Plane Crash: ಮಿಜೋರಾಂನ ಲೆಂಗ್​ಪುಯಿ ಏರ್​ಪೋರ್ಟ್​ನಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನ

|

Updated on: Jan 23, 2024 | 12:47 PM

ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Plane Crash: ಮಿಜೋರಾಂನ ಲೆಂಗ್​ಪುಯಿ ಏರ್​ಪೋರ್ಟ್​ನಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನ
ಸೇನಾ ವಿಮಾನ ಪತನ
Image Credit source: India TV
Follow us on

ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನ(Plane Crash)ಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಜೋರಾಂ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಕಾರ, ಬರ್ಮಾ ಸೇನೆಯ ವಿಮಾನ ಅಪಘಾತದಲ್ಲಿ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ. ಪೈಲಟ್‌ನೊಂದಿಗೆ ಒಟ್ಟು 14 ಮಂದಿ ವಿಮಾನದಲ್ಲಿದ್ದರು, ಆರು ಮಂದಿ ಗಾಯಗೊಂಡಿದ್ದಾರೆ, ಎಂಟು ಮಂದಿ ಸುರಕ್ಷಿತವಾಗಿದ್ದಾರೆ ಎಂದು ಮಿಜೋರಾಂ ಡಿಜಿಪಿ ತಿಳಿಸಿದ್ದಾರೆ. ಎಲ್ಲಾ ಗಾಯಾಳುಗಳನ್ನು ಲೆಂಗ್‌ಪುಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಸೇನಾ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ.

ಕಳೆದ ವಾರ ಬಂಡುಕೋರರೊಂದಿಗೆ ಗುಂಡಿನ ಚಕಮಕಿಯ ನಡುವೆ ಮಿಜೋರಾಂಗೆ ಪಲಾಯನ ಮಾಡಿದ್ದ 184 ಮ್ಯಾನ್ಮಾರ್ ಸೈನಿಕರನ್ನು ಭಾರತ ಸೋಮವಾರ ವಾಪಸ್ ಕಳುಹಿಸಿದೆ. ಇದನ್ನು ದೃಢಪಡಿಸಿರುವ ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ಕಳೆದ ವಾರ ಒಟ್ಟು 276 ಮ್ಯಾನ್ಮಾರ್ ಸೈನಿಕರು ಈಶಾನ್ಯ ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತಕ್ಕೆ ಪಲಾಯನಗೈದಿದ್ದ ಮ್ಯಾನ್ಮಾರ್ ಸೈನಿಕರನ್ನು ಕರೆದುಕೊಂಡು ಹೋಗಲು ವಿಮಾನ ಬಂದಿತ್ತು ಎನ್ನಲಾಗಿದೆ. ಮಿಜೋರಾಂನ ಲೆಂಗ್‌ಪುಯಿಯಲ್ಲಿ ಲ್ಯಾಂಡಿಂಗ್ ವೇಳೆ ವಿಮಾನವು ರನ್‌ವೇಯಿಂದ ಜಾರಿದೆ.

ಈ ಸೈನಿಕರು ಜನವರಿ 17 ರಂದು ಮಿಜೋರಾಂನ ಲಾಂಗ್ಟ್ಲೈ ಜಿಲ್ಲೆಯ ಭಾರತ-ಮ್ಯಾನ್ಮಾರ್-ಬಾಂಗ್ಲಾದೇಶ ಗಡಿಯಿಂದ ಭಾರತವನ್ನು ಪ್ರವೇಶಿಸಿದ್ದರು ಮತ್ತು ಅಸ್ಸಾಂ ರೈಫಲ್ಸ್‌ನಿಂದ ಆಶ್ರಯ ಪಡೆದಿದ್ದರು.

ಮ್ಯಾನ್ಮಾರ್ ತನ್ನ ಗಡಿಯನ್ನು ಭಾರತದ 4 ರಾಜ್ಯಗಳೊಂದಿಗೆ ಹಂಚಿಕೊಂಡಿದೆ. ಎರಡು ದೇಶಗಳ ನಡುವೆ 1600 ಕಿಲೋಮೀಟರ್ ಗಡಿ ಇದೆ. ಭಾರತ ಮತ್ತು ಮ್ಯಾನ್ಮಾರ್ ನಡುವೆ ಮುಕ್ತ ಸಂಚಾರದ ಒಪ್ಪಂದಕ್ಕೆ 1970 ರಲ್ಲಿ ಸಹಿ ಹಾಕಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:35 pm, Tue, 23 January 24