ಲಖನೌ: ನಾನಿನ್ನೂ ಆರೋಗ್ಯವಾಗಿದ್ದೇನೆ. ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವೂ ನನಗಿದೆ. ಉತ್ತರಾಧಿಕಾರಿಯನ್ನು ಇಷ್ಟು ಬೇಗ ಘೋಷಿಸುವ ಅಗತ್ಯವಿಲ್ಲ. ಪಕ್ಷ ಮತ್ತು ನನ್ನ ಕಷ್ಟಕಾಲದಲ್ಲಿ ಜೊತೆಗಿದ್ದ ಮತ್ತೊಬ್ಬ ದಲಿತನೇ ನನ್ನ ನಂತರ ಪಕ್ಷವನ್ನು ಮುನ್ನಡೆಸಲಿದ್ದಾನೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಧ್ಯಕ್ಷೆ ಮಾಯಾವತಿ ಶುಕ್ರವಾರ ಹೇಳಿದರು.
ಲಖನೌ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿ ಬಂದಾಗ ನಾನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತೇನೆ. ನನ್ನ ಉತ್ತರಾಧಿಕಾರಿ ಯಾರು ಎಂದು ಈಗಲೇ ಘೋಷಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ನನ್ನ ಉತ್ತರಾಧಿಕಾರಿ ಮತ್ತೊಬ್ಬ ದಲಿತನೇ ಆಗಿರುತ್ತಾನೆ. ನನ್ನ ಮತ್ತು ಪಕ್ಷದ ಕಷ್ಟಕಾಲದಲ್ಲಿ ಪ್ರಾಮಾಣಿಕವಾಗಿ ಮತ್ತು ಬದ್ಧತೆಯಿಂದ ಜೊತೆಗಿದ್ದವರಿಗೇ ಈ ಅವಕಾಶ ಸಿಗಲಿದೆ. ಪಕ್ಷವು ಹಲವು ಏರಿಳಿತಗಳನ್ನು ಕಂಡಿದೆ ಎಂದು ಹೇಳಿದರು. ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಂ ಸಹ ತಮ್ಮ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ ನನ್ನನ್ನು ಉತ್ತರಾಧಿಕಾರಿಯಾಗಿ ಘೋಷಿಸಿದ್ದರು ಎಂದು ಸ್ಮರಿಸಿದರು.
ಉತ್ತರ ಪ್ರದೇಶ ಕಾಂಗ್ರೆಸ್ ಘಟಕವು ವಿಧಾನಸಭಾ ಚುನಾವಣೆಗಾಗಿ ಸಿದ್ಧಪಡಿಸಿರುವ ಪ್ರಚಾರ ಸಾಮಗ್ರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷವು ಪ್ರಚಾರ ಸಭೆಗಳಿಗೆ ಜನರನ್ನು ಕರೆತರಲು ಹಣ ಮತ್ತು ಆಹಾರವನ್ನು ಗಾಳವಾಗಿ ಬಳಸುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷವು ಜನರ ಬೆಂಬಲ ಕಳೆದುಕೊಂಡಿದೆ. ಹೀಗಾಗಿಯೇ ಬಿಎಸ್ಪಿ ಬಗ್ಗೆ ಅಪಪ್ರಚಾರ ನಡೆಸುತ್ತಾ ಗಾಳಿಸುದ್ದಿ ಹರಡುತ್ತಿದೆ ಎಂದು ದೂರಿದರು.
ಕಾರ್ಯಕರ್ತರಿಗೆ ತರಬೇತಿ ಕಾರ್ಯಗಾರಗಳಲ್ಲಿ ವಿತರಿಸಲೆಂದು ಸಿದ್ಧಪಡಿಸಿರುವ 24 ಪುಟಗಳ ಪುಸ್ತಿಕೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಮತ್ತು ಬಿಎಸ್ಪಿ ಸೇರಿ ಇತರ ಪಕ್ಷಗಳು ಮಾಡಿರುವ ತಪ್ಪುಗಳನ್ನು ಪ್ರಸ್ತಾಪಿಸಲಾಗಿದೆ. ಪ್ರಚಾರ ಸಭೆಗಳಿಗೆ ಜನರನ್ನು ಕರೆತರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ನೋವಾಗಿರಬೇಕು. ಪಕ್ಷದ ಸಂಸ್ಕೃತಿಯಂತೆಯೇ ಜನರಿಗೆ ಆಹಾರ ಮತ್ತು ಹಣದ ಪ್ರಲೋಭನೆ ಒಡ್ಡಿ ಸಭೆಗಳಿಗೆ ಸೇರಿಸುತ್ತಿದೆ ಎಂದು ಮಾಯಾವತಿ ಹೇಳಿದರು.
ಕಾಂಗ್ರೆಸ್ ಜನಬೆಂಬಲ ಕಳೆದುಕೊಂಡಿದೆ ಎಂಬುದನ್ನು ಇದು ತೋರಿಸುತ್ತದೆ. ಕಾರ್ಯಕರ್ತರಿಗೆ ನೀಡಲು ಸಿದ್ಧಪಡಿಸಿರುವ ಸಾಮಗ್ರಿಯಲ್ಲಿ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷಗಳನ್ನು ಟೀಕಿಸುವ ಬದಲು ತನ್ನದೇ ದೌರ್ಬಲ್ಯಗಳ ಬಗ್ಗೆ ಪ್ರಸ್ತಾಪಿಸಬೇಕಿತ್ತು. ಮೊದಲು ತನ್ನ ಮನೆಯನ್ನು ಸರಿಯಾಗಿ ಇರಿಸಿಕೊಂಡು ನಂತರ ಇನ್ನೊಬ್ಬರ ದೌರ್ಬಲ್ಯ ಪ್ರಸ್ತಾಪಿಸಬೇಕು ಎಂದು ಸಲಹೆ ಮಾಡಿದರು.
ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆಗೆ ನಿಲ್ಲಬಲ್ಲ ಅಭ್ಯರ್ಥಿಗಳನ್ನು ಹುಡುಕಲೂ ಅವರಿಗೆ ಸಾಧ್ಯವಾಗುತ್ತಿಲ್ಲ. ತನ್ನ ಅಭ್ಯರ್ಥಿಗಳ ಪ್ರಚಾರಕ್ಕೆ ಹಣ ಒದಗಿಸಲು ಕೈಗಾರಿಕೋದ್ಯಮಿಗಳನ್ನು ಆಶ್ರಯಿಸಿದೆ ಎಂದು ಟೀಕಿಸಿದರು. ಬಿಎಸ್ಪಿಯು ಬಡವರಿಗೂ ಟಿಕೆಟ್ ಕೊಡುತ್ತಿದೆ. ಅಂಥ ಅಭ್ಯರ್ಥಿಗಳ ಚುನಾವಣಾ ವೆಚ್ಚ ನಿರ್ವಹಣೆಗಾಗಿ ದೇಣಿಗೆಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಮಾಯಾವತಿ ಹೇಳಿದರು. ಕಾಂಗ್ರೆಸ್ ಅಥವಾ ಇತರರಂತೆ ಬಿಎಸ್ಪಿಯು ಬಂಡವಾಳಶಾಹಿಗಳ ಪಕ್ಷವಲ್ಲ. ಬಡವರು ಮತ್ತು ಹಿಂದುಳಿದವರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಜನರು ಕೊಡುತ್ತಿರುವ ಸಣ್ಣಪುಟ್ಟ ದೇಣಿಗೆಗಳು ಪಕ್ಷದ ಆಸರೆಯಾಗಿವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಮರಳಿಬರಲು ಹಾತೊರೆಯುತ್ತಿದೆ. ಆದರೆ ಪಕ್ಷದ ತಪ್ಪು ನೀತಿಗಳು, ಕಾರ್ಯಪದ್ಧತಿ, ಮಾತುತಪ್ಪುವ ನಾಯಕರು ಅದರ ಇಂದಿನ ಸ್ಥಿತಿಗೆ ಕಾರಣರಾಗಿದ್ದಾರೆ. ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ಏನೇನೋ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಆದರೆ ರಾಜ್ಯದ ಜನರಿಗೆ ಸತ್ಯ ಏನು ಎಂಬುದು ತಿಳಿದಿದೆ. ಅವರು ಎಷ್ಟು ಬೇಕೋ ಅಷ್ಟೂ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿಕೊಳ್ಳಲಿ ಎಂದು ಹೇಳಿದರು.
ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಕುಳಿತು ನಾಟಕಗಳನ್ನು ಮಾಡಿದರೆ ಕಾಂಗ್ರೆಸ್ ನಾಯಕರಿಗೆ ಯಾವುದೇ ಲಾಭವಾಗುವುದಿಲ್ಲ ಎಂದು ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ಕಳೆದ ತಿಂಗಳು ಪ್ರತಿಭಟನೆ ನಡೆಸಿದ ಪ್ರಿಯಾಂಕ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದರು. ನಾನು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ನಾಲ್ಕು ಅವಧಿಯಲ್ಲಿ ಸಮಾಜ ಸುಧಾರಣೆಗಾಗಿ ಹಲವು ಐತಿಹಾಸಿಕ ಕ್ರಮಗಳನ್ನು ತೆಗೆದುಕೊಂಡಿದ್ದೆ. ವಿವಿಧ ಧಾರ್ಮಿಕ ಸಮುದಾಯಗಳಿಗೆ ಹಲವು ಸೌಲಭ್ಯ ಒದಗಿಸಿದ್ದೆ. ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಇದ್ಯಾವುದನ್ನೂ ಮಾಡಲಿಲ್ಲ ಎಂದು ತಿಳಿಸಿದರು.
(My successor will be a Dalit who stood by me and BSP during trying times says Mayawati)
ಇದನ್ನೂ ಓದಿ: ‘ಸಂಸತ್ತಿನ ಒಳಗೂ-ಹೊರಗೂ ನಾವು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ..ಆದರೆ..’-ಒಂದು ಷರತ್ತು ಹಾಕಿದ ಮಾಯಾವತಿ
ಇದನ್ನೂ ಓದಿ: ಬಿಎಸ್ಪಿ ಅಧಿಕಾರಕ್ಕೆ ಬಂದರೆ ಶ್ರೀರಾಮ ಮಂದಿರವನ್ನು ತ್ವರಿತವಾಗಿ ನಿರ್ಮಾಣ ಮಾಡಲಾಗುವುದು; ಮಾಯಾವತಿ ಪಕ್ಷದಿಂದ ಮತ್ತೊಂದು ಭರವಸೆ