ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ (National Herald Case) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಇಂದು (ಮಂಗಳವಾರ) 2ನೇ ಸುತ್ತಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾಗಲಿದ್ದಾರೆ. ಇಡಿ ತನಿಖಾಧಿಕಾರಿ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಲು ಇಂದು ಮಧ್ಯಾಹ್ನ ಸೋನಿಯಾ ಗಾಂಧಿ ಇಡಿ ಕಚೇರಿಗೆ ಧಾವಿಸುವ ಸಾಧ್ಯತೆಯಿದೆ. ಭಾನುವಾರ ಅವರಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ, ಆ ವಿಚಾರಣೆಯ ದಿನಾಂಕವನ್ನು ಇಂದಿಗೆ ಮುಂದೂಡಲಾಗಿತ್ತು.
75 ವರ್ಷದ ಸೋನಿಯಾ ಗಾಂಧಿ ಅವರನ್ನು ಜುಲೈ 21ರಂದು ಮೊದಲ ದಿನ ಇಡಿ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ 2 ಗಂಟೆಗಳ ಕಾಲ ಪ್ರಶ್ನಿಸಲಾಯಿತು. ಸೋನಿಯಾ ಗಾಂಧಿ ಅವರ ಮಕ್ಕಳಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಅವರು ಕಳೆದ ವಾರದಂತೆ ಮತ್ತೆ ಇಂದು ಕೂಡ ತಾಯಿಯೊಂದಿಗೆ ಇಡಿ ಕಚೇರಿಗೆ ಬರುವ ನಿರೀಕ್ಷೆಯಿದೆ.
ಕರ್ನಾಟಕ ಕಾಂಗ್ರೆಸ್ನಿಂದ ಮೌನ ಪ್ರತಿಭಟನೆ:
ಇಂದು 2ನೇ ಬಾರಿ ಇಡಿಯಿಂದ ಸೋನಿಯಾ ಗಾಂಧಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮೌನ ಪ್ರತಿಭಟನೆ ನಡೆಸಲಿದೆ. ಈ ಮೌನ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಮುಖಂಡರಿಗೆ ಧರಣಿಯಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ.
ಇಡಿ ವಿಚಾರಣೆ ಹೆಸರಲ್ಲಿ ಸೋನಿಯಾ ಗಾಂಧಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ರಾಷ್ಟ್ರಪತಿಗೆ ದೂರು ನೀಡಲು ಕಾಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದಾರೆ. ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ದೂರು ನೀಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್ ನಾಯಕರು ಭೇಟಿಯಾಗಲಿದ್ದಾರೆ.
ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿರುವುದನ್ನು ಖಂಡಿಸಿ ಇಂದು ಕೂಡ ಪ್ರತಿಭಟನೆ ಮುಂದುವರೆಯುವ ಸಾಧ್ಯತೆಯಿದೆ. ಹೀಗಾಗಿ, ದೆಹಲಿ ಪೊಲೀಸರು ಸಿಆರ್‌ಪಿಎಫ್ ಮತ್ತು ಆರ್‌ಎಎಫ್ ಸಿಬ್ಬಂದಿ ಸೇರಿದಂತೆ ಬೃಹತ್ ಪಡೆಗಳನ್ನು ನಿಯೋಜಿಸುವ ನಿರೀಕ್ಷೆಯಿದೆ. ಸೋನಿಯಾ ಗಾಂಧಿ ಅವರ ನಿವಾಸ ಮತ್ತು ಇಡಿ ಕಚೇರಿ ನಡುವಿನ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಸಂಪೂರ್ಣ ಬ್ಯಾರಿಕೇಡ್ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ: National Herald Case: ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್?; ಸೋನಿಯಾ ಗಾಂಧಿಗೂ ಇದಕ್ಕೂ ಏನು ಸಂಬಂಧ?
ಕಳೆದ ವರ್ಷದ ಕೊನೆಯಲ್ಲಿ ಇಡಿ ಮನಿ ಲಾಂಡರಿಂಗ್ ಕಾಯ್ದೆಯ ಕ್ರಿಮಿನಲ್ ನಿಬಂಧನೆಗಳ ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿದ ನಂತರ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ವಿಚಾರಣೆಯ ಪ್ರಕ್ರಿಯೆ ಪ್ರಾರಂಭಿಸಲಾಯಿತು.
भाजपाई हुकूमत तानाशाही पर उतारू है और हमारा मार्ग सत्याग्रह है।
कल राष्ट्रीय अध्यक्ष श्रीमती सोनिया गांधी जी ED के सामने पेश होंगी।
आज उसी सिलसिले में पार्टी मुख्यालय पर महासचिवों, प्रभारियों और सांसदों ने रणनीतिक बैठक की। pic.twitter.com/Q7wWoviLjy
— Congress (@INCIndia) July 25, 2022
ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹಿರಿಯ ನಾಯಕರು ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಆದರೂ ಮಹಾತ್ಮಾ ಗಾಂಧಿಯವರ ಸ್ಮಾರಕವಾದ ರಾಜ್ ಘಾಟ್‌ನಲ್ಲಿ ‘ಸತ್ಯಾಗ್ರಹ’ ನಡೆಸಲು ಅನುಮತಿ ನೀಡಬೇಕೆಂಬ ಅವರ ಬೇಡಿಕೆಯನ್ನು ದೆಹಲಿ ಪೊಲೀಸರು ತಿರಸ್ಕರಿಸಿದ್ದಾರೆ. ಆ ಪ್ರದೇಶದಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿದೆ.
ಸೋಮವಾರ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಉನ್ನತ ನಾಯಕರು ಸಭೆ ನಡೆಸಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ಸಂಸದರ ಸಭೆಯಲ್ಲಿ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಒಟ್ಟಾಗಿ ಸೇರಿ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
Published On - 10:44 am, Tue, 26 July 22