ಹರ್ಯಾಣದ ಗ್ರಾಮವೊಂದರಲ್ಲಿ ನಿಗೂಢ ಜ್ವರ; 8 ಮಕ್ಕಳು ಸಾವು, ಸ್ಥಳೀಯರ ಆಕ್ರೋಶ

| Updated By: Lakshmi Hegde

Updated on: Sep 12, 2021 | 7:48 PM

ಚಿಲ್ಲಿ ಗ್ರಾಮದಲ್ಲೂ ಸಹ 50-60 ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದೆ. ಅದರಲ್ಲಿ ಎಂಟು ಮಕ್ಕಳು ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹರ್ಯಾಣದ ಗ್ರಾಮವೊಂದರಲ್ಲಿ ನಿಗೂಢ ಜ್ವರ; 8 ಮಕ್ಕಳು ಸಾವು, ಸ್ಥಳೀಯರ ಆಕ್ರೋಶ
ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರ
Follow us on

ಕೊವಿಡ್ 19 ಸೋಂಕಿನ ಮಧ್ಯೆ ಹರ್ಯಾಣದಲ್ಲಿ ಇನ್ನೊಂದು ಆತಂಕ ಶುರುವಾಗಿದೆ. ಇಲ್ಲಿನ ಪಾಲ್​ವಾಲ್​ ಜಿಲ್ಲೆಯ ಚಿಲ್ಲಿ ಗ್ರಾಮದಲ್ಲಿ ಕಳೆದ 10 ದಿನಗಳಲ್ಲಿ ಸುಮಾರು ಎಂಟು ಮಕ್ಕಳು ನಿಗೂಢ ಜ್ವರಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳೀಯರು ಇದು ಡೆಂಘೆ ಜ್ವರ ಎಂದೇ ಹೇಳುತ್ತಿದ್ದರೂ ಆರೋಗ್ಯ ಇಲಾಖೆ ಅದನ್ನು ದೃಢಪಡಿಸಿಲ್ಲ. ಕೆಲವು ದಿನಗಳ ಹಿಂದೆ ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲೆಯಿಂದ ಈ ನಿಗೂಢ ಜ್ವರ ವರದಿಯಾಗಿದೆ. ಅಲ್ಲಿ ವಿಚಿತ್ರ ಕಾಯಿಲೆಗೆ 10 ದಿನಗಳಲ್ಲಿ 30 ಮಕ್ಕಳು ಮೃತಪಟ್ಟಿದ್ದಾಗಿ ಹೇಳಲಾಗಿದೆ.

ಇದೀಗ ಚಿಲ್ಲಿ ಗ್ರಾಮದಲ್ಲೂ ಸಹ 50-60 ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದೆ. ಅದರಲ್ಲಿ ಎಂಟು ಮಕ್ಕಳು ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಗ್ರಾಮದ ಸರ್​ಪಂಚ್​ ನರೇಶ್​ ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಕೂಡ ಹೆಚ್ಚಿನ ಕಾಳಜಿ ವಹಿಸಿದೆ. ಗ್ರಾಮದಲ್ಲಿ ಮನೆ-ಮನೆಗೆ ತೆರಳಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಫಿರೋಜಾಬಾದ್​ನಂತೆಯೇ ಇಲ್ಲೂ ಕೂಡ ಜ್ವರಕ್ಕೆ ತುತ್ತಾದವರಲ್ಲಿ ಪ್ಲೇಟ್​ಲೆಟ್​ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿದೆ. ಇದೇ ಕಾರಣಕ್ಕೆ ಇಲ್ಲಿನ ಜನರು ಇದು ಡೆಂಘೆ ಎನ್ನುತ್ತಿದ್ದಾರೆ.

ಸ್ವಚ್ಛತೆ ಇಲ್ಲ..ಕಲುಷಿತ ನೀರು
ಇನ್ನು ನಿಗೂಢ ಜ್ವರ ಕಾಣಿಸಿಕೊಂಡ ಈ ಹಳ್ಳಿಯಲ್ಲಿ ಸ್ವಚ್ಛತೆ ಇಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಇಲ್ಲಿನ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕಕ್ಕೆ ರಬ್ಬರ್​ ಪೈಪ್​ಗಳನ್ನು ಬಳಸಲಾಗಿದೆ. ಹಾಗೇ ಈ ರಬ್ಬರ್​ ಪೈಪ್​ಗಳು ಕೊಚ್ಚೆ ನೀರಿನಲ್ಲಿ ಹಾದುಹೋಗಿವೆ. ಹಳ್ಳಿಯ ರಸ್ತೆಗಳನ್ನು ನೋಡಿದರೆ ತುಂಬ ಗಲೀಜಿದೆ. ಸೊಳ್ಳೆಗಳು ವಿಪರೀತ ಆಗಿವೆ. ಎಲ್ಲಿ ನೋಡಿದರೂ ತೆರೆದ ಚರಂಡಿಗಳಿವೆ ಎಂದು ಪ್ರತ್ಯಕ್ಷ ವರದಿ ನೀಡಿದೆ.

ಇನ್ನು ಇಲ್ಲಿನ ಜನರೂ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗೆ ಮಕ್ಕಳು ಅನಾರೋಗ್ಯಕ್ಕೀಡಾಗಿ ಸಾಯುತ್ತಿರುವುದು ನೋವು ತಂದಿದೆ. ಆ ಮಕ್ಕಳನ್ನು ಬದುಕಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಚಿಲ್ಲಿ ಹಳ್ಳಿಯಲ್ಲಿ ಸುಮಾರು 4000 ಜನರಿದ್ದು, ಇಲ್ಲಿ ಸಮೀಪದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ. ಏನಾದರೂ ಆರೋಗ್ಯ ಸಮಸ್ಯೆಯಾದರೆ ಸುಮಾರು 30 ಕಿಮೀ ದೂರದಲ್ಲಿರುವ ಉತ್ತಾವರ್​ಗೇ ಹೋಗಬೇಕಾಗಿದೆ

ಇದನ್ನೂ ಓದಿ: ಸಿಎಂ ಹುದ್ದೆಗೆ ಏರಿದ ಭೂಪೇಂದ್ರ ಪಟೇಲ್​ ಯಾರು?-ರೇಸ್​​ನಲ್ಲಿ ಇಲ್ಲದಿದ್ದರೂ ಹುದ್ದೆಗೇರಿದ ನಾಯಕ

ಎಸ್​ಸಿ ಎಸ್​ಟಿಯ 52 ಶಾಸಕರಿದ್ದರೂ ಅಧಿಕಾರ ಹಿಡಿಯಲು ಆಗಲಿಲ್ಲ: ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ