ನವದೆಹಲಿ, ಮಾರ್ಚ್ 17: 2011ರಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನ ಚಾಲಕನ ಹತ್ಯೆ ಪ್ರಕರಣದಲ್ಲಿ ದರೋಡೆಕೋರ ಛೋಟಾ ರಾಜನ್ ನನ್ನು ಇಂದು ಮುಂಬೈನ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ. ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ಅಡಿಯಲ್ಲಿ ಗೊತ್ತುಪಡಿಸಲಾದ ವಿಶೇಷ ನ್ಯಾಯಾಧೀಶ ಎ.ಎಂ. ಪಾಟೀಲ್ ಛೋಟಾ ರಾಜನ್ ಅವರನ್ನು ಖುಲಾಸೆಗೊಳಿಸಿದ್ದಾರೆ. ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿರುವ ಛೋಟಾ ರಾಜನ್ ನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.ಈ ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
“ಯಾವುದೇ ಅಪರಾಧ ಅಥವಾ ಪ್ರಕರಣದಲ್ಲಿ ಅವರ ಅಗತ್ಯವಿಲ್ಲದಿದ್ದರೆ ಛೋಟಾ ರಾಜನ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು” ಎಂದು ನ್ಯಾಯಾಲಯ ಹೇಳಿದೆ. ಮೇ 17, 2011ರಂದು ದಕ್ಷಿಣ ಮುಂಬೈನಲ್ಲಿ ಇಬ್ಬರು ವ್ಯಕ್ತಿಗಳು ಆರಿಫ್ ಅಬುನಾಕರ್ ಸಯ್ಯದ್ ಎಂಬುವವರ ಮೇಲೆ ಗುಂಡು ಹಾರಿಸಿದರು. ಸಯ್ಯದ್ ಪರಾರಿಯಾಗಿರುವ ದರೋಡೆಕೋರ ದಾವೂದ್ ಇಬ್ರಾಹಿಂನ ಕಿರಿಯ ಸಹೋದರ ಇಕ್ಬಾಲ್ ಹಸನ್ ಶೇಖ್ ಇಬ್ರಾಹಿಂ ಶೇಖ್ ಕಸ್ಕರ್ ಅವರ ಚಾಲಕ ಮತ್ತು ಅಂಗರಕ್ಷಕರಾಗಿದ್ದರು.
ಇದನ್ನೂ ಓದಿ: ಛೋಟಾ ರಾಜನ್ ಕೊರೊನಾದಿಂದ ಗುಣಮುಖ, ಏಮ್ಸ್ನಿಂದ ಡಿಸ್ಚಾರ್ಜ್; ತಿಹಾರ್ ಜೈಲಿಗೆ ವಾಪಸ್
ಪೊಲೀಸರ ಪ್ರಕಾರ, ಭಾರತೀಯ ದಂಡ ಸಂಹಿತೆ, MCOCA ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಕೊಲೆ ಮತ್ತು ಕ್ರಿಮಿನಲ್ ಪಿತೂರಿಗಾಗಿ ಛೋಟಾ ರಾಜನ್ ಅವರ ಸೂಚನೆಯ ಮೇರೆಗೆ ಈ ಕೊಲೆ ನಡೆದಿದೆ. ಪತ್ರಕರ್ತ ಜ್ಯೋತಿರ್ಮಯ್ ಡೇ ಅವರ ಹತ್ಯೆಗೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವುದರಿಂದ ರಾಜನ್ ಜೈಲಿನಲ್ಲಿಯೇ ಇದ್ದಾರೆ. ಛೋಟಾ ರಾಜನ್ ಇತರ ಕ್ರಿಮಿನಲ್ ಪ್ರಕರಣಗಳಲ್ಲಿಯೂ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ