ಹೈದರಾಬಾದ್: ಊಟದಲ್ಲಿ ಮತ್ತು ಬರುವ ಔಷಧಿ ಸೇರಿಸಿ ತಾಯಿ ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಇಂದು ಹೈದರಾಬಾದಿನ ಚಂದಾನಗರದಲ್ಲಿ ನಡೆದಿದೆ. ಬಾಡಿಗೆ ಮನೆಯ ಯಜಮಾನ ಹಾಗೂ ಆತನ ಸಂಗಡಿಗರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಪಾಪಿರೆಡ್ಡಿ ಕಾಲೋನಿಯ ಸಂದಯ್ಯನಗರದ ಬಾಡಿಗೆ ಮನೆಯಲ್ಲಿ ಸಂತ್ರಸ್ಥ ಮಹಿಳೆ ಹಾಗೂ ಆಕೆಯ ಮಕ್ಕಳಿಬ್ಬರು ವಾಸವಾಗಿದ್ದರು. ಈ ಮೂವರಿಗೆ ಬಾಡಿಗೆ ಮನೆಯ ಯಜಮಾನ ಹಾಗೂ ಆತನ ಸಂಗಡಿಗರು ಇಂದು ಊಟದಲ್ಲಿ ಮತ್ತು ಬರುವ ಔಷಧಿಯನ್ನು ಸೇರಿಸಿದ್ದಾರೆ. ನಂತರ ನಿದ್ದೆ ಬಂದು ಮಲಗಿದ ತಾಯಿ ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸದ್ಯ ತಾಯಿ ಮತ್ತು ಮಗಳನ್ನು ಉಸ್ಮಾನಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗನನ್ನು ನಿಲೋಫರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜೊತೆಗೆ, ಚಂದಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನು ಈ ಆರೋಪವನ್ನು ಮನೆಯ ಯಜಮಾನ ಹಾಗೂ ಆತನ ಸಂಗಡಿಗರು ತಳ್ಳಿಹಾಕಿದ್ದಾರೆ. ಹೀಗಾಗಿ, ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Published On - 7:10 pm, Wed, 22 July 20