ಸರ್ವ ಧರ್ಮ ಸಮನ್ವಯ ಸಭೆ: ಪಿಎಫ್​ಐ ನಿಷೇಧಕ್ಕೆ AISSC ಮುಖ್ಯಸ್ಥ ನಾಸಿರುದ್ದೀನ್ ಚಿಸ್ತಿ ಒತ್ತಾಯ

| Updated By: ನಯನಾ ರಾಜೀವ್

Updated on: Jul 30, 2022 | 6:12 PM

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕರೆದಿದ್ದ ಸರ್ವಧರ್ಮ ಸಮನ್ವಯ ಸಭೆಯಲ್ಲಿ ಅಖಿಲ ಭಾರತ ಸೂಫಿ ಸಜ್ಜದನ್ಶಿನ್ ಕೌನ್ಸಿಲ್ (ಎಐಎಸ್‌ಎಸ್‌ಸಿ) ಮುಖ್ಯಸ್ಥ ನಾಸಿರುದ್ದೀನ್ ಚಿಶ್ತಿ ಅವರು ಪಿಎಫ್‌ಐ ನಿಷೇಧಕ್ಕೆ ಒತ್ತಾಯಿಸಿದ್ದಾರೆ.

ಸರ್ವ ಧರ್ಮ ಸಮನ್ವಯ ಸಭೆ: ಪಿಎಫ್​ಐ ನಿಷೇಧಕ್ಕೆ AISSC ಮುಖ್ಯಸ್ಥ ನಾಸಿರುದ್ದೀನ್ ಚಿಸ್ತಿ ಒತ್ತಾಯ
Meeting
Image Credit source: Hindustan Times
Follow us on

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕರೆದಿದ್ದ ಸರ್ವಧರ್ಮ ಸಮನ್ವಯ ಸಭೆಯಲ್ಲಿ ಅಖಿಲ ಭಾರತ ಸೂಫಿ ಸಜ್ಜದನ್ಶಿನ್ ಕೌನ್ಸಿಲ್ (ಎಐಎಸ್‌ಎಸ್‌ಸಿ) ಮುಖ್ಯಸ್ಥ ನಾಸಿರುದ್ದೀನ್ ಚಿಶ್ತಿ ಅವರು ಪಿಎಫ್‌ಐ ನಿಷೇಧಕ್ಕೆ ಒತ್ತಾಯಿಸಿದ್ದಾರೆ. ಯಾವುದೇ ಆಮೂಲಾಗ್ರ ಸಂಘಟನೆಯಾಗಿರಲಿ, ಅವರ ವಿರುದ್ಧ ಪುರಾವೆಗಳಿದ್ದರೆ ಅವುಗಳನ್ನು ನಿಷೇಧಿಸಬೇಕು ಎಂದು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಾಗ ನಾವು ಅದನ್ನು ಖಂಡಿಸುತ್ತೇವೆ. ಏನಾದರೂ ಮಾಡುವ ಸಮಯ ಬಂದಿದೆ. ಆಮೂಲಾಗ್ರ ಸಂಘಟನೆಗಳನ್ನು ನಿಯಂತ್ರಿಸುವುದು ಮತ್ತು ನಿಷೇಧಿಸುವ ಸಮಯ ಸನ್ನಿಹಿತವಾಗಿದೆ ಎಂದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸರ್ವಧರ್ಮ ಸಮನ್ವಯತೆ ಕಾಪಾಡುವ ನಿಟ್ಟಿನಲ್ಲಿ ಸರ್ವಧರ್ಮ ಸಭೆ ಕರೆದಿದ್ದು, ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಎಐಎಸ್‌ಎಸ್‌ಸಿ ಮುಖ್ಯಸ್ಥ ನಾಸಿರುದ್ದೀನ್ ಚಿಸ್ತಿ ಮಾತನಾಡಿ, ಕಳೆದ ಕೆಲವು ದಿನಗಳಿಂದ ಧರ್ಮದ ಬದಲು ಅಧರ್ಮ ನಡೆಯುತ್ತಿದೆ. ಇಂದು ನಮ್ಮ ದೇಶದಲ್ಲಿ ಯುವಕರು ಮೂಲಭೂತವಾದಿಗಳಾಗಿದ್ದಾರೆ. ಇಂತಹ ಮೂಲಭೂತ ಶಕ್ತಿಗಳಿಂದ ನಾವು ಧಾರ್ಮಿಕ ಮುಖಂಡರು ದೇಶವನ್ನು ಉಳಿಸಬೇಕಾಗಿದೆ.

ಹಿಂದೂಸ್ತಾನವು ಒಂದು ಪುಷ್ಪಗುಚ್ಛವಾಗಿದೆ. ಇದರಲ್ಲಿ ಎಲ್ಲಾ ಧರ್ಮ ಮತ್ತು ಪಂಗಡಗಳ ಜನರು ವಾಸಿಸುತ್ತಾರೆ. ಈಗ ನಾವು ಈ ನೆಲಕ್ಕಾಗಿ ಕೆಲಸ ಮಾಡುತ್ತಿದ್ದೇವೆ, ದೇಶದ ಶಾಂತಿ ಸೌಹಾರ್ದತೆ ಕಾಪಾಡಲು ಪ್ರತಿ ರಾಜ್ಯದಲ್ಲೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.

ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರ ಹೇಳಿಕೆಯನ್ನು ಬೆಂಬಲಿಸಿ ಪೋಸ್ಟ್​ ಮಾಡಿದ್ದಕ್ಕೆ ಉದಯಪುರದಲ್ಲಿ ಟೈಲರ್ ಓರ್ವನನ್ನು ಹತ್ಯೆ ಮಾಡಿ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಮಹಾರಾಷ್ಟ್ರದಲ್ಲೂ ಇದೇ ಮಾದರಿಯ ಘಟನೆ ವರದಿಯಾಗಿತ್ತು. ಮಹಾರಾಷ್ಟ್ರದ ಅಮರಾವತಿಯಲ್ಲಿ ಇದೇ ರೀತಿಯ ದ್ವೇಷದ ಹತ್ಯೆ ನಡೆದಿದ್ದು, ಉಮೇಶ್ ಕೋಲ್ಹೆ ಎಂಬ ಔಷಧಿಕಾರನನ್ನು ಹತ್ಯೆ ಮಾಡಲಾಗಿದೆ.

ಪಿಎಫ್​ಐ ಸೇರಿ ಇತರೆ ಸಂಘಟನೆಗಳ ನಿಷೇಧದ ಕುರಿತು ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಚರ್ಚೆ ಎದ್ದಿದೆ.

 

Published On - 5:59 pm, Sat, 30 July 22