
ನವದೆಹಲಿ, ನವೆಂಬರ್ 13: ದೆಹಲಿ ಕಾರು ಸ್ಫೋಟ ಪ್ರಕರಣಕ್ಕೆ (Delhi Car Blast Case) ಸಂಬಂಧಿಸಿದಂತೆ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಬಗ್ಗೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದ ವೈದ್ಯ ಡಾ. ಉಮರ್ ಇದೇ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಎಂಬ ಕಾರಣಕ್ಕೆ ಈ ಯೂನಿವರ್ಸಿಟಿ ಪರಿಶೀಲನೆಯಲ್ಲಿದೆ ಎಂದು ನ್ಯಾಕ್ (NAAC) ತಿಳಿಸಿದೆ.
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ತನ್ನ ವೆಬ್‌ಸೈಟ್‌ನಲ್ಲಿ ಸುಳ್ಳು ಮಾನ್ಯತೆಯನ್ನು ಪ್ರದರ್ಶಿಸಿದ್ದಕ್ಕಾಗಿ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಶೋಕಾಸ್ ನೋಟಿಸ್ ನೀಡಿದೆ. ಅಲ್ಲದೆ, NAAC ಆ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಿಂದ ಮಾನ್ಯತೆಯ ವಿವರಗಳನ್ನು ತೆಗೆದುಹಾಕುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದೆ. 7 ದಿನಗಳೊಳಗೆ ಈ ನೋಟಿಸ್ಗೆ ಉತ್ತರಿಸಿ ಸಮರ್ಥನೆ ಮಾಡಿಕೊಳ್ಳುವಂತೆ ಸೂಚಿಸಿದೆ. ಆ ಸಂಸ್ಥೆಯ ಮಾನ್ಯತೆಯನ್ನು ಹಿಂಪಡೆಯುವಂತೆ UGC, AICTE, NMC ಮತ್ತು NCTEಗೆ ಏಕೆ ಶಿಫಾರಸು ಮಾಡಬಾರದು ಎಂದು ಉತ್ತರಿಸಲು ನ್ಯಾಕ್ ಸೂಚಿಸಿದೆ.
ಇದನ್ನೂ ಓದಿ: ದೆಹಲಿ ಸ್ಫೋಟ, ವೈದ್ಯರ ನಡುವೆ ಇತ್ತು ಹಣದ ವಿವಾದ, 4 ನಗರಗಳಲ್ಲಿ ಸರಣಿ ಸ್ಫೋಟ ನಡೆಸಲು ನಡೆದಿತ್ತು ಪ್ಲ್ಯಾನ್
“ಅಲ್-ಫಲಾಹ್ ವಿಶ್ವವಿದ್ಯಾನಿಲಯವು ಸೈಕಲ್-1 ಗಾಗಿ ಮಾನ್ಯತೆ ಪಡೆದಿಲ್ಲ. ಅಲ್-ಫಲಾಹ್ ವಿಶ್ವವಿದ್ಯಾನಿಲಯವು ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್‌ನ ವ್ಯಾಪ್ತಿಗೆ ಒಳಪಡುತ್ತದೆ. ಇದು ಕ್ಯಾಂಪಸ್‌ನಲ್ಲಿ ಮೂರು ಕಾಲೇಜುಗಳನ್ನು ನಡೆಸುತ್ತಿದೆ. ಅವುಗಳೆಂದರೆ ಅಲ್ ಫಲಾಹ್ ಸ್ಕೂಲ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (1997ರಿಂದ NAACನಿಂದ A ಗ್ರೇಡ್ ಮಾಡಲಾಗಿದೆ), ಬ್ರೌನ್ ಹಿಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (2008ರಿಂದ) ಮತ್ತು ಅಲ್-ಫಲಾಹ್ ಸ್ಕೂಲ್ ಆಫ್ ಎಜುಕೇಶನ್ ಆ್ಯಂಡ್ ಟ್ರೈನಿಂಗ್ (2006ರಿಂದ NAACನಿಂದ A ಗ್ರೇಡ್ ಮಾಡಲಾಗಿದೆ) ಎಂದು ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ. ಇದು ಸಂಪೂರ್ಣವಾಗಿ ತಪ್ಪು ಮತ್ತು ಸಾರ್ವಜನಿಕರನ್ನು ಅದರಲ್ಲೂ ವಿಶೇಷವಾಗಿ ಪೋಷಕರು, ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿದೆ” ಎಂದು ನ್ಯಾಕ್ ಹೇಳಿದೆ.
ಇದನ್ನೂ ಓದಿ: Delhi Blast Case: ದೆಹಲಿಯ ಕಾರು ಸ್ಫೋಟವನ್ನು ಭಯೋತ್ಪಾದಕ ದಾಳಿ ಎಂದು ಘೋಷಿಸಿದ ಮೋದಿ ಸರ್ಕಾರ
ಈ ಸೂಚನೆಯ ನಂತರ, ಅಲ್-ಫಲಾಹ್ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ಅನ್ನು ಆಫ್‌ಲೈನ್‌ನಲ್ಲಿ ತೆಗೆದುಹಾಕಲಾಗಿದೆ. ಅವರ ಎರಡು ಕಾಲೇಜುಗಳು ಮಾನ್ಯತೆ ಪಡೆದಿವೆ. ಈ ಮಾನ್ಯತೆಯ ಅವಧಿ ಮುಗಿದಿದೆ. ಅವರು ವಿಶ್ವವಿದ್ಯಾಲಯವಾಗಿ ಮಾನ್ಯತೆಗಾಗಿ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ, ಅವರು ಎಂದಿಗೂ ಅರ್ಜಿ ಸಲ್ಲಿಸಲಿಲ್ಲ. ಆದರೆ, ಅವರ ವೆಬ್‌ಸೈಟ್‌ನಲ್ಲಿ ಅವರು NAAC ಮಾನ್ಯತೆ ಪಡೆದಿರುವುದಾಗಿ ಘೋಷಿಸಿದ್ದಾರೆ. ಮಾನ್ಯತೆಯ ಅವಧಿ ಮುಗಿದ ನಂತರ, ಅವರು ಅದನ್ನು ತಮ್ಮ ವೆಬ್‌ಸೈಟ್‌ನಲ್ಲಿ ಬಳಸಲು ಸಾಧ್ಯವಿಲ್ಲ ಎಂದು ಹಿರಿಯ NAAC ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ