ಇನ್ನೇನು ಎರಡು ದಿನಗಳಲ್ಲಿ ಪ್ರಾರಂಭವಾಗಲಿರುವಸಂಸತ್ತಿನ ಮುಂಗಾರು ಅಧಿವೇಶನ (Monsoon session of Parliament) ಬೆನ್ನಲ್ಲೇ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ (Sharad Pawar) ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಯವರನ್ನು ಭೇಟಿಯಾಗಿದ್ದಾರೆ ಇವರಿಬ್ಬರ ಭೇಟಿಯ ಫೋಟೋವನ್ನು ಪ್ರಧಾನಿ ಕಚೇರಿ (PMO) ಯೂ ಸಹ ಹಂಚಿಕೊಂಡಿದೆ. ಪ್ರಧಾನಿ ಮೋದಿ ಮತ್ತು ಶರದ್ ಪವಾರ್ ನಡುವೆ ಸುಮಾರು ಒಂದು ತಾಸುಗಳ ಚರ್ಚೆ ನಡೆದಿದೆ ಎಂದೂ ಮೂಲಗಳು ತಿಳಿಸಿವೆ.
Rajya Sabha MP Shri Sharad Pawar met PM @narendramodi. @PawarSpeaks pic.twitter.com/INj26CLl0k
— PMO India (@PMOIndia) July 17, 2021
ಎನ್ಸಿಪಿ, ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಒಂದು ಪಕ್ಷವಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಗುರುವಾರ ಶರದ್ ಪವಾರ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿ, ಸಭೆ ನಡೆಸಿದ್ದರು. ಈ ಮಧ್ಯೆ ಕಾಂಗ್ರೆಸ್ನ ನಾನಾ ಪಟೋಲೆ ಪದೇಪದೆ ಮೈತ್ರಿಗೆ ಮುಳ್ಳಾಗುವ ಮಾತುಗಳನ್ನು ಆಡುತ್ತಿದ್ದಾರೆ. ಮುಂದಿನ ಯಾವ ಚುನಾವಣೆಯಲ್ಲೂ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ನಾನೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಇದನ್ನೆಲ್ಲ ಚರ್ಚಿಸುವ ಸಂಬಂಧ ಹಿರಿಯ ನಾಯಕ ಶರದ್ ಪವಾರ್ ಮಹಾ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು.
ರಾಜ್ಯಸಭೆ ಸದಸ್ಯರೂ ಆಗಿರುವ ಶರದ್ ಪವಾರ್, 2022ರಲ್ಲಿ ನಡೆಯಲಿರುವ ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಪರ ಅಭ್ಯರ್ಥಿ ಎಂಬ ಊಹೆಯೊಂದು ಎದ್ದಿದೆ. ಆದರೆ ಶರದ್ ಪವಾರ್ ಆ ವರದಿಯನ್ನು ಅಲ್ಲಗಳೆದಿದ್ದಾರೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಇತ್ತೀಚೆಗೆ ಶರದ್ ಪವಾರ್ ಹಾಗೂ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರೊಟ್ಟಿಗೆ ಹಲವು ಸುತ್ತಿನ ಸಭೆ ನಡೆಸಿದ ಬೆನ್ನಲ್ಲೇ ಇಂಥದ್ದೊಂದು ಮಾತು ಕೇಳಿಬಂದಿತ್ತು.
ಇದನ್ನೂ ಓದಿ: Bihar Hooch Tragedy: ಬಿಹಾರದಲ್ಲಿ 16 ಜನರ ನಿಗೂಢ ಸಾವು; ದುರಂತದ ಹಿಂದೆ ಕಳ್ಳಭಟ್ಟಿ ದಂಧೆಯ ಕೈವಾಡದ ಶಂಕೆ
NCP chief Sharad Pawar meets PM Narendra Modi Amid of monsoon session of Parliament