ದೆಹಲಿ: ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಕೊವಿಡ್-19 ಹರಡುತ್ತಿರುವ ರೀತಿ ಮತ್ತು ವೇಗದ ಬಗ್ಗೆ ಮಾಹಿತಿ ಕಲೆಹಾಕಲು ರಾಷ್ಟ್ರೀಯ ಮಟ್ಟದ ‘ಸೆರೊ ಸರ್ವೆ’ (ಜನರಲ್ಲಿ ಬೆಳೆದಿರುವ ಪ್ರತಿಕಾಯಗಳ ಸಮೀಕ್ಷೆ) ನಡೆಸಲು ಮುಂದಾಗಿದೆ. ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ಥಳೀಯವಾಗಿ ಈ ಸಮೀಕ್ಷೆಗೆ ಸಹಕಾರ ನೀಡಬೇಕು. ಆಗ ಎಲ್ಲ ಭೌಗೋಳಿಕ ವ್ಯಾಪ್ತಿಯ ನಿಖರ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಶುಕ್ರವಾರ ಹೇಳಿದೆ.
ದೇಶದಲ್ಲಿ ಕೊವಿಡ್ ಸೋಂಕಿನ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ ಜನರು ಯಾಮಾರಬಾರದು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ಸಾಮಾಜಿಕ ಅಂತರ ಪಾಲನೆ ಮರೆಯಬಾರದು ಎಂದು ತಿಳಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಸೆರೊ ಸರ್ವೆಯನ್ನು ರಾಷ್ಟ್ರಮಟ್ಟದಲ್ಲಿ ನಡೆಸಲಿದೆ. ರಾಜ್ಯಮಟ್ಟದಲ್ಲಿ ಇದನ್ನು ರಾಜ್ಯ ಸರ್ಕಾರಗಳು ಯೋಜಿಸಬೇಕು ಎಂದು ಸಲಹೆ ಮಾಡಿದೆ. ಮೇ 7ರಂದು ದೇಶದಲ್ಲಿ ಅತಿಹೆಚ್ಚಿನ ಸಂಖ್ಯೆಯ ಕೊರೊನಾ ಸೋಂಕು ವರದಿಯಾಗಿತ್ತು. ಈಚಿನ ದಿನಗಳಲ್ಲಿ ಇದು ಶೇ 78ರಷ್ಟು ಕಡಿಮೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೊವಿಡ್-19 ಪಾಸಿಟಿವಿಟಿ ಪ್ರಮಾಣದಲ್ಲಿಯೂ ಶೇ 74ರಷ್ಟು ಕಡಿಮೆಯಾಗಿದೆ. ಏಪ್ರಿಲ್ 30ರಿಂದ ಮೇ 6ರ ಅವಧಿಯಲ್ಲಿ ಅತಿಹೆಚ್ಚು ಅಂದರೆ, ಶೇ 21.6ರಷ್ಟು ಪಾಸಿಟಿವಿಟಿ ಪ್ರಮಾಣ ವರದಿಯಾಗುತ್ತಿತ್ತು. ಸೋಂಕು ಪ್ರಮಾಣ ತಡೆಯಲು ಸೋಂಕಿನ ಸರಪಳಿ ತುಂಡರಿಸುವುದು ಅತಿ ಅಗತ್ಯ. ಇದರಿಂದ ದೇಶದ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ರೋಗಿಗಳಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುವುದು ಸಾಧ್ಯವಾಗುತ್ತದೆ ಎಂದು ಹೇಳಿದೆ.
ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಇಲಾಖೆಯು (Food and Drug Administration – FDA) ಭಾರತ್ ಬಯೊಟೆಕ್ನ ಕೊವಿಡ್ ಲಸಿಕೆ ಕೊವ್ಯಾಕ್ಸಿನ್ ತುರ್ತು ಬಳಕೆ ಅನುಮತಿ ನಿರಾಕರಿಸುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವಲಾಯವು, ನಾವು ಪ್ರತಿ ದೇಶದ ನಿಯಂತ್ರಣ ವ್ಯವಸ್ಥೆಯನ್ನು ಗೌರವಿಸುತ್ತೇವೆ. ಇದರಿಂದ ಭಾರತದ ಲಸಿಕಾ ಕಾರ್ಯಕ್ರಮದಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಹೇಳಿದೆ.
(National Sero Survey to assess covid 19 spread ICMR to conduct at national level says health ministry)
ಇದನ್ನೂ ಓದಿ: Fact Check: ಕೊರೊನಾ ಲಸಿಕೆಯಿಂದ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಉಂಟಾಗುತ್ತದೆಯೇ? ಇಲ್ಲಿದೆ ವಿವರ
ಇದನ್ನೂ ಓದಿ: ರಾಜ್ಯಗಳ ಬಳಿ 1.17 ಕೋಟಿ ಡೋಸ್ ಕೊವಿಡ್ ಲಸಿಕೆ ಲಭ್ಯ: ಕೇಂದ್ರ ಆರೋಗ್ಯ ಇಲಾಖೆ
Published On - 9:28 pm, Fri, 11 June 21