ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ; ದೆಹಲಿ ಯುವತಿಯ ಸಾವಿನ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಬೇಸರ

| Updated By: ಸುಷ್ಮಾ ಚಕ್ರೆ

Updated on: Jan 02, 2023 | 10:29 AM

20 ವರ್ಷದ ಯುವತಿಯೊಬ್ಬಳು ಕಾರಿಗೆ ಡಿಕ್ಕಿ ಹೊಡೆದು ನಂತರ ಚಕ್ರಗಳಿಗೆ ಸಿಕ್ಕಿಹಾಕಿಕೊಂಡು ರಸ್ತೆಯಲ್ಲಿ 4 ಕಿಲೋಮೀಟರ್ ಎಳೆದುಕೊಂಡು ಹೋದ ನಂತರ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಭಾನುವಾರ ಮಾಹಿತಿ ನೀಡಿದ್ದರು.

ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ; ದೆಹಲಿ ಯುವತಿಯ ಸಾವಿನ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಬೇಸರ
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ
Image Credit source: NDTV
Follow us on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಭಾನುವಾರ 20 ವರ್ಷದ ಯುವತಿಯೊಬ್ಬಳ ಸ್ಕೂಟಿ ಕಾರಿಗೆ ಡಿಕ್ಕಿ ಹೊಡೆದಿತ್ತು. ಆಕೆಯ ಬಟ್ಟೆ ಕಾರಿಗೆ ಸಿಕ್ಕಿ ಆಕೆಯನ್ನು ಕಾರು 4 ಕಿ.ಮೀವರೆಗೂ ಎಳೆದುಕೊಂಡು ಹೋಗಿತ್ತು. ಈ ಘಟನೆಯಲ್ಲಿ ತೀವ್ರವಾಗಿ ಆ ಯುವತಿ ಮೃತಪಟ್ಟಿದ್ದಳು. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (Lt Governor VK Saxena) ಹೊಸ ವರ್ಷದಂದು ದೆಹಲಿಯಲ್ಲಿ ನಡೆದ ಈ ದುರಂತದಿಂದ ನಾನು ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದಿದ್ದಾರೆ.

“ಭಾನುವಾರ ಬೆಳಿಗ್ಗೆ ಕಂಝಾವ್ಲಾ-ಸುಲ್ತಾನ್‌ಪುರಿಯಲ್ಲಿ ನಡೆದ ಅಮಾನವೀಯ ಘಟನೆಯ ಬಗ್ಗೆ ನನ್ನ ತಲೆ ನಾಚಿಕೆಯಿಂದ ತಗ್ಗಿದೆ. ಈ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ದೆಹಲಿಯ ಪೊಲೀಸ್ ಆಯುಕ್ತರು ಆರೋಪಿಗಳನ್ನು ಬಂಧಿಸಿದ್ದಾರೆ. ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ.” ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಟ್ವೀಟ್ ಮಾಡಿದ್ದಾರೆ.

ಸಂತ್ರಸ್ತರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮಾಡಲಾಗುವುದು. ಇನ್ನಾದರೂ ಹೆಚ್ಚು ಜವಾಬ್ದಾರಿಯುತ ಮತ್ತು ಸಂವೇದನಾಶೀಲ ಸಮಾಜಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡೋಣ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಯುವಕನನ್ನು ಸ್ಕೂಟಿಗೆ ಕಟ್ಟಿ ರಸ್ತೆಯಲ್ಲಿ 2 ಕಿ.ಮೀ ಎಳೆದುಕೊಂಡು ಹೋದ ವಿಡಿಯೋ ವೈರಲ್

20 ವರ್ಷದ ಯುವತಿಯೊಬ್ಬಳು ಕಾರಿಗೆ ಡಿಕ್ಕಿ ಹೊಡೆದು ನಂತರ ಚಕ್ರಗಳಿಗೆ ಸಿಕ್ಕಿಹಾಕಿಕೊಂಡು ರಸ್ತೆಯಲ್ಲಿ 4 ಕಿಲೋಮೀಟರ್ ಎಳೆದುಕೊಂಡು ಹೋದ ನಂತರ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಭಾನುವಾರ ಮಾಹಿತಿ ನೀಡಿದ್ದರು. ಈ ಘಟನೆಯ ನಂತರ ಯುವತಿಯ ಸ್ಥಿತಿ ತುಂಬಾ ಹದಗೆಟ್ಟಿದ್ದು, ಕಾರಿನಲ್ಲಿ ಎಳೆದೊಯ್ದ ನಂತರ ಆಕೆಯ ಬಟ್ಟೆ ಮತ್ತು ದೇಹದ ಹಿಂಭಾಗವೂ ಕಿತ್ತು ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದರು.

ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಕೂಡ ಈ ವಿಷಯವನ್ನು ಅರಿತು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ್ದರು. “ದೆಹಲಿಯ ಕಂಝಾವಾಲಾದಲ್ಲಿ ಯುವತಿಯ ಬೆತ್ತಲೆ ಶವ ಪತ್ತೆಯಾಗಿದೆ. ಮದ್ಯದ ಅಮಲಿನಲ್ಲಿ ಕೆಲವು ಹುಡುಗರು ಆಕೆಯ ಸ್ಕೂಟಿಗೆ ಕಾರಿಗೆ ಡಿಕ್ಕಿ ಹೊಡೆದು ಹಲವಾರು ಕಿಲೋಮೀಟರ್‌ಗಳವರೆಗೆ ಎಳೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯವು ತುಂಬಾ ಅಪಾಯಕಾರಿಯಾಗಿದೆ. ದೆಹಲಿ ಪೊಲೀಸರು ಸಂಪೂರ್ಣ ಸತ್ಯವನ್ನು ಬಯಲು ಮಾಡಬೇಕು ಎಂದು ಅವರು ಟ್ವೀಟ್‌ ಮಾಡಿದ್ದರು.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದ ರಜೌರಿಯ ರಾಮ ಮಂದಿರ ಬಳಿ ಶಂಕಿತ ಉಗ್ರರ ದಾಳಿ; 2 ಸಾವು, 4 ಮಂದಿಗೆ ಗಾಯ

ಭಾನುವಾರ ಮುಂಜಾನೆ ಕಂಜ್ವಾಲಾ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿದ್ದು, ಕಾರಿನೊಂದಿಗೆ ದೇಹವನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಗಮನಿಸಲಾಗಿದೆ. ಮುಂಜಾನೆ 4:11ಕ್ಕೆ ಮತ್ತೊಂದು ಪಿಸಿಆರ್ ಕರೆ ಬಂದಿದ್ದು, ರಸ್ತೆಯಲ್ಲಿ ಯುವತಿಯ ಶವ ಬಿದ್ದಿದೆ ಎಂದು ಹೇಳಲಾಗಿತ್ತು. ಯುವತಿಯ ದೇಹವನ್ನು ಮಂಗೋಲ್‌ಪುರಿಯ ಎಸ್‌ಜಿಎಂ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿತ್ತು. ಬಳಿಕ, ಶಂಕಿತ ಕಾರನ್ನು ಸಹ ಪತ್ತೆಹಚ್ಚಿ, ಐವರು ಪ್ರಯಾಣಿಕರನ್ನು ಬಂಧಿಸಲಾಗಿದೆ.

ನೋಂದಾಯಿತ ಕಾರು ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತಮ್ಮ ಕಾರು ಸ್ಕೂಟಿಯಿಂದ ಅಪಘಾತಕ್ಕೀಡಾಗಿದೆ ಎಂದು ಆರೋಪಿಗಳು ಹೇಳಿದ್ದಾರೆ. ಆದರೆ ಅವರು ತಮ್ಮ ಕಾರಿನ ಕೆಳಗೆ ಯುವತಿ ಸಿಲುಕಿಕೊಂಡಿದ್ದು, ಕಿಲೋಮೀಟರ್‌ಗಳವರೆಗೆ ಎಳೆದೊಯ್ದಿರುವುದು ಅವರಿಗೆ ಗೊತ್ತಾಗಿಲ್ಲ ಎಂದು ದೆಹಲಿ ಪೊಲೀಸ್ ಅಧಿಕಾರಿ ಹರೇಂದ್ರ ಕೆ ಸಿಂಗ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 am, Mon, 2 January 23