ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸೋಮವಾರ ಸಿಬಿಐ ತಂಡ ಟಿಎಂಸಿಯ ಪ್ರಮುಖ ನಾಯಕ, ಸಚಿವ ಫಿರ್ಹಾದ್ ಹಕೀಮ್,ಸುಬ್ರತಾ ಮುಖರ್ಜಿ ಮತ್ತು ಶಾಸಕ ಮದನ್ ಮಿತ್ರಾ ಅವರನ್ನು ಬಂಧಿಸಿದೆ. ನಾರದಾ ಮಾರುವೇಷದ ಕಾರ್ಯಾಚರಣೆಗೆ ಸಂಬಂಧಿಸಿ ಈ ಬಂಧನ ನಡೆದಿದೆ. ಪಕ್ಷದ ಪ್ರಮುಖರ ಬಂಧನ ಸುದ್ದಿ ತಿಳಿದ ತಕ್ಷಣವೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಗೆ ದೌಡಾಯಿಸಿದ್ದಾರೆ.
ಟಿಎಂಸಿ ನಾಯಕರ ಜತೆಗೆ ಕೊಲ್ಕತ್ತಾದ ಮಾಜಿ ಮೇಯರ್ ಸೋವನ್ ಚಟರ್ಜಿ ಅವರನ್ನೂ ಸಿಬಿಐ ಬಂಧಿಸಿದೆ. ವಾರದ ಹಿಂದೆಯಷ್ಟೇ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರಾ ಮತ್ತು ಸೋವನ್ ಚಟರ್ಜಿ ಅವರ ವಿರುದ್ಧ ತನಿಖೆಗೆ ರಾಜ್ಯಪಾಲ ಜಗದೀಪ್ ಧನ್ಕರ್ ಸಮ್ಮತಿ ನೀಡಿದ್ದರು. ನಾರದಾ ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿ ಈ ನಾಯಕರ ವಿರುದ್ಧ ತನಿಖೆಗೆ ಅನುಮತಿ ಕೊಡಬೇಕು ಎಂದು ರಾಜ್ಯಪಾಲರನ್ನು ಸಿಬಿಐ ಕೋರಿತ್ತು.
West Bengal Chief Minister Mamata Banerjee arrives at the CBI office pic.twitter.com/FM2B1zaeWL
— ANI (@ANI) May 17, 2021
ಸಿಬಿಐ ತಂಡವು ಫಿರ್ಹಾದ್ ಹಕೀಮ್ ಅವರನ್ನು ತಮ್ಮ ವಾಹನದಲ್ಲಿ ಕೂರಿಸುತ್ತಿದ್ದಂತೆ, ಟಿಎಂಸಿ ಬೆಂಬಲಿಗರು ಭದ್ರತಾ ಪಡೆಗಳೊಂದಿಗೆ ವಾಗ್ವಾದ ನಡೆಸಿದ ನಂತರ ಬೀದಿಗಿಳಿದು ಪ್ರತಿಭಟಿಸಿದ್ದಾರೆ.
ಕೇಂದ್ರೀಯ ತನಿಖಾ ದಳ ಅನುಮತಿಯಿಲ್ಲದೆ ನಮ್ಮನ್ನು ಬಂಧಿಸುತ್ತಿದೆ ಎಂದು ಫಿರ್ಹಾದ್ ಹಕೀಮ್ ಆರೋಪಿಸಿದರು. ಹಕೀಮ್ ಬಂಧನದ ಬೆನ್ನಲ್ಲೇ ಸಿಬಿಐ ತೃಣಮೂಲ ಶಾಸಕ ಮದನ್ ಮಿತ್ರ ಮತ್ತು ಮಾಜಿ ತೃಣಮೂಲ ನಾಯಕ ಸೋವನ್ ಚಟರ್ಜಿ ಅವರ ಮನೆಗಳಿಗೆ ಹೋಗಿ ಅವರನ್ನೂ ಬಂಧಿಸಿದೆ. ಕೋಲ್ಕತ್ತಾದ ಮಾಜಿ ಮೇಯರ್ ಮತ್ತು ಹಿರಿಯ ಸಚಿವರಾದ ಎಂ.ಎಸ್.ಚಟರ್ಜಿ ಅವರು 2019 ರಲ್ಲಿ ತೃಣಮೂಲವನ್ನು ತೊರೆದು ಬಿಜೆಪಿಗೆ ಸೇರಿದ್ದರು. ಈ ಮಾರ್ಚ್‌ನಲ್ಲಿ ಬಿಜೆಪಿಯನ್ನು ಅವರು ತೊರೆದಿದ್ದಾರೆ.
ಸಿಬಿಐ ಅವರ ವಿರುದ್ಧ ಚಾರ್ಜ್‌ಶೀಟ್ ಅನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ಕಸ್ಟಡಿಗೆ ಪಡೆಯಬಹುದು. ಇಲ್ಲದಿದ್ದರೆ, ಜಾಮೀನು ನೀಡುವವರೆಗೂ ನಾಲ್ವರು ಪೊಲೀಸ್ ಬಂಧನದಲ್ಲಿರಬೇಕಾಗುತ್ತದೆ.
ಇದೀಗ ಸಿಬಿಐ ಬಂಧಿಸಿರುವ ನಾಲ್ವರು ನಾಯಕರು 2014 ರಲ್ಲಿ ನಾರದ ಲಂಚ ಪ್ರಕರಣ ಚಿತ್ರೀಕರಿಸಿದಾಗ ಈ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಕಳೆದ ತಿಂಗಳು ಬಂಗಾಳದಲ್ಲಿ ಸತತ ಮೂರನೇ ಅವಧಿಯಲ್ಲಿ ಗದ್ದುಗೆಗೇರಿದ ನಂತರ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಅವರು ಮಮತಾ ಬ್ಯಾನರ್ಜಿ ಅವರ ಹೊಸ ಸಚಿವ ಸಂಪುಟ ಸದಸ್ಯರಾಗಿ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿದ್ದರು.
ಏನಿದು ನಾರದ ಕಾರ್ಯಾಚರಣೆ?
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಯ ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಮ್ಯಾಥ್ಯೂ ಸ್ಯಾಮುಯೆಲ್ ನಡೆಸಿದ ಕುಟುಕು ಕಾರ್ಯಾಚರಣೆಯೇ ನಾರದಾ ಕುಟುಕು ಕಾರ್ಯಾಚರಣೆ. ಇದು ಹಲವಾರು ರಾಜಕಾರಣಿಗಳು ಮತ್ತು ಉನ್ನತ ದರ್ಜೆಯ ಪೊಲೀಸ್ ಅಧಿಕಾರಿಯೊಬ್ಬರು ಕಂಪನಿಗೆ ಅನಧಿಕೃತ ಸಹಾಯವನ್ನು ನೀಡುವ ಬದಲು ನಗದು ಲಂಚ ಸ್ವೀಕರಿಸುವುದನ್ನು ತೋರಿಸಿದೆ. ಭಾರತೀಯ ಸುದ್ದಿ ಪತ್ರಿಕೆ ತೆಹಲ್ಕಾಕ್ಕಾಗಿ 2014 ರಲ್ಲಿ ಮಾಡಿದ ಈ ಕುಟುಕು ಕಾರ್ಯಾಚರಣೆ 2016 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮೊದಲು ಖಾಸಗಿ ವೆಬ್‌ಸೈಟ್‌ನಲ್ಲಿ ಪ್ರಕಟವಾಯಿತು.
ಜೂನ್ 2017 ನಿಂದ ಕೇಂದ್ರ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಂಸದೀಯ ನೀತಿ ಸಮಿತಿ ಈ ಪ್ರಕರಣದ ತನಿಖೆ ನಡೆಸುತ್ತಿವೆ. ತೃಣಮೂಲ ಕಾಂಗ್ರೆಸ್ ಆರೋಪಗಳನ್ನು ತಿರಸ್ಕರಿಸಿದ್ದು, ದೇಣಿಗೆ ನೀಡುವ ರೀತಿಯಲ್ಲಿ ಹಣವನ್ನು ಸ್ವೀಕರಿಸಲಾಗಿದೆ ಎಂದು ಹೇಳಿಕೊಂಡಿದೆ.
Published On - 11:28 am, Mon, 17 May 21