
ಪುಣೆ, ನವೆಂಬರ್ 25: ಪುಣೆಯ ಶಿವಾಜಿನಗರ ನ್ಯಾಯಾಲಯದ ಆವರಣದ ಹೊರಗೆ ಇಂದು ಮಧ್ಯಾಹ್ನ ದುಷ್ಕರ್ಮಿಗಳ ಗುಂಪೊಂದು ಕೊಲೆ ಪ್ರಕರಣದ ಆರೋಪಿಯೊಬ್ಬನ ಮೇಲೆ ಭೀಕರ ದಾಳಿ ನಡೆಸಿದ ಪರಿಣಾಮವಾಗಿ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ದಾಳಿಕೋರರು ಮೊದಲಿಗೆ ಆತನ ಮೇಲೆ ಗುಂಡು ಹಾರಿಸಿ, ಬಳಿಕ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಆತನ ಕೈ ಕತ್ತರಿಸಿ, ಕುತ್ತಿಗೆಗೆ ಇರಿಯಲಾಗಿದೆ. ನ್ಯಾಯಾಲಯದ ಆವರಣದ ಗೇಟ್ ಸಂಖ್ಯೆ 4ರ ಬಳಿ ಇಂದು ಮಧ್ಯಾಹ್ನ 1.15ರ ಸುಮಾರಿಗೆ ಈ ಘಟನೆ ನಡೆದಿದೆ. ಗಾಯಾಳುವನ್ನು ಮಂದಾರ್ ಮಾರುತಿ ಕಿವಳೆ ಎಂದು ಗುರುತಿಸಲಾಗಿದೆ. ಕಿವಳೆ ಓಡುತ್ತಿದ್ದಾಗ ನಾಲ್ವರು ದುಷ್ಕರ್ಮಿಗಳು ಬಂದೂಕುಗಳೊಂದಿಗೆ ಆತನನ್ನು ಬೆನ್ನಟ್ಟಿ ದಾಳಿ ನಡೆಸಿದ್ದಾರೆ. ಗುಂಡು ಹಾರಿಸಿದ ನಂತರ, ದಾಳಿಕೋರರು ಮಚ್ಚು ಸೇರಿದಂತೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ, ಆತನ ಕೈಯನ್ನು ಕತ್ತರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸರು ಕಿವಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಶಂಕಿತರನ್ನು ಗುರುತಿಸಿದ್ದು, ಘಟನಾ ಸ್ಥಳದಿಂದ ಎರಡು ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ದೆಹಲಿ ಪೊಲೀಸ್ ಠಾಣೆಯೊಳಗೆ ಚಾಕು ದಾಳಿಗೆ 5 ಪೊಲೀಸರಿಗೆ ಗಾಯ; ಆರೋಪಿ ಕಾಲಿಗೆ ಗುಂಡೇಟು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕಾತ್ರಾಜ್ ನಿವಾಸಿ ಅಕ್ಷಯ್ ಚವಾಣ್ ಈ ದಾಳಿಯ ಪ್ರಮುಖ ಆರೋಪಿಯಾಗಿದ್ದಾನೆ. 2 ವರ್ಷಗಳ ಹಿಂದೆ ಅಕ್ಷಯ್ ಚವಾಣ್ ಅವರ ಸಹೋದರನ ಹತ್ಯೆಯಾಗಿದ್ದು, ಆ ಕೊಲೆ ಪ್ರಕರಣದಲ್ಲಿ ಕಿವಳೆ ಸಹ ಆರೋಪಿಯಾಗಿದ್ದನು. ಈ ದಾಳಿ ನಡೆಸಲು 10ರಿಂದ 15 ಯುವಕರಿಗೆ ಸುಪಾರಿ ನೀಡಲಾಗಿತ್ತು ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ.
2025ರಲ್ಲಿ ಪುಣೆಯ ಕಾತ್ರಾಜ್ ಪ್ರದೇಶದಲ್ಲಿ ನಡೆದಿದ್ದ ಶುಭಂ ಚವಾಣ್ ಎಂಬ ರೆಸ್ಟೋರೆಂಟ್ ಮಾಲೀಕನ ಕೊಲೆ ಪ್ರಕರಣದಲ್ಲಿ ಕಿವಳೆ ಆರೋಪಿಯಾಗಿದ್ದು, ಕಳೆದ ಶನಿವಾರವಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದನು. ಇಂದು ಕೊಲೆ ಪ್ರಕರಣದ ವಿಚಾರಣೆಗೆಂದು ಶಿವಾಜಿನಗರ ನ್ಯಾಯಾಲಯಕ್ಕೆ ಬಂದಿದ್ದ ಆತ, ಮಧ್ಯಾಹ್ನ 1.15ರ ಸುಮಾರಿಗೆ ನ್ಯಾಯಾಲಯದ ಗೇಟ್ ಸಂಖ್ಯೆ 4ರ ಬಳಿ ಹೊರಬಂದಾಗ ಈ ದಾಳಿ ನಡೆದಿದೆ. ದುಷ್ಕರ್ಮಿಗಳ ತಂಡವು ಮೊದಲಿಗೆ ಕಿವಳೆ ಮೇಲೆ ಗುಂಡು ಹಾರಿಸಲು ಯತ್ನಿಸಿದೆ. ಬಳಿಕ ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಮಚ್ಚುಗಳಿಂದ ಮನಬಂದಂತೆ ಕಡಿದಿದ್ದಾರೆ. ಈ ಭೀಕರ ದಾಳಿಯಲ್ಲಿ ಕಿವಳೆಯ ಒಂದು ಕೈ ಮಣಿಕಟ್ಟಿನ ಬಳಿ ತುಂಡಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ತಕ್ಷಣವೇ ಆಟೋರಿಕ್ಷಾ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಗೆಳತಿಯನ್ನು ಕೊಂದು ಆಂಬ್ಯುಲೆನ್ಸ್ಗೆ ಕರೆ ಮಾಡಿದ ವ್ಯಕ್ತಿ
2 ಪಿಸ್ತೂಲ್ ವಶ, ಸೇಡಿನ ಶಂಕೆ:
ಈ ದಾಳಿಯ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಪುಣೆ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಕ್ಕೆ ಸ್ಥಳದಲ್ಲಿ ಎರಡು ಪಿಸ್ತೂಲ್ಗಳು, ಮ್ಯಾಗಜಿನ್ ಮತ್ತು ಖಾಲಿ ಕಾಟ್ರಿಡ್ಜ್ಗಳು ಪತ್ತೆಯಾಗಿವೆ. ಶುಭಂ ಚವಾಣ್ ಕೊಲೆಗೆ ಪ್ರತೀಕಾರವಾಗಿ ಈ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಗೌಹರ್ ಹಸನ್ ತಿಳಿಸಿದ್ದಾರೆ.
ನ್ಯಾಯಾಲಯದ ಹೊರಗೆ ಹಾಡಹಗಲೇ ನಡೆದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್, ಪುಣೆ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ ಘಟನೆಯ ವಿವರ ಪಡೆದಿದ್ದಾರೆ. ಆರೋಪಿಗಳನ್ನು ತಕ್ಷಣವೇ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಶಂಕಿತರನ್ನು ಗುರುತಿಸಿದ್ದು, ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ