ಸರ್ಕಾರಿ ಭೂಮಿ ಒತ್ತುವರಿ ಮಾಡಿ ನನ್ನ ಮನೆ ಕಟ್ಟಲಾಗಿದೆ, ಬುಲ್ಡೋಜರ್ ತಂದು ಕೆಡವಿ; ಯೋಗಿ ಆದೇಶಕ್ಕೆ ಹೆದರಿ ಮನವಿ ಸಲ್ಲಿಸಿದ ವ್ಯಕ್ತಿ
ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಅದರಲ್ಲಿ ಅತಿಕ್ರಮಣ ಆಗಿದ್ದು ನಿಜವೆಂಬುದು ಗೊತ್ತಾಗಿದೆ.
ಉಳಿದೆಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗಿಂತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತ ತುಸು ವಿಭಿನ್ನ. ದೇಶ ಮಟ್ಟದಲ್ಲಿ ಗಮನಸೆಳೆದ ಸಿಎಂ ಇವರು. ಕ್ರೈಂ, ಭ್ರಷ್ಟಾಚಾರ, ಮಾಫಿಯಾಗಳು, ಅತಿಕ್ರಮಣಗಳಿಗೆ ಕಟ್ಟುನಿಟ್ಟಿನ ಕಡಿವಾಣ ಹಾಕುತ್ತಾರೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ, ಉತ್ತರ ಪ್ರದೇಶದಲ್ಲಿ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಯೋಗಿ ಇತ್ತೀಚೆಗೆ ವಿಧಾನಸಭಾ ಚುನಾವಣೆ ಪೂರ್ವ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಸಿಎಂ ಯೋಗಿ, ಯಾರೇ ಆದರೂ ಸರಿ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದರೆ, ಅದನ್ನು ಮುಲಾಜಿಲ್ಲದೆ ತೆರವುಗೊಳಿಸುತ್ತೇವೆ. ಅತಿಕ್ರಮಣ ಮಾಡಿ ಕಟ್ಟಲಾದ ಮನೆ, ಕಚೇರಿ ಏನೇ ಇರಲಿ, ಅದನ್ನು ನಾಶ ಮಾಡಲು ಬುಲ್ಡೋಜರ್ ಬಂದೇ ಬರುತ್ತದೆ ಎಂದು ಹೇಳಿದ್ದರು. ಅಂತೆಯೇ, ಎರಡನೇ ಬಾರಿ ಅಧಿಕಾರಕ್ಕೆ ಬರುತ್ತಿದ್ದಂತೆ ಅತಿಕ್ರಮಣ ತೆರವಿಗೆ ಆದೇಶ ನೀಡಿದ್ದಾರೆ.
ಇನ್ನು ಯೋಗಿ ಆದಿತ್ಯನಾಥ್ ಆದೇಶಕ್ಕೆ ಹೆದರಿದ ವ್ಯಕ್ತಿಯೊಬ್ಬರು ತಾವು ಯೋಗಿ ಕೆಂಗಣ್ಣಿಗೆ ಗುರಿಯಾಗದೆ ಇರಲು ಭರ್ಜರಿ ಉಪಾಯವೊಂದನ್ನು ಮಾಡಿದ್ದಾರೆ. ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ 40 ವರ್ಷದ ವ್ಯಕ್ತಿಯೊಬ್ಬರ ಮನೆ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿ ಕಟ್ಟಲಾಗಿತ್ತು. ತನ್ನ ಮನೆಯನ್ನು ಕೆಡವುವಂತೆ ಅವರೇ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಶೋಕ್ ಚೌಧರಿ ಅವರಿಗೆ ಮನವಿ ಸಲ್ಲಿಸಿಬಿಟ್ಟಿದ್ದಾರೆ. ಅಂದಹಾಗೇ, ಈ ವ್ಯಕ್ತಿ ಮನೆ ಕಟ್ಟಲು ಒಂದು ಒಣಗಿದ ಕೆರೆ ಮತ್ತು ಸ್ಮಶಾನದ ಜಾಗವನ್ನು ಬಳಸಿಕೊಂಡಿದ್ದಾರೆ. ಇವೆರಡೂ ಕೂಡ ಸರ್ಕಾರಿ ಭೂಮಿಯೇ ಆಗಿದ್ದವು.
ಇವರ ಹೆಸರು ಎಹ್ಸಾನ್ ಮಿಯಾನ್ ಎಂದಾಗಿದ್ದು, ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಅದರಲ್ಲಿ ಅತಿಕ್ರಮಣ ಆಗಿದ್ದು ನಿಜವೆಂಬುದು ಗೊತ್ತಾಗಿದೆ. ಅದಾದ ಬಳಿಕ ಮಾತನಾಡಿದ ಎಹ್ಸಾನ್ ಮಿಯಾನ್, ನಾವು ಎರಡು ಪೀಳಿಗೆಯಿಂದಲೂ ಇದೇ ಮನೆಯಲ್ಲಿ ವಾಸವಾಗಿದ್ದೇವೆ. ಇತ್ತೀಚೆಗೆ ನಾನು ನಕ್ಷೆ ನೋಡಿದಾಗ ನನಗೆ ನಮ್ಮ ಮನೆಯನ್ನು ಅತಿಕ್ರಮಣ ಭೂಮಿಯಲ್ಲಿ ಕಟ್ಟಿದ್ದು ಗೊತ್ತಾಯಿತು. ಹಾಗಾಗಿ ನಾನೇ ಅದನ್ನು ಕೆಡವುವಂತೆ ಅರ್ಜಿ ಸಲ್ಲಿಸಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ರಾಂಪುರ ಜಿಲ್ಲೆಯ ಶಹಾಬಾದ್ ತಹಸಿಲ್ ಅಡಿಯಲ್ಲಿ ಬರುವ ಎಹ್ರೋಲಾ ಗ್ರಾಮದಲ್ಲಿ ಹಲವು ಮನೆಗಳನ್ನು ಒತ್ತುವರಿ ಮಾಡಿಯೇ ಕಟ್ಟಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದೂ ಅಶೋಕ್ ಚೌಧರಿ ತಿಳಿಸಿದ್ದಾರೆ.