ಪಂಜಾಬ್​ನಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಸಹಾಯವಾಣಿ ಘೋಷಿಸಿದ ಸಿಎಂ ಭಗವಂತ್ ಮಾನ್

| Updated By: ಸುಷ್ಮಾ ಚಕ್ರೆ

Updated on: Mar 17, 2022 | 5:24 PM

ಭ್ರಷ್ಟಾಚಾರ ನಿಗ್ರಹ ಸಹಾಯವಾಣಿ ಸಂಖ್ಯೆ ನನ್ನ ವೈಯಕ್ತಿಕ ನಂಬರ್ ಆಗಿರುತ್ತದೆ. ಯಾರಾದರೂ ನಿಮ್ಮ ಬಳಿ ಲಂಚ ಕೇಳಿದರೆ ನನ್ನ ವಾಟ್ಸಾಪ್​ ನಂಬರ್‌ಗೆ ಆಡಿಯೋ ಮತ್ತು ವಿಡಿಯೋ ಕಳುಹಿಸಿ’ ಎಂದು ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ.

ಪಂಜಾಬ್​ನಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಸಹಾಯವಾಣಿ ಘೋಷಿಸಿದ ಸಿಎಂ ಭಗವಂತ್ ಮಾನ್
ಭಗವಂತ್ ಮಾನ್
Follow us on

ಚಂಡೀಗಢ: ಪಂಜಾಬ್‌ನ ನೂತನ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (Aam Aadmi Party) ಭಗವಂತ್ ಮಾನ್ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯನ್ನು ಪ್ರಾರಂಭಿಸುವುದಾಗಿ ಇಂದು ಘೋಷಿಸಿದ್ದಾರೆ. ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ ಭಗವಂತ್ ಮಾನ್ ನಾನು ಒಂದು ದಿನವನ್ನು ಕೂಡ ವ್ಯರ್ಥ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನವಾದ ಮಾರ್ಚ್ 23ರಂದು ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

‘ಭ್ರಷ್ಟಾಚಾರ ನಿಗ್ರಹ ಸಹಾಯವಾಣಿ ಸಂಖ್ಯೆ ನನ್ನ ವೈಯಕ್ತಿಕ ನಂಬರ್ ಆಗಿರುತ್ತದೆ. ಯಾರಾದರೂ ನಿಮ್ಮ ಬಳಿ ಲಂಚ ಕೇಳಿದರೆ ನನ್ನ ವಾಟ್ಸಾಪ್​ ನಂಬರ್‌ಗೆ ಆಡಿಯೋ ಮತ್ತು ವಿಡಿಯೋ ಕಳುಹಿಸಿ’ ಎಂದು ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ.

“ನಾನು ಯಾವುದೇ ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವುದಿಲ್ಲ. ಏಕೆಂದರೆ ಶೇ. 99ರಷ್ಟು ಸರ್ಕಾರಿ ನೌಕರರು ಪ್ರಾಮಾಣಿಕರಾಗಿದ್ದಾರೆ. ಆದರೆ ಅಂತಹ ಉದ್ಯೋಗಿಗಳಲ್ಲಿ ಶೇ. 1ರಷ್ಟು ನೌಕರರು ಭ್ರಷ್ಟರಾಗಿದ್ದಾರೆ. ಆ ಶೇ. 1ರಷ್ಟು ಜನರೇ ನಮ್ಮ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಅಂತಹವರಿಂದ ಸಮಾಜವನ್ನು ರಕ್ಷಿಸಿ, ಈ ಭ್ರಷ್ಟ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಆಮ್ ಆದ್ಮಿ ಪಕ್ಷ ಪಣ ತೊಟ್ಟಿದೆ ” ಎಂದು ಅವರು ಟ್ವೀಟ್‌ನಲ್ಲಿ ಸೇರಿಸಿದ್ದಾರೆ.

ಜನರು ತಮ್ಮ ದಿನನಿತ್ಯದ ಕೆಲಸಕ್ಕಾಗಿ ಲಂಚವನ್ನು ಕೇಳುವ ಅಥವಾ ಇತರ ದುಷ್ಕೃತ್ಯಗಳಲ್ಲಿ ತೊಡಗಿರುವ ಭ್ರಷ್ಟ ಅಧಿಕಾರಿಗಳ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಈ ಸಂಖ್ಯೆಯನ್ನು ಆರಂಭಿಸಲಾಗಿದೆ. ಭ್ರಷ್ಟಾಚಾರ ಸಾಬೀತಾದರೆ ಅಂತಹ ಅಧಿಕಾರಿಗಳಿಗೆ ಶಿಕ್ಷೆ ನೀಡಲಾಗುವುದು. ಪಂಜಾಬ್‌ನಿಂದ ಭ್ರಷ್ಟಾಚಾರದ ನಿರ್ಮೂಲನೆಯು ಎಎಪಿಯ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ, ಇದು ಸ್ವಾತಂತ್ರ್ಯ ಹೋರಾಟಗಾರ ಮತ್ತು ಗಾಂಧಿವಾದಿ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಭಾಗವಾಗಿದೆ ಎಂದಿದ್ದಾರೆ.

ಫೆಬ್ರವರಿ 5ರಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು “ಎಎಪಿ ಸರ್ಕಾರ ರಚನೆಯಾದರೆ ಸರ್ಕಾರಿ ಉದ್ಯೋಗಗಳಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸುವುದಾಗಿ” ಭರವಸೆ ನೀಡಿದ್ದರು. ಭ್ರಷ್ಟ ಅಧಿಕಾರಿಗಳಿಗೆ ನನ್ನ ಸರ್ಕಾರದಲ್ಲಿ ಸ್ಥಾನವಿಲ್ಲ, ಅಂತಹ ಯಾವುದೇ ದೂರುಗಳು ನನ್ನ ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳಿಗೆ ಯಾವುದೇ ರೀತಿಯ ಸಹಾನುಭೂತಿ ನಿರೀಕ್ಷಿಸಬೇಡಿ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದರು.

ಇದನ್ನೂ ಓದಿ: ಪಂಜಾಬ್​ ಮುಖ್ಯಮಂತ್ರಿ ಭಗವಂತ್ ಮಾನ್​​ಗೆ ಪ್ರಧಾನಿ ಮೋದಿ ಅಭಿನಂದನೆ; ಬಿರೆನ್​​ ಸಿಂಗ್​​, ಪ್ರಮೋದ್​ ಸಾವಂತ್​ಗೂ ಶುಭ ಹಾರೈಕೆ

ಶೀಘ್ರದಲ್ಲೇ ಬಹುದೊಡ್ಡ, ಇತಿಹಾಸ ಕಾಣದ ನಿರ್ಧಾರ ಘೋಷಣೆ ಮಾಡುವುದಾಗಿ ಪಂಜಾಬ್​ ಸಿಎಂ ಭಗವಂತ್ ಮಾನ್ ಟ್ವೀಟ್​

Published On - 5:24 pm, Thu, 17 March 22