Nawab Malik: ಬಂಧನಕ್ಕೊಳಗಾಗಿರುವ ಸಚಿವ ನವಾಬ್ ಮಲಿಕ್ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲು

| Updated By: ಸುಷ್ಮಾ ಚಕ್ರೆ

Updated on: Feb 25, 2022 | 6:28 PM

ಇಂದು ಬೆಳಗ್ಗೆ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನವಾಬ್ ಮಲಿಕ್ ಅವರನ್ನು ಸಾಮಾನ್ಯ ವೈದ್ಯಕೀಯ ತಪಾಸಣೆಗಾಗಿ ಇಡಿ ಅಧಿಕಾರಿಗಳು ಜೆಜೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಗ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿದೆ.

Nawab Malik: ಬಂಧನಕ್ಕೊಳಗಾಗಿರುವ ಸಚಿವ ನವಾಬ್ ಮಲಿಕ್ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲು
ನವಾಬ್ ಮಲಿಕ್
Follow us on

ಮುಂಬೈ: ಮುಂಬೈ ಭೂಗತ ಜಗತ್ತಿನ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಚಿವ, ಎನ್​ಸಿಪಿ ನಾಯಕ ನವಾಬ್ ಮಲಿಕ್ (Nawab Malik) ಅವರನ್ನು ಬುಧವಾರ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಹೊಟ್ಟೆ ನೋವಿನಿಂದ ಬಳಲುತ್ತಿರುವುದರಿಂದ ಅವರನ್ನು ಇಂದು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನವಾಬ್ ಮಲಿಕ್ ಅವರನ್ನು ಸಾಮಾನ್ಯ ವೈದ್ಯಕೀಯ ತಪಾಸಣೆಗಾಗಿ ಇಡಿ ಅಧಿಕಾರಿಗಳು ಜೆಜೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಎನ್​ಸಿಪಿ ಪಕ್ಷದ ಮೂಲಗಳು ತಿಳಿಸಿವೆ.

ತಪಾಸಣೆ ಹೋದ ನವಾಬ್ ಮಲಿಕ್ ಅವರನ್ನು ವೈದ್ಯರ ಸಲಹೆಯಂತೆ ಜೆಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ವೈದ್ಯಕೀಯ ಕಾರಣಗಳಿಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನವಾಬ್ ಮಲಿಕ್ ಅವರ ಕಚೇರಿಯ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ.

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಲಿಕ್ ಅವರನ್ನು ಬುಧವಾರ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇಡಿ ಅಧಿಕಾರಿಗಳು ಬುಧವಾರ ಬೆಳಗ್ಗೆ ಮಲಿಕ್ ಅವರ ನಿವಾಸಕ್ಕೆ ಆಗಮಿಸಿ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಹುಡುಕಾಟದ ನಂತರ, ಮಲಿಕ್ ಅವರಿಗೆ ನೋಟಿಸ್ ನೀಡಲಾಯಿತು. ಬಳಿಕ ಬುಧವಾರ ಮಧ್ಯಾಹ್ನ 2:45 ರ ಸುಮಾರಿಗೆ ನವಾಬ್ ಮಲಿಕ್ ಅವರು ತನಿಖೆಗೆ ಸಹಕರಿಸದ ಕಾರಣ ಅವರನ್ನು ಬಂಧಿಸಲಾಯಿತು. ನಂತರ ಮಲಿಕ್ ಅವರನ್ನು ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವರು ಮಾರ್ಚ್ 3 ರವರೆಗೆ ನವಾಬ್ ಮಲಿಕ್ ಅವರನ್ನು ಇಡಿ ಕಸ್ಟಡಿಗೆ ನೀಡಿದೆ.

ಅಕ್ರಮ ಆಸ್ತಿ ವ್ಯವಹಾರಗಳು ಮತ್ತು ಹವಾಲಾ ವಹಿವಾಟು, ಭೂಗತ ಜಗತ್ತಿನ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಫೆಬ್ರವರಿ 15ರಂದು ನವಾಬ್ ಮಲಿಕ್ ವಿರುದ್ಧ ಮುಂಬೈನಲ್ಲಿ ಹೊಸ ಕೇಸ್ ದಾಖಲಿಸಿದ ನಂತರ ಇಡಿ ನವಾಬ್ ಮಲಿಕ್ ಅವರನ್ನು ವಶಕ್ಕೆ ಪಡೆದಿತ್ತು.

ಇದನ್ನೂ ಓದಿ: ಭೂಗತ ಲೋಕದ ನಂಟಿನ ಸಂಕಟ; ಎನ್​ಸಿಪಿ ನಾಯಕ ನವಾಬ್​ ಮಲಿಕ್​ ಬಂಧನದ ಬೆನ್ನಲ್ಲೇ ಸೋದರನಿಗೂ ಸಮನ್ಸ್​ ನೀಡಿದ ಇ.ಡಿ.

Big Breaking: ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​​ ಮಲಿಕ್​​ರನ್ನು ಬಂಧಿಸಿದ ಇ.ಡಿ.