ಭೂಸೇನೆ ಸ್ಪಷ್ಟಪಡಿಸಿದೆ.
ಈ ಅಧ್ಯಯನವನ್ನು ವೈಯಕ್ತಿಕವಾಗಿ ನಡೆಸಲಾಗಿದೆ. ಸುಮಾರು 400 ಸೈನಿಕರನ್ನು ಅಧ್ಯಯನ ಮಾದರಿಯಾಗಿ ಪರಿಗಣಿಸಿದ್ದಾರೆ. ಅಧ್ಯಯನ ವಿಧಾನದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ವರದಿ ತರ್ಕಬದ್ಧವಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪ್ರತಿವರ್ಷ ಸರಾಸರಿ 100ರಷ್ಟು ಸೈನಿಕರು ಆತ್ಮಹತ್ಯೆ ನಡೆಸುವುದು ಸಾಮಾನ್ಯ ಎಂಬಂತಾಗಿದೆ. 2010ರ ಬಳಿಕ ಇದುವರೆಗೆ ಸುಮಾರು 950 ಯೋದರನ್ನು ಭಾರತೀಯ ಸೈನ್ಯ ಕೇವಲ ಈ ಕಾರಣದಿಂದ ಕಳೆದುಕೊಂಡಿದೆ.
ಗಡಿಭಾಗದಲ್ಲಿ ಸೈನಿಕರ ಸುದೀರ್ಘ ನಿಯೋಜನೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ CI/CT ಕಾರ್ಯಾಚರಣೆಗೆ ಯೋಧರ ನಿಯೋಜನೆ ಇತ್ಯಾದಿಗಳು ಸೇನಾ ಸಿಬ್ಬಂದಿಗಳ ಮಾನಸಿಕ ಆರೋಗ್ಯ, ದೈಹಿಕ ಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಸೂಚಿಸಿದೆ.
ಅಂಥಾ ಪ್ರದೇಶಗಳಲ್ಲಿ ನಿಯೋಜನೆಗೊಂಡ ಸೈನಿಕರು, ಮನೆಯವರ ಬಗ್ಗೆ ಕಾಳಜಿ ತೋರಲಾಗದೆ, ಮನೆಯ ಆಸ್ತಿ, ಆರ್ಥಿಕತೆ, ವೈವಾಹಿಕ ಜೀವನದ ಸಮಸ್ಯೆಗಳಿಂದಲೂ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಅಧ್ಯಯನ ವಿವರಣೆ ನೀಡಿದೆ.
ಪ್ಯಾಂಗೋಂಗ್ ಸರೋವರಕ್ಕೆ ಶೀಘ್ರದಲ್ಲೇ ಇಳಿಯಲಿವೆ ಭಾರತೀಯ ಸೇನೆಯ ಅತ್ಯುತ್ತಮ 12 ಗಸ್ತು ಬೋಟ್ಗಳು; ಚೀನಾಕ್ಕೆ ಸೆಡ್ಡು
Published On - 6:07 pm, Sat, 9 January 21