ಭೂಗತ ಲೋಕದ ನಂಟಿನ ಸಂಕಟ; ಎನ್ಸಿಪಿ ನಾಯಕ ನವಾಬ್ ಮಲಿಕ್ ಬಂಧನದ ಬೆನ್ನಲ್ಲೇ ಸೋದರನಿಗೂ ಸಮನ್ಸ್ ನೀಡಿದ ಇ.ಡಿ.
ಭೂಗತ ಪಾತಕಿ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ದಾವೂದ್ ಇಬ್ರಾಹಿಂ ಆತನ ಸಹೋದರ ಅನೀಸ್ ಇಕ್ಬಾಲ್, ಸಹಾಯಕ ಚೋಟಾ ಶಕೀಲ್ ಮತ್ತು ಇತರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಅಕ್ರಮ ಹಣವರ್ಗಾವಣೆ ಕೇಸ್ ದಾಖಲಾಗಿದೆ.
ಭೂಗತ ಪಾತಕಿಗಳೊಂದಿಗೆ ಆಸ್ತಿ ವ್ಯವಹಾರ, ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಬಂಧಿಸಲ್ಪಟ್ಟಿರುವ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ (Nawab Malik) ಸೋದರ, ಕಪ್ತನ್ ಮಲಿಕ್ಗೂ ಕೂಡ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ದಾವೂದ್ ಇಬ್ರಾಹಿಂ (Dawood Ibrahim) ಮತ್ತು ಆತನ ಸಹಚರರ ವಿರುದ್ಧ ಅಕ್ರಮ ಹಣ ವರ್ಗಾವಣೆ, ಭ್ರಷ್ಟಾಚಾರ ಪ್ರಕರಣ ದಾಖಲಿಸಿರುವ ಇ.ಡಿ. ಸಂಬಂಧಪಟ್ಟ ಸ್ಥಳಗಳ ಮೇಲೆ ರೇಡ್ ಮಾಡುತ್ತಿದೆ. ಹಾಗೇ, ಈ ಕೇಸ್ನಲ್ಲಿ ಸಂಪರ್ಕ ಹೊಂದಿರುವ ಹಲವರ ಮೇಲೆ ನಿಗಾ ಇಟ್ಟಿದೆ. ನವಾಬ್ ಮಲಿಕ್ ಬಂಧನಕ್ಕೆ ಕಾರಣವಾದ ಪ್ರಕರಣದಡಿಯಲ್ಲೇ ಅವರ ಸೋದರನಿಗೂ ಸಮನ್ಸ್ ನೀಡಿದ್ದಾಗಿ ಇ.ಡಿ. ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, ನವಾಬ್ ಮಲಿಕ್ ಸೋದರಿಯೂ ಇಂದು ಇ.ಡಿ. ಕಚೇರಿಗೆ ಭೇಟಿ ನೀಡಿದ್ದರು. ಈ ಮಧ್ಯೆ ನವಾಬ್ ಮಲಿಕ್ರನ್ನು ಮಾರ್ಚ್ 3ರವರೆಗೂ ಇ.ಡಿ.ಕಸ್ಟಡಿಗೆ ವಹಿಸಲಾಗಿದೆ.
ಭೂಗತ ಪಾತಕಿ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ದಾವೂದ್ ಇಬ್ರಾಹಿಂ, ಆತನ ಸಹೋದರ ಅನೀಸ್ ಇಕ್ಬಾಲ್, ಸಹಾಯಕ ಚೋಟಾ ಶಕೀಲ್ ಮತ್ತು ಇತರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಅಕ್ರಮ ಹಣವರ್ಗಾವಣೆ ಕೇಸ್ ದಾಖಲಿಸಿರುವ ಇ.ಡಿ. ಕಳೆದ ವಾರ ಮುಂಬೈನಲ್ಲಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಸಂಬಂಧಪಟ್ಟ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರೇಡ್ ಮಾಡಿತ್ತು. ರಾಷ್ಟ್ರೀಯ ತನಿಖಾ ದಳ (NIA) ದಾಖಲಿಸಿದ್ದ ಎಫ್ಐಆರ್ ಆಧಾರದಲ್ಲಿ ಇ.ಡಿ. ಈ ದಾಳಿ ನಡೆಸಿ, ತನಿಖೆ ಕೈಗೆತ್ತಿಕೊಂಡಿದೆ.
ಮಹಾರಾಷ್ಟ್ರದಲ್ಲಿ ಇ.ಡಿ.ಬಂಧಿಸುತ್ತಿರುವ ಎರಡನೇ ಸಚಿವ ಈ ನವಾಬ್ ಮಲಿಕ್. ಈ ಹಿಂದೆ 2021ರ ನವೆಂಬರ್1ರಂದು ತಡರಾತ್ರಿ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಅವರನ್ನು ಬಂಧಿಸುವುದಕ್ಕೂ ಮೊದಲು ಸತತ 12 ಗಂಟೆ ವಿಚಾರಣೆಗೆ ಒಳಪಡಿಸಲಾಗಿತ್ತು. ಪೊಲೀಸ್ ಇಲಾಖೆಯಲ್ಲಿ ₹100 ಕೋಟಿ ರೂಪಾಯಿ ಲಂಚ ವಸೂಲಿ, ಸುಲಿಗೆ ಕುರಿತು ಮುಂಬೈ ಪೊಲೀಸ್ ಕಮಿಷನರ್ ಪರಮ್‌ಬೀರ್ ಸಿಂಗ್ ಅವರು ದೇಶ್ಮುಖ್ ವಿರುದ್ಧ ಆರೋಪ ಮಾಡಿದ್ದರು.
ಇದನ್ನೂ ಓದಿ: Stock Market Crash: ಸೆನ್ಸೆಕ್ಸ್ 2000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ; 1 ಗಂಟೆಗೂ ಕಡಿಮೆ ಸಮಯದಲ್ಲಿ 8 ಲಕ್ಷ ಕೋಟಿ ನಷ್ಟ