‘ಫಲಾನುಭವಿ ಹೆಸರು ಅಮಿತ್ ಶಾ, ವಯಸ್ಸು 33, ಫಲಾನುಭವಿ ಹೆಸರು ಓಂ ಬಿರ್ಲಾ, ವಯಸ್ಸು 26…ಹೀಗೆಲ್ಲ ಹೆಸರು ಕಂಡು ಬಂದಿದ್ದು, ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ತಖಾ ತಹಸಿಲ್‌ನಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರದ ಹೆಸರಿರುವ ಕೊವಿಡ್ 19 ಸರ್ಟಿಫಿಕೇಟ್ (Covid 19 Vaccine Certificate)ನಲ್ಲಿ. ಈ ಆರೋಗ್ಯ ಕೇಂದ್ರ ನೀಡಿದೆ ಎಂದು ವೈರಲ್ ಆಗುತ್ತಿರುವ ಕೊರೊನಾ ಪ್ರಮಾಣಪತ್ರದಲ್ಲಿ ಕೇಂದ್ರ ಸಚಿವರಾದ, ಅಮಿತ್ ಶಾ, ನಿತಿನ್ ಗಡ್ಕರಿ, ಪಿಯುಷ್ ಗೋಯೆಲ್, ಸ್ಪೀಕರ್ ಓಂ ಬಿರ್ಲಾ ಎಂಬ ಹೆಸರಿದೆ. ಸರ್ಟಿಫಿಕೇಟ್ ಫೋಟೋಗಳು ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ಇಲ್ಲೇನೋ ಪಿತೂರಿ ನಡೆಯುತ್ತಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗೇ, ಮುಖ್ಯ ವೈದ್ಯಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.
ಆದರೆ ಇಟಾವಾ ಜಿಲ್ಲೆಯ ತಖಾ ತಹಸಿಲ್‌ನಲ್ಲಿ ಇರುವ ಆರೋಗ್ಯ ಕೇಂದ್ರದ ಅಧಿಕಾರಿಗಳು ತಾವು ಇಂಥ ಯಾವುದೇ ಸರ್ಟಿಫಿಕೇಟ್ನ್ನೂ ನೀಡಲಿಲ್ಲ ಎಂದು ಹೇಳಿದ್ದಾರೆ. ಇವು ನಕಲಿ ಪ್ರಮಾಣ ಪತ್ರಗಳು ಎಂದು ಪ್ರತಿಪಾದಿಸಿದ್ದಾರೆ. ಇದರಲ್ಲಿ ಅಮಿತ್ ಶಾ ವಯಸ್ಸು 33, ನಿತಿನ್ ಗಡ್ಕರಿ ವಯಸ್ಸು 30, ಪಿಯುಷ್ ಗೋಯಲ್ ವಯಸ್ಸು 36 ಎಂದು ಉಲ್ಲೇಖವಿದೆ. ಇವರೆಲ್ಲ ಡಿಸೆಂಬರ್ 12ರಂದು ಇಟಾವಾದ ಆರೋಗ್ಯ ಕೇಂದ್ರದಲ್ಲಿ ಮೊದಲ ಡೋಸ್ ಕೊವಿಡ್ 19 ಲಸಿಕೆ ಪಡೆದಿದ್ದಾರೆ. 2022ರ ಮಾರ್ಚ್ 15ರಿಂದ ಏಪ್ರಿಲ್ 3ರೊಳಗೆ ಎರಡನೇ ಡೋಸ್ ತೆಗೆದುಕೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಟಾವಾ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥ, ನಮ್ಮ ಐಡಿಯನ್ನು ಡಿಸೆಂಬರ್ 12ರಂದು ಹ್ಯಾಕ್ ಮಾಡಿದ್ದಾರೆ. ಆ ಐಡಿಯನ್ನು ಕ್ಲೋಸ್ ಮಾಡುವಂತೆ ನಾವೂ ಕೂಡ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಹಾಗೇ, ಮುಖ್ಯ ವೈದ್ಯಾಧಿಕಾರಿ ಡಾ. ಭಗವಾನ್ ದಾಸ್ ಭಿರೋರಿಯಾ ಪ್ರತಿಕ್ರಿಯೆ ನೀಡಿದ್ದು, ಇಲ್ಲೋನೋ ಪಿತೂರಿ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಕೇಂದ್ರ ಸಚಿವರ ಹೆಸರುಗಳನ್ನೆಲ್ಲ ಬಳಸಲಾಗಿದೆ. ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಜನಪ್ರತಿನಿಧಿಗಳು ಫುಲ್ ಸೈಲೆಂಟ್! ಆದರೆ ಶಿವಾಜಿ ಪುತ್ಥಳಿಗೆ ಎಂಇಎಸ್ ಕಾರ್ಯಕರ್ತೆಯರಿಂದ ಕ್ಷೀರಾಭಿಷೇಕ!