ಕಂಠಪೂರ್ತಿ ಕುಡಿದು ಹಳ್ಳಿಯ ರಸ್ತೆಯಲ್ಲಿ ಬೆತ್ತಲೆಯಾಗಿ ಅಲೆದಾಡಿದ ಜೆಡಿಯು ಮುಖಂಡ; ಸಿಎಂ ನಿತೀಶ್ ಕುಮಾರ್ಗೆ ತೀವ್ರ ಮುಜುಗರ
ಜಯಪ್ರಕಾಶ್ ಕಂಠಪೂರ್ತಿ ಕುಡಿದು, ತಾನೇನು ಮಾಡುತ್ತಿದ್ದೇನೆ ಎಂಬುದನ್ನು ತಿಳಿಯದ ಸ್ಥಿತಿಗೆ ತಲುಪಿದ್ದ. ಆತ ಮನೆಯ ಬಳಿ ತನ್ನ ಬಟ್ಟೆಯನ್ನೆಲ್ಲ ಕಳಚಿ, ಬೆತ್ತಲೆಯಾಗಿ ರೋಡ್ ಮೇಲೆ ಓಡಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
ಪಾಟ್ನಾ: ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ. ಅದರಾಚೆಗೆ ಮದ್ಯದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) ಸರ್ಕಾರ ಸಮಾಜ ಸುಧಾರಣಾ ಅಭಿಯಾನ ಹಮ್ಮಿಕೊಂಡಿದೆ. ಮದ್ಯ ವ್ಯಸನಕ್ಕೆ ದಾಸರಾದರೆ ವ್ಯಕ್ತಿಯ ದೇಹದ ಆರೋಗ್ಯ ಹದಗೆಡುವ ಜತೆ, ಆತನ ಆರ್ಥಿಕ, ಸಾಮಾಜಿಕ ಆರೋಗ್ಯಕ್ಕೂ ಮಾರಕ ಎಂಬ ಸಂದೇಶವನ್ನು ಬಿಹಾರ ಸರ್ಕಾರ ನಿರಂತರವಾಗಿ ನೀಡುತ್ತಲೇ ಬಂದಿದೆ. ಆದರೆ ಇದೀಗ ಜೆಡಿಯು ನಾಯಕನೊಬ್ಬ ಸರ್ಕಾರಕ್ಕೆ ತೀವ್ರ ಮುಜುಗರ ತರುವಂಥ ಕೆಲಸ ಮಾಡಿದ್ದಾರೆ. ಕಂಠ ಪೂರ್ತಿ ಕುಡಿದು, ಸಾರ್ವಜನಿಕ ಸ್ಥಳಗಳಲ್ಲಿ ಬೆತ್ತಲೆಯಾಗಿ ಅಲೆದಿದ್ದಾರೆ. ಈ ಘಟನೆ ಬಿಹಾರದ ನಲಂದಾದಲ್ಲಿ ನಡೆದಿದ್ದು, ಸದ್ಯ ಆ ಜೆಡಿಯು ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಕುಡಿದು ಅಮಲೇರಿಸಿಕೊಂಡು ಬೆತ್ತಲೆ ಓಡಾಡಿದ ಜೆಡಿಯು ನಾಯಕನ ಹೆಸರು ಜಯಪ್ರಕಾಶ್ ಪ್ರಸಾದ್ ಅಲಿಯಾಸ್ ಕಲು ಎಂದಾಗಿದೆ. ಇಸ್ಲಾಂಪುರ ವಿಧಾನಸಭಾ ಕ್ಷೇತ್ರದ ಜೆಡಿಯು ಯುವ ಘಟಕದ ಮುಖ್ಯಸ್ಥ. ನಲಂದಾದ ಜಗದೀಶ್ಪುರ ಗ್ರಾಮದಲ್ಲಿ ಹೀಗೆ ಕೆಟ್ಟದಾಗಿ ವರ್ತನೆ ಮಾಡಿದ್ದಾರೆ. ಈತ ಹಲವು ವರ್ಷಗಳಿಂದ ಜೆಡಿಯುನಲ್ಲಿ ಇದ್ದಿದ್ದಾಗ ಜೆಡಿ-ಯು ಇಸ್ಲಾಂಪುರ ಬ್ಲಾಕ್ ಅಧ್ಯಕ್ಷ ತನ್ವೀರ್ ಆಲಂ ತಿಳಿಸಿದ್ದಾರೆ. ಜಯಪ್ರಕಾಶ್ ಕಂಠಪೂರ್ತಿ ಕುಡಿದು, ತಾನೇನು ಮಾಡುತ್ತಿದ್ದೇನೆ ಎಂಬುದನ್ನು ತಿಳಿಯದ ಸ್ಥಿತಿಗೆ ತಲುಪಿದ್ದ. ಆತ ಮನೆಯ ಬಳಿ ತನ್ನ ಬಟ್ಟೆಯನ್ನೆಲ್ಲ ಕಳಚಿ, ಬೆತ್ತಲೆಯಾಗಿ ರೋಡ್ ಮೇಲೆ ಓಡಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಮನೆಯೊಳಗೇ ಇರು ಎಂದು ಆತನ ಸೋದರ ಹೇಳಿದರೂ ಜಯಪ್ರಕಾಶ್ ಒಪ್ಪುವುದಿಲ್ಲ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದೂ ತನ್ವೀರ್ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಇಸ್ಲಾಂಪುರ ಠಾಣೆ ಮುಖ್ಯ ಅಧಿಕಾರಿ ಚಂದ್ರಶೇಖರ್ ಸಿಂಗ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ, ಜಗದೀಶ್ಪುರ ಗ್ರಾಮದಲ್ಲಿ ಗಲಾಟೆ ಮಾಡುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಲ್ಲಿಗೆ ಹೋದೆವು. ಅಲ್ಲಿ ಹೋಗಿ ನೋಡಿದರೆ ಆತ ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುವಷ್ಟು ಕುಡಿದಿದ್ದ. ಕೊವಿಡ್ 19 ಕೂಡ ಪಾಸಿಟಿವ್ ಬಂದಿದೆ. ಸದ್ಯ ಲಿಕ್ಕರ್ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಾದಿಯೇ ತೋರಿದ ಹಾದಿ: ಈ ಊರಿಗೆ ಆಸ್ಪತ್ರೆಯಿಲ್ಲ ಬಸ್ಸಿಲ್ಲ ದೇವಸ್ಥಾನವೂ ಇಲ್ಲ