ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆ: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದಾಗಿದ್ದೇಕೆ? ಇಲ್ಲಿದೆ ಮಾಹಿತಿ

ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ರದ್ದಾಗಿದೆ. ಅಫಿಡವಿಟ್‌ನಲ್ಲಿ ಹೈದರಾಬಾದ್‌ನ ಖಾಸಗಿ ದೂರಿನ ಮಾಹಿತಿಯನ್ನು ಮರೆಮಾಚಿದ ಆರೋಪದ ಮೇಲೆ ಚುನಾವಣಾಧಿಕಾರಿಗಳು ಈ ಕ್ರಮ ಕೈಗೊಂಡರು. ಇದು ಬಿಜೆಪಿಯ ಮಹೇಶ್ ಕೇಾವಟ್ ಅವರ ಅವಿರೋಧ ಆಯ್ಕೆಗೆ ಕಾರಣವಾಗಿದೆ. ಈ ನಿರ್ಧಾರವನ್ನು 'ಪ್ರಜಾಪ್ರಭುತ್ವದ ಕೊಲೆ' ಎಂದು ಕಾಂಗ್ರೆಸ್ ಬಣ್ಣಿಸಿದ್ದು, ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದೆ.

ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆ: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದಾಗಿದ್ದೇಕೆ? ಇಲ್ಲಿದೆ ಮಾಹಿತಿ
ಮೀನಾಕ್ಷಿ ನಟರಾಜನ್
Image Credit source: Scroll.in

Updated on: Jun 10, 2026 | 11:33 AM

ಭೋಪಾಲ್, ಜೂನ್ 10: ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆ(Rajya Sabha Election)ಯಲ್ಲಿ ಭಾರಿ ರಾಜಕೀಯ ಹೈಡ್ರಾಮಾ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ಕೊನೆಯ ಕ್ಷಣದಲ್ಲಿ ತಿರಸ್ಕರಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಭಾರಿ ಆಘಾತ ನೀಡಿದ್ದು, ಬಿಜೆಪಿ ಅಭ್ಯರ್ಥಿ ಮಹೇಶ್ ಅವರ ಅವಿರೋಧ ಆಯ್ಕೆಗೆ ಹಾದಿ ಸುಗಮಗೊಳಿಸಿದೆ.

ನಾಮಪತ್ರ ರದ್ದಾಗಲು ಕಾರಣವೇನು?
ಬಿಜೆಪಿ ಅಭ್ಯರ್ಥಿ ಮಹೇಶ್ ಕೇವತ್ ಅವರು ಚುನಾವಣಾಧಿಕಾರಿಗಳಿಗೆ ಅಧಿಕೃತ ದೂರು ನೀಡಿದ್ದರು. ಅದರ ಪ್ರಕಾರ: ಮೀನಾಕ್ಷಿ ನಟರಾಜನ್ ಅವರು ತೆಲಂಗಾಣದ ಹೈದರಾಬಾದ್ ಕೋರ್ಟ್‌ನಲ್ಲಿ ತಮ್ಮ ವಿರುದ್ಧ ಇರುವ ಒಂದು ಖಾಸಗಿ ದೂರಿಗೆ (Private Complaint) ಸಂಬಂಧಿಸಿದ ಮಾಹಿತಿಯನ್ನು ಚುನಾವಣಾ ಅಫಿಡವಿಟ್‌ನಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ, ಚುನಾವಣಾಧಿಕಾರಿಗಳು “ಮಾಹಿತಿ ಮರೆಮಾಚಿದ” ಕಾರಣಕ್ಕಾಗಿ ಅವರ ನಾಮಪತ್ರವನ್ನು ರದ್ದುಗೊಳಿಸಿದರು.

ಪ್ರಕರಣವೇನು?
ವರದಿಗಳ ಪ್ರಕಾರ, ಮೀನಾಕ್ಷಿ ನಟರಾಜನ್ ಅವರು ತೆಲಂಗಾಣದ ಎಐಸಿಸಿ (AICC) ಉಸ್ತುವಾರಿಯಾಗಿದ್ದಾರೆ. 2025 ರಲ್ಲಿ ಹೈದರಾಬಾದ್‌ನ ಮಾಜಿ ಕಾರ್ಪೊರೇಟರ್ ಒಬ್ಬರು ಸ್ಥಳೀಯ ನಾಯಕರೊಬ್ಬರಿಂದ ತಮಗೆ ಜೀವಬೆದರಿಕೆ ಇದೆ ಎಂದು ಕೋರ್ಟ್‌ಗೆ ಖಾಸಗಿ ದೂರು ನೀಡಿದ್ದರು. ಆ ದೂರಿನಲ್ಲಿ ಕಾಂಗ್ರೆಸ್‌ನ ಉನ್ನತ ನಾಯಕರು ತಮಗೆ ನ್ಯಾಯ ಒದಗಿಸಿಲ್ಲ ಎಂದು ಮೀನಾಕ್ಷಿ ನಟರಾಜನ್ ಸೇರಿದಂತೆ 7 ಜನರ ಹೆಸರನ್ನು ಉಲ್ಲೇಖಿಸಿದ್ದರು.

ಈ ಕಾರಣಕ್ಕಾಗಿ ಕೋರ್ಟ್ ಅವರಿಗೆ ಕೇವಲ ನೋಟಿಸ್ ನೀಡಿತ್ತೇ ವಿನಃ ಅವರ ಮೇಲೆ ಯಾವುದೇ ನೇರ ಎಫ್‌ಐಆರ್ ಅಥವಾ ಕ್ರಿಮಿನಲ್ ಕೇಸ್ ದಾಖಲಾಗಿರಲಿಲ್ಲ. ಆದರೆ, ಬಿಜೆಪಿ ಇದನ್ನು ಅಫಿಡವಿಟ್‌ನಲ್ಲಿ ಮರೆಮಾಚಲಾಗಿದೆ ಎಂದು ಆಕ್ಷೇಪಿಸಿತು.

ಮತ್ತಷ್ಟು ಓದಿ: ಕಾಂಗ್ರೆಸ್​ಗೆ ಭಾರೀ ಮುಖಭಂಗ; ರಾಜ್ಯಸಭೆ ಚುನಾವಣೆಗೆ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ

ಕಾನೂನು ಏನು ಹೇಳುತ್ತದೆ?
ಪ್ರಜಾ ಪ್ರಾತಿನಿಧ್ಯ ಕಾಯ್ದೆ, 1951 (Representation of the People Act, 1951): ಈ ಕಾಯ್ದೆಯ ಸೆಕ್ಷನ್ 33A ಮತ್ತು ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪುಗಳ ಪ್ರಕಾರ, ಅಭ್ಯರ್ಥಿಯು ತನ್ನ ನಾಮಪತ್ರದ ಜೊತೆ ಸಲ್ಲಿಸುವ ಅಫಿಡವಿಟ್‌ನಲ್ಲಿ ತನ್ನ ಮೇಲಿರುವ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳು, ಕೋರ್ಟ್ ನೋಟಿಸ್‌ಗಳು ಮತ್ತು ಬಾಕಿ ಇರುವ ಪ್ರಕರಣಗಳ ವಿವರಗಳನ್ನು ಕಡ್ಡಾಯವಾಗಿ ಮತ್ತು ಪ್ರಾಮಾಣಿಕವಾಗಿ ಘೋಷಿಸಬೇಕು.

ಮಾಹಿತಿ ಮರೆಮಾಚುವಿಕೆ (Concealment of Facts): ಅಭ್ಯರ್ಥಿಯು ಯಾವುದೇ ನ್ಯಾಯಾಲಯದ ಪ್ರಕರಣ ಅಥವಾ ಗಂಭೀರ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸದಿದ್ದರೆ, ಅದನ್ನು ‘ಅಪೂರ್ಣ ಅಥವಾ ಸುಳ್ಳು ಅಫಿಡವಿಟ್’ ಎಂದು ಪರಿಗಣಿಸಿ ಚುನಾವಣಾಧಿಕಾರಿಗೆ ನಾಮಪತ್ರವನ್ನು ತಿರಸ್ಕರಿಸುವ ಸಂಪೂರ್ಣ ಅಧಿಕಾರವಿರುತ್ತದೆ.

ಕಾಂಗ್ರೆಸ್ ವಾದವೇನು?
ಈ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಮೀನಾಕ್ಷಿ ನಟರಾಜನ್ ಅವರ ಮೇಲೆ ಯಾವುದೇ ಪೊಲೀಸ್ ಕೇಸ್ ಅಥವಾ ಎಫ್‌ಐಆರ್ ಇಲ್ಲ, ಕೇವಲ ಕೋರ್ಟ್ ನೋಟಿಸ್ ಬಂದಿರುವುದಕ್ಕೆ ನಾಮಪತ್ರ ರದ್ದು ಮಾಡಿರುವುದು ಬೇಜವಾಬ್ದಾರಿತನ ಹಾಗೂ “ಪ್ರಜಾಪ್ರಭುತ್ವದ ಕೊಲೆ” ಎಂದು ಕಾಂಗ್ರೆಸ್ ನಾಯಕರು ದೆಹಲಿಯ ಚುನಾವಣಾ ಆಯೋಗದ  ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಈ ತೀರ್ಪಿನ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us