ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಭ್ರಷ್ಟಾಚಾರದ ವಿರುದ್ಧ ಬಿಜೆಪಿ (BJP) ಬೃಹತ್ ಪ್ರತಿಭಟನೆಯ ನಡೆಸಿದ್ದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ (Suvendu Adhikari) ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಇಂದು (ಮಂಗಳವಾರ) ಕೋಲ್ಕತ್ತಾದ ರಾಜ್ಯ ಸಚಿವಾಲಯ ‘ನಬನ್ನಾ’ಕ್ಕೆ ಬಿಜೆಪಿ ಪ್ರತಿಭಟನಾ ಮೆರವಣಿಗೆ ನಡೆಸಿದೆ. ಸುವೇಂದು ಅಧಿಕಾರಿ, ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಮತ್ತು ರಾಹುಲ್ ಸಿನ್ಹಾ ಸೇರಿದಂತೆ ಇತರ ಪಕ್ಷದ ನಾಯಕರು ಸೆಕ್ರೆಟರಿಯೇಟ್ ಬಳಿಯ ಎರಡನೇ ಹೂಗ್ಲಿ ಸೇತುವೆಯ ಬಳಿಗೆ ಬರುತ್ತಿದ್ದಂತೆ ಪೊಲೀಸರು ತಡೆದು ಜೈಲಿನ ವ್ಯಾನ್ನಲ್ಲಿ ಕರೆದೊಯ್ದಿದ್ದಾರೆ.
#WATCH | West Bengal: Police personnel in Kolkata thrash a BJP worker who had joined other members of the party in their call for a "Nabanna Chalo" march. pic.twitter.com/WxFmoCr212
— ANI (@ANI) September 13, 2022
ಹೌರಾ ಸೇತುವೆ ಬಳಿ ಪ್ರತಿಭಟನಾಕಾರರು ಭದ್ರತಾ ಅಧಿಕಾರಿಗಳೊಂದಿಗೆ ಘರ್ಷಣೆ ನಡೆಸುತ್ತಿದ್ದಂತೆ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದರು. ಪೊಲೀಸ್ ಕಾರಿಗೂ ಬೆಂಕಿ ಹಚ್ಚಲಾಗಿದೆ. ಘರ್ಷಣೆಯ ನಂತರ ಹಲವಾರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ರಾಣಿಗಂಜ್‌ನಲ್ಲಿಯೂ ಪಕ್ಷದ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪಶ್ಚಿಮ ಬಂಗಾಳದ ನೂರಾರು ಬಿಜೆಪಿ ಬೆಂಬಲಿಗರು ಇಂದು ಬೆಳಿಗ್ಗೆ ಕೋಲ್ಕತ್ತಾ ಮತ್ತು ನೆರೆಯ ಹೌರಾಕ್ಕೆ ‘ನಬನ್ನಾ ಅಭಿಜನ್’ ಅಥವಾ ಸೆಕ್ರೆಟರಿಯೇಟ್‌ಗೆ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದರು.
ಪ್ರತಿಭಟನೆಯಲ್ಲಿ ನಿರತರಾಗಿದ್ದ ಸುವೇಂದು ಅಧಿಕಾರಿಯನ್ನು ಪೊಲೀಸರು ಎಳೆದೊಯ್ಯುತ್ತಿದ್ದಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳವನ್ನು ಉತ್ತರ ಕೊರಿಯಾವನ್ನಾಗಿ ಮಾಡಿದ್ದಾರೆ ಎಂದಿದ್ದಾರೆ.
“ಮುಖ್ಯಮಂತ್ರಿ ಮಮತಾ ಅವರಿಗೆ ಅವರ ಜನರ ಬೆಂಬಲವಿಲ್ಲ. ಅವರು ಬಂಗಾಳದಲ್ಲಿ ಉತ್ತರ ಕೊರಿಯಾದಂತೆಯೇ ಸರ್ವಾಧಿಕಾರವನ್ನು ಜಾರಿಗೊಳಿಸುತ್ತಿದ್ದಾರೆ. ಈಗ ಪೊಲೀಸರು ಏನು ಮಾಡುತ್ತಿದ್ದಾರೋ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಬಿಜೆಪಿ ಬರುತ್ತಿದೆ ಎಂದು ಅವರು ಹೇಳಿದರು.
ಸುವೇಂದು ಅಧಿಕಾರಿ ಸಂತ್ರಗಚಿ ಪ್ರದೇಶದಿಂದ ಮೆರವಣಿಗೆಯನ್ನು ಮುನ್ನಡೆಸಿದ್ದು, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಉತ್ತರ ಕೋಲ್ಕತ್ತಾದಿಂದ ಪ್ರತಿಭಟನೆಯನ್ನು ಮುನ್ನಡೆಸಿದ್ದಾರೆ.
ಟಿಎಂಸಿ ಸರ್ಕಾರವು ಸಾರ್ವಜನಿಕ ದಂಗೆಗೆ ಹೆದರುತ್ತಿದೆ. ಅವರು ನಮ್ಮ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದರೂ, ನಾವು ಶಾಂತಿಯುತವಾಗಿ ವಿರೋಧಿಸುತ್ತೇವೆ. ಯಾವುದೇ ಅಹಿತಕರ ಬೆಳವಣಿಗೆಗೆ ರಾಜ್ಯ ಆಡಳಿತವು ಹೊಣೆಯಾಗುತ್ತದೆ ಎಂದು ಘೋಷ್ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಸರ್ಕಾರವು ತನ್ನ ಪಕ್ಷದ ಪ್ರಜಾಪ್ರಭುತ್ವದ ಪ್ರತಿಭಟನೆಯನ್ನು ಬಲವಂತವಾಗಿ ತಡೆಯಲು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಸಿನ್ಹಾ ಆರೋಪಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ಬೆಂಬಲಿಗರನ್ನು ನಿನ್ನೆ ಸಂಜೆ ಅಲಿಪುರ್‌ದೌರ್‌ನಿಂದ ಸೀಲ್ದಾಹ್‌ಗೆ ವಿಶೇಷ ರೈಲು ಹತ್ತದಂತೆ ತಡೆಯಲಾಗಿದೆ ಎಂದು ಅವರು ಆರೋಪಿಸಿದರು. ಅವರ ಮೇಲೂ ರಾಜ್ಯ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
‘ನಬನ್ನ ಅಭಿಜನ್’ನಲ್ಲಿ ಪಾಲ್ಗೊಳ್ಳಲು ಬಿಜೆಪಿ ಉತ್ತರ ಬಂಗಾಳದಿಂದ ಮೂರು ಮತ್ತು ದಕ್ಷಿಣದಿಂದ ನಾಲ್ಕು ಹೀಗೆ ಒಟ್ಟು ಏಳು ರೈಲುಗಳನ್ನು ವ್ಯವಸ್ಥೆ ಮಾಡಿತ್ತು.ಕೋಲ್ಕತ್ತಾಗೆ ಬಿಜೆಪಿ ಕಾರ್ಯಕರ್ತರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗಳನ್ನು ಉತ್ತರ 24 ಪರಗಣದಲ್ಲಿ ಪೊಲೀಸರು ತಡೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Published On - 5:22 pm, Tue, 13 September 22