ಚೆನ್ನೈ: ಮೊಬೈಲ್ ಚಾರ್ಜ್ ಮಾಡುವಾಗ ಸ್ಫೋಟಗೊಂಡ ಪರಿಣಾಮ ಮಹಿಳೆ ಮತ್ತು ಆಕೆಯ ಇಬ್ಬರು ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ.
ತಮಿಳುನಾಡಿನ ಕರೂರು ಪಟ್ಟಣದ ಸಮೀಪದ ರಾಯನೂರು ಎನ್ನುವ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮುತ್ತುಲಕ್ಷ್ಮಿ ಎಂಬ ಟೀ ಸ್ಟಾಲ್ ನಡೆಸುತ್ತಿದ್ದ ಮಹಿಳೆ ತನ್ನ ಮೊಬೈಲ್ ಅನ್ನು ಚಾರ್ಜ್‌ಗಿಟ್ಟು ಮಲಗಿದ್ದಾಳೆ. ಆದ್ರೆ ಚಾರ್ಜ್ ಆಗುತ್ತಿದ್ದ ಮೊಬೈಲ್ ಅದ್ಹೇಗೋ ಸ್ಫೋಟಗೊಂಡಿದ್ದು ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಆಕೆಯ ಮೂರು ವರ್ಷದ ಅವಳಿ ಮಕ್ಕಳು ಹೊಗೆಯಿಂದಾಗಿ ಗಂಭೀರವಾಗಿ ಅಸ್ತವ್ಯಸ್ತಗೊಂಡು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳದಿದ್ದಾರೆ. ಈ ಘಟನೆ ಸಂಭವಿಸಿದಾಗ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲವೆಂದು ತಿಳಿದು ಬಂದಿದೆ. ಮನೆಯಿಂದ ಹೊಗೆ ಬರುವುದನ್ನು ನೋಡಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.