ಪಾಕ್ ಪ್ರಧಾನಿ ಇಮ್ರಾನ್ ಖಾನ್ ನನ್ನ ಅಣ್ಣ; ಮತ್ತೊಮ್ಮೆ ವಿವಾದಕ್ಕೀಡಾದ ನವಜೋತ್ ಸಿಂಗ್ ಸಿಧು

| Updated By: ಸುಷ್ಮಾ ಚಕ್ರೆ

Updated on: Nov 20, 2021 | 4:29 PM

ಇದರ ಜೊತೆಗೆ ಇನ್ನೊಂದು ಹೇಳಿಕೆಯನ್ನೂ ನೀಡಿರುವ ನವಜೋತ್ ಸಿಂಗ್ ಸಿಧು, ಪಂಜಾಬ್​ನ ಭವಿಷ್ಯ ಚೆನ್ನಾಗಿರಬೇಕೆಂದರೆ ಪಾಕಿಸ್ತಾನಕ್ಕೆ ಗಡಿಯನ್ನು ತೆರೆಯಬೇಕು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರೆ ಇದು ಸಾಧ್ಯವಾಗಲಿದೆ ಎಂದಿದ್ದಾರೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ನನ್ನ ಅಣ್ಣ; ಮತ್ತೊಮ್ಮೆ ವಿವಾದಕ್ಕೀಡಾದ ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
Follow us on

ನವದೆಹಲಿ: ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು (Navjot Singh Sidhu) ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷವನ್ನು ಸಿಧು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇಂದು ಪಾಕಿಸ್ತಾನದ (Pakistan) ಕರ್ತಾರ್‌ಪುರ ಸಾಹಿಬ್​ಗೆ ಭೇಟಿ ನೀಡಿರುವ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ನನ್ನ ಅಣ್ಣ ಎಂದು ಹೇಳುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕ್ರಿಕೆಟ್​ ಆಡುತ್ತಿದ್ದ ದಿನಗಳಿಂದಲೂ ಇಮ್ರಾನ್ ಖಾನ್ ನನ್ನ ಗೆಳೆಯ ಹಾಗೂ ಅಣ್ಣನಂತಿದ್ದರು ಎಂದು ಸಿಧು ಬಣ್ಣಿಸಿದ್ದಾರೆ.

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರಿಗೆ ಪಾಕಿಸ್ತಾನದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಪಿಎಂಯು ಸಿಇಒ ಮೊಹಮ್ಮದ್ ಲತೀಫ್ ಅವರೊಂದಿಗೆ ಮಾತನಾಡಿದ ನವಜೋತ್ ಸಿಂಗ್ ಸಿಧು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನನ್ನ ಅಣ್ಣನಿದ್ದಂತೆ ಎಂದಿದ್ದಾರೆ. ನವಜೋತ್ ಸಿಂಗ್ ಪಾಕ್ ಪ್ರಧಾನಿಯನ್ನು ಹೊಗಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಪಾಲ್ಗೊಂಡಿದ್ದ ಸಿಧು ಅವರ ಪಾಕಿಸ್ತಾನ ಪರ ಧೋರಣೆಯನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೂಡ ಖಂಡಿಸಿವೆ. ಇದೀಗ ಮತ್ತೊಮ್ಮೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಣ್ಣಿಸುವ ಮೂಲಕ ನವಜೋತ್ ಸಿಂಗ್ ಕಾಂಗ್ರೆಸ್ ವಿರುದ್ಧ ವಿಪಕ್ಷಗಳಿಗೆ ವಾಗ್ದಾಳಿ ನಡೆಸಲು ತಾವೇ ಅನುವು ಮಾಡಿಕೊಟ್ಟಂತಾಗಿದೆ.

ಈ ಬಗ್ಗೆ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿ ಅವರ ಅತ್ಯಾಪ್ತರಾದ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರನ್ನು ಅಣ್ಣ ಎಂದು ಕರೆದಿದ್ದಾರೆ. ಈ ಹಿಂದೆ ಸಿಧು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜೆನ್ ಬಾಜ್ವಾ ಅವರನ್ನು ತಬ್ಬಿಕೊಂಡು ವಿವಾದಕ್ಕೀಡಾಗಿದ್ದರು. ಕಾಂಗ್ರೆಸ್ ಹಿರಿಯ ನಾಯಕ ಅಮರೀಂದರ್ ಸಿಂಗ್ ಅವರ ಬದಲು ಪಾಕಿಸ್ತಾನ ಪ್ರೇಮಿ ನವಜೋತ್ ಸಿಂಗ್ ಸಿಧುಗೆ ಗಾಂಧಿ ಕುಟುಂಬ ಮಣೆ ಹಾಕುತ್ತಿರುವುದನ್ನು ನೋಡಿದರೆ ಅಚ್ಚರಿಯಾಗುತ್ತಿದೆ ಎಂದು ಟೀಕಿಸಿದ್ದಾರೆ.

ಇದರ ಜೊತೆಗೆ ಇನ್ನೊಂದು ಹೇಳಿಕೆಯನ್ನೂ ನೀಡಿರುವ ನವಜೋತ್ ಸಿಂಗ್ ಸಿಧು, ಪಂಜಾಬ್​ನ ಭವಿಷ್ಯ ಚೆನ್ನಾಗಿರಬೇಕೆಂದರೆ ಪಾಕಿಸ್ತಾನಕ್ಕೆ ಗಡಿಯನ್ನು ತೆರೆಯಬೇಕು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರೆ ಇದು ಸಾಧ್ಯವಾಗಲಿದೆ ಎಂದಿದ್ದಾರೆ.

ಭಾರತವು ಗಡಿ ನಿಯಂತ್ರಣ ರೇಖೆಯ ಇನ್ನೊಂದು ಬದಿಯಿಂದ ರಾಷ್ಟ್ರೀಯ ಭದ್ರತೆಗೆ ನಿರಂತರ ಬೆದರಿಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ವ್ಯಾಪಾರಕ್ಕಾಗಿ ಪಾಕಿಸ್ತಾನದೊಂದಿಗಿನ ತನ್ನ ಗಡಿಯನ್ನು ತೆರೆಯುವಂತೆ ಭಾರತ ಸರ್ಕಾರವನ್ನು ಸಿಧು ಒತ್ತಾಯಿಸಿದ್ದಾರೆ. ನೀವು ಪಂಜಾಬ್‌ನ ಜೀವನವನ್ನು ಬದಲಾಯಿಸಲು ಬಯಸಿದರೆ, ಪಾಕಿಸ್ತಾನಕ್ಕೆ ಗಡಿಗಳನ್ನು ತೆರೆಯಬೇಕು. ನಾವು ಮುಂದ್ರಾ ಬಂದರಿನ ಮೂಲಕ ಒಟ್ಟು 2,100 ಕಿಮೀ ಏಕೆ ಹೋಗಬೇಕು? ಇಲ್ಲಿಂದ ಕೇವಲ 21 ಕಿಮೀ (ಪಾಕಿಸ್ತಾನಕ್ಕೆ) ಇರುವಲ್ಲಿ ಏಕೆ ವ್ಯಾಪಾರ ಮಾಡಬಾರದು? ಎಂದು ನವಜೋತ್ ಸಿಂಗ್ ಸಿಧು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Chemical Castration: ಪಾಕಿಸ್ತಾನದಲ್ಲಿ ಅತ್ಯಾಚಾರಿಗಳಿಗೆ ಕೆಮಿಕಲ್ ಕ್ಯಾಸ್ಟ್ರೇಷನ್‌ ಶಿಕ್ಷೆ ನೀಡಲು ಒಪ್ಪಿಗೆ

Navjot Singh Sidhu: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆದ ನವಜೋತ್ ಸಿಂಗ್ ಸಿಧು