ಜಾರಕಿಹೊಳಿ ಬೆಂಬಲಿಗರಿಂದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ ಪ್ರಕರಣ: 18 ಜನರ ವಿರುದ್ಧ ಎಫ್​ಐಆರ್​

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ 18 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಜಾರಕಿಹೊಳಿ ಬೆಂಬಲಿಗರಿಂದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ ಪ್ರಕರಣ: 18 ಜನರ ವಿರುದ್ಧ ಎಫ್​ಐಆರ್​
ಕಾರಿಗೆ ಮುತ್ತಿಗೆ ಹಾಕಿರುವುದು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Nov 13, 2022 | 3:09 PM

ಬೆಳಗಾವಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ (Eranna Kadadi) ಕಾರಿಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ 18 ಜನರ ವಿರುದ್ಧ ಎಫ್​ಐಆರ್ (FIR) ದಾಖಲಾಗಿದೆ. ಈರಣ್ಣ ಕಡಾಡಿ ಕಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಅವರ ಬೆಂಬಲಿಗರು ಮುತ್ತಿಗೆ ಹಾಕಿರುವ ಘಟನೆ ನ. 11ರಂದು ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ನಡೆದಿತ್ತು. ದಲಿತಪರ ಸಂಘಟನೆಯ ಕಾರ್ಯಕರ್ತರು ಕಾರು ಸುತ್ತುವರಿದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಪ್ರತಿಭಟನೆನಿರತರನ್ನು ತೆರವುಗೊಳಿಸಲು ಪೊಲೀಸರು ಹರಸಾಹಸಪಟ್ಟಿದ್ದರು. ಸದ್ಯ ವಿವಿಧ ದಲಿತ ಸಂಘಟನೆಗಳ ಮುಖಂಡರ ವಿರುದ್ಧ ದೂರು ದಾಖಲಿಸಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದ್ದು, ಮುಗ್ಧ ಜನರನ್ನು ಬಳಸಿಕೊಂಡು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಗ್ಧ ಜನರನ್ನು ಬಳಸಿಕೊಂಡು ಕಾಂಗ್ರೆಸ್ ರಾಜಕೀಯ: ಈರಣ್ಣ ಕಡಾಡಿ 

ಸತೀಶ್ ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಂತರ ತನ್ನ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ಅವರು ಆರೋಪಿಸಿದ್ದಾರೆ. ಮುಗ್ಧ ಜನರನ್ನು ಬಳಸಿಕೊಂಡು ಕಾಂಗ್ರೆಸ್​ ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಈ ಜನ ಯಾರು ಏನು ಅಂತ ನನಗೆ ಗೊತ್ತಿದೆ. ಇದೊಂದು ಪೂರ್ವ ನಿಯೋಜಿತ ಘಟನೆ. ನಾನು ಎಲ್ಲೇ ಕಾರ್ಯಕ್ರಮಕ್ಕೆ ಹೋದರೂ ಪೊಲೀಸ್ ಇಲಾಖೆಗೆ ಮಾಹಿತಿ ಕೊಡುತ್ತೇನೆ. ಆದರೆ ಪೊಲೀಸರು ಪ್ರತಿಭಟನೆ ಬಗ್ಗೆ ನನಗೆ ಮಾಹಿತಿ ನೀಡಿರಲಿಲ್ಲ ಎಂದು ಈರಣ್ಣ ಕಡಾಡಿ ತಿಳಿಸಿದರು.

ರಾಜಕೀಯ ಜೀವನದಲ್ಲಿ ಇವೆಲ್ಲ ಸಾಮಾನ್ಯ: ಡಿಸಿಎಂ ಲಕ್ಷ್ಮಣ ಸವದಿ

ಇನ್ನು ಘಟನೆ ಕುರಿತಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದು, ಈರಣ್ಣ ಕಡಾಡಿ ಅವರ ಕಾರಿಗೆ ಮುತ್ತಿಗೆ ಹಾಕಿದ್ದು, ಗಂಭೀರವಾದ ಘಟನೆಯಲ್ಲ. ರಾಜಕೀಯ ಜೀವನದಲ್ಲಿ ಇವೆಲ್ಲ ಸಾಮಾನ್ಯ ಎಂದು ಹೇಳಿದರು. ಕಡಾಡಿಗೆ ಎಲ್ಲರೂ ಸೇರಿ ಸಾಂತ್ವನ ಹೇಳಿದ್ದೇವೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಇದು ಗಂಭೀರವಾದ ಘಟನೆ ಏನಲ್ಲ. ರಾಜಕೀಯದಲ್ಲಿ ಇವೆಲ್ಲ ಸಾಮಾನ್ಯ. ಸಹಜವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿ ನಡೆಯುತ್ತವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:05 pm, Sun, 13 November 22