200 ಶಾಸಕರಿಗೆ ಐಫೋನ್​ ಗಿಫ್ಟ್ ನೀಡಿದ ರಾಜಸ್ಥಾನ ಕಾಂಗ್ರೆಸ್ ಸರ್ಕಾರ; ವಾಪಸ್​ ಕೊಡಲು ನಿರ್ಧರಿಸಿದ ಬಿಜೆಪಿ ಶಾಸಕರು

ವಿಧಾನಸಭೆಯಲ್ಲಿ ಕಾಗದ ರಹಿತ ವ್ಯವಹಾರ ನಡೆಸುವುದು, ಹೈಟೆಕ್​ಗೊಳಿಸುವುದು ತಪ್ಪಲ್ಲ. ನಿಜಕ್ಕೂ ಒಳ್ಳೆಯ ನಿರ್ಧಾರ . ಆದರೆ ಅದಕ್ಕಾಗಿ ಇಷ್ಟು ಬೃಹತ್​ ಮೊತ್ತದ ಹಣ ವ್ಯಯ ಮಾಡುವುದು ಕೂಡ ಸರಿಯಲ್ಲ ಎಂಬುದು ಬಿಜೆಪಿ ಶಾಸಕರ ವಾದ.

200 ಶಾಸಕರಿಗೆ ಐಫೋನ್​ ಗಿಫ್ಟ್ ನೀಡಿದ ರಾಜಸ್ಥಾನ ಕಾಂಗ್ರೆಸ್ ಸರ್ಕಾರ; ವಾಪಸ್​ ಕೊಡಲು ನಿರ್ಧರಿಸಿದ ಬಿಜೆಪಿ ಶಾಸಕರು
ಅಶೋಕ್​ ಗೆಹ್ಲೋಟ್​
Follow us
TV9 Web
| Updated By: Lakshmi Hegde

Updated on: Feb 24, 2022 | 11:33 AM

ಜೈಪುರ: ರಾಜಸ್ಥಾನದ ಕಾಂಗ್ರೆಸ್​ ಸರ್ಕಾರ (Rajasthan Government) ರಾಜ್ಯದ ಎಲ್ಲ 200 ಶಾಸಕರಿಗೆ  ಐಫೋನ್​ 13 ಗಳನ್ನು ಉಡುಗೋರೆಯನ್ನಾಗಿ ನೀಡಿತ್ತು. ನಿನ್ನೆ (ಫೆ.23) ರಾಜ್ಯ ಬಜೆಟ್​ ಮಂಡನೆ ಮಾಡಿದ ಬಳಿಕ ಶಾಸಕರಿಗೆ ಐಫೋನ್​ (iPhone) ಉಡುಗೊರೆ ನೀಡಲಾಗಿತ್ತು. ಆದರೆ ಬಿಜೆಪಿ ಶಾಸಕರು ತಮಗೆ ನೀಡಲಾದ ಐಫೋನ್​ನ್ನು ವಾಪಸ್​ ನೀಡಲು ನಿರ್ಧರಿಸಿದ್ದಾರೆ. ಒಂದು ಐಫೋನ್​ಗೇ 70 ಸಾವಿರ ರೂಪಾಯಿ ಬೆಲೆ ಇರುತ್ತದೆ. ಅಂಥದ್ದರಲ್ಲಿ ಇಷ್ಟೊಂದು ಪ್ರಮಾಣದ ಐಫೋನ್​​ ಹಂಚಲಾಗಿದ್ದು, ಇದು ರಾಜ್ಯಕ್ಕೆ ಆರ್ಥಿಕ ಹೊರೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸತೀಶ್ ಪೂಂಜಾ, ರಾಜಸ್ಥಾನ ವಿಧಾನಸಭೆ ಪ್ರತಿಪಕ್ಷ ಉಪನಾಯಕ (ಬಿಜೆಪಿ ನಾಯಕ) ರಾಜೇಂದ್ರ ಜೀ ಮತ್ತು ರಾಜಸ್ಥಾನ ಮಾಜಿ ಗೃಹಸಚಿವ, ಬಿಜೆಪಿ ಹಿರಿಯ ಮುಖಂಡ ಗುಲಾಬ್​ ಚಾಂದ್​ ಕಟಾರಿಯಾ ಅವರೊಂದಿಗೆ ಚರ್ಚೆ ನಡೆಸಿ, ಐಫೋನ್​​ಗಳನ್ನು ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿದ್ದೇವೆ. ರಾಜ್ಯಕ್ಕೆ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್​ ಸರ್ಕಾರ ಹೀಗೆ ಶಾಸಕರಿಗೆ ದುಬಾರಿ ಉಡುಗೊರೆ ಕೊಡುತ್ತಿರುವುದು ಇದೇ ಮೊದಲೇನೂ ಅಲ್ಲ. 2021ರ ಬಜೆಟ್ ಮಂಡನೆಯ ಬಳಿಕ 200 ಶಾಸಕರಿಗೆ ಐ ಪ್ಯಾಡ್​ಗಳನ್ನು ನೀಡಿತ್ತು.  ಈ ಬಾರಿ ಫೆ.23 (ನಿನ್ನೆ)ರಂದು ಬಜೆಟ್ ಮಂಡನೆ ಮಾಡಲಾಗಿದೆ. ಅಧಿವೇಶನ ಮುಗಿದು, ಹೊರಡುವ ಹೊತ್ತಿಗೆ ಶಾಸಕರಿಗೆ ಒಂದು ಬ್ರೀಫ್​ಕೇಸ್​ ಕೊಡಲಾಗಿದ್ದು, ಅದರಲ್ಲಿ ಐಫೋನ್​ 13 ಇದೆ.  ಕಾಂಗ್ರೆಸ್​ ಪಕ್ಷದ ಶಾಸಕರು ಇದಕ್ಕೆ ಪ್ರತಿಕ್ರಿಯೆ ನೀಡಿ,  ವಿಧಾನಸಭೆಯನ್ನು ಕಾಗದ ರಹಿತಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಸದನವನ್ನು ಹೈಟೆಕ್​ ಮಾಡುವ ಉದ್ದೇಶ ಹೊಂದಲಾಗಿದೆ. ಈ ಕಾರಣಕ್ಕೆ ಶಾಸಕರಿಗೆ ಐಫೋನ್​​ಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಆದರೆ ಬಿಜೆಪಿಗರು ಇದನ್ನು ಸುತಾರಾಂ ಒಪ್ಪಿಕೊಳ್ಳುತ್ತಿಲ್ಲ. ವಿಧಾನಸಭೆಯಲ್ಲಿ ಕಾಗದ ರಹಿತ ವ್ಯವಹಾರ ನಡೆಸುವುದು, ಹೈಟೆಕ್​ಗೊಳಿಸುವುದು ತಪ್ಪಲ್ಲ. ನಿಜಕ್ಕೂ ಒಳ್ಳೆಯ ನಿರ್ಧಾರ . ಆದರೆ ಅದಕ್ಕಾಗಿ ಇಷ್ಟು ಬೃಹತ್​ ಮೊತ್ತದ ಹಣ ವ್ಯಯ ಮಾಡುವುದು ಕೂಡ ಸರಿಯಲ್ಲ. ಅದರಲ್ಲೂ ರಾಜ್ಯದ ಆರ್ಥಿಕತೆ ಈಗಾಗಲೇ ದುರ್ಬಲಗೊಂಡಿರುವ ಹೊತ್ತಲ್ಲಿ, ಫೋನ್​​ಗಾಗಿ ಕೋಟ್ಯಂತರ ರೂಪಾಯಿ ಅಗತ್ಯವಿದೆಯಾ ಎಂದು ಬಿಜೆಪಿ ಶಾಸಕ ವಾಸುದೇವ್​ ದೇವ್ನಾನಿ ಪ್ರಶ್ನಿಸಿದ್ದಾರೆ.  ಅಷ್ಟೇ ಅಲ್ಲ, ಈ ಬಾರಿ ಮಂಡನೆಯಾದ ಬಜೆಟ್​​ನಿಂದ ಮತ್ತೆ 5 ಲಕ್ಷ ಕೋಟಿಗಳಷ್ಟು ಸಾಲ ಸೃಷ್ಟಿಯಾಗಿದೆ. ಕಂದಾಯ ಸಂಗ್ರಹವೂ ಕುಸಿದಿದೆ. ಅಂಥದ್ದರಲ್ಲಿ ಐಫೋನ್​​ಗಳು ಯಾಕೆ ಎಂದೂ ಕೇಳಿದ್ದಾರೆ. ಬಿಜೆಪಿಯ ಒಟ್ಟು 71 ಶಾಸಕರಿದ್ದು, ಅವರೆಲ್ಲರೂ ಐಫೋನ್ ಹಿಂದಿರುಗಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷ: ತಕ್ಷಣವೇ ಉದ್ವಿಗ್ನ ಪರಿಸ್ಥಿತಿ ತಣ್ಣಗಾಗಿಸಲು ಭಾರತ ಕರೆ