ಸಂಸತ್‌ ಮುಂಗಾರು ಅಧಿವೇಶನದಲ್ಲಿ ಮಂಡನೆಗೆ ಸಿದ್ಧವಾಗಿವೆ ಅನೇಕ ಮಸೂದೆಗಳು; ಅಂಗೀಕಾರವಾದರೆ ಎರಡೇ ತಿಂಗಳಲ್ಲಿ ಜಾರಿ

Monsoon Session 2021: ಸಂಸತ್‌ನ ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳ ಜಾರಿಗೆ 2 ತಿಂಗಳಲ್ಲಿ ನಿಯಮ ರೂಪಿಸಿ ಸಂಬಂಧಪಟ್ಟ ಇಲಾಖೆಗಳು ಜಾರಿಗೆ ತರಬೇಕು. ಈ ವಿಷಯದಲ್ಲಿ ಅನಗತ್ಯ ವಿಳಂಬ ಮಾಡಬಾರದು ಎಂದು ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ಎಲ್ಲ ಇಲಾಖೆಗಳಿಗೂ ಪತ್ರ ಬರೆದು ಸೂಚನೆ ನೀಡಿದ್ದಾರೆ.

ಸಂಸತ್‌ ಮುಂಗಾರು ಅಧಿವೇಶನದಲ್ಲಿ ಮಂಡನೆಗೆ ಸಿದ್ಧವಾಗಿವೆ ಅನೇಕ ಮಸೂದೆಗಳು; ಅಂಗೀಕಾರವಾದರೆ ಎರಡೇ ತಿಂಗಳಲ್ಲಿ ಜಾರಿ
ಸಂಸತ್ ಭವನ (ಸಾಂದರ್ಭಿಕ ಚಿತ್ರ)
S Chandramohan

| Edited By: sadhu srinath

Jul 17, 2021 | 4:41 PM

ಸಂಸತ್‌ನ ಮಾನ್ಸೂನ್ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಮಾನ್ಸೂನ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಅನೇಕ ಮಹತ್ವದ ಮಸೂದೆಗಳನ್ನು ಮಂಡಿಸಿ, ಅಂಗೀಕರಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಮತ್ತೊಂದೆಡೆ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ಲೋಕಸಭೆ, ರಾಜ್ಯಸಭೆಯಲ್ಲಿ ಕೊರೊನಾ ನಿರ್ವಹಣೆ, ಬೆಲೆ ಏರಿಕೆ, ಲಸಿಕೆಯ ಕೊರತೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಕಾವೇರಿದ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಜುಲೈ 19ರಿಂದ ಆಗಸ್ಟ್ 13ರವರೆಗೆ ಸಂಸತ್‌ ಅಧಿವೇಶನ ಮಾನ್ಸೂನ್ ಅಧಿವೇಶನದಲ್ಲಿ ಕಾವೇರಿದ ಚರ್ಚೆಯ ನಿರೀಕ್ಷೆ

17ನೇ ಲೋಕಸಭೆಯ 2021ರ ಮಾನ್ಸೂನ್ ಅಧಿವೇಶನವು (Monsoon Session 2021) ಜುಲೈ 19ರ ಸೋಮವಾರದಿಂದ ಆರಂಭವಾಗಲಿದೆ. ಆಗಸ್ಟ್ 13ರವರೆಗೆ 19 ದಿನಗಳ ಕಾಲ ಮಾನ್ಸೂನ್ ಅಧಿವೇಶನ ನಡೆಯಲಿದೆ. ಲೋಕಸಭಾ ಸದಸ್ಯರ ಪೈಕಿ 444 ಮಂದಿ ಕೊರೊನಾ ಲಸಿಕೆ ಪಡೆದಿದ್ದಾರೆ. ರಾಜ್ಯಸಭಾ ಸದಸ್ಯರ ಪೈಕಿ 218 ಮಂದಿ ಕೊರೊನಾ ಲಸಿಕೆ ಪಡೆದಿದ್ದಾರೆ. ಹೀಗಾಗಿ ಈ ಬಾರಿ ಬೆಳಿಗ್ಗೆಯಿಂದ ಸಂಜೆಯವರೆಗೆ ಎರಡು ಸದನಗಳು ಪ್ರತೇಕವಾಗಿ ಮಾಮೂಲಿಯಂತೆ ನಡೆಯಲಿವೆ.

ಕಳೆದ ಬಾರಿಯಂತೆ ಬೆಳಿಗ್ಗೆಯೊಂದು ಸದನ, ಸಂಜೆಯೊಂದು ಸದನದ ಕಲಾಪ ನಡೆಯಲ್ಲ. ಮಾನ್ಸೂನ್ ಅಧಿವೇಶನದಲ್ಲಿ ಅನೇಕ ಮಹತ್ವದ ಮಸೂದೆಗಳನ್ನು ಮಂಡಿಸಿ, ಸಂಸತ್‌ನ ಉಭಯ ಸದನಗಳ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಪಿಆರ್‌ಎಸ್ ಲೆಜಿಸ್ಲೇಟೀವ್ ಪ್ರಕಾರ, 38 ಮಸೂದೆಗಳು ಸಂಸತ್‌ನಲ್ಲಿ ಅಂಗೀಕಾರಕ್ಕೆ ಪೆಂಡಿಂಗ್ ಇವೆ. ಇವುಗಳ ಪೈಕಿ 9 ಮಸೂದೆಗಳು ಪರಿಗಣಿಸಿ, ಅಂಗೀಕಾರಕ್ಕೆ ಪೆಂಡಿಂಗ್ ಇವೆ. ಇನ್ನೂ 17 ಮಸೂದೆಗಳು ಮಂಡನೆಯಾಗಬೇಕು.

ಸಂಸತ್‌ನಲ್ಲಿ ಪರಿಗಣಿಸಿ, ಅಂಗೀಕಾರಕ್ಕೆ ಬಾಕಿ ಇರುವ ಮಸೂದೆಗಳು (Legislations) 1-ಕಾರ್ಖಾನೆಗಳ ನಿಯಂತ್ರಣ(ತಿದ್ದುಪಡಿ) ಮಸೂದೆ 2020 2-ಡಿಎನ್‌ಎ ಟೆಕ್ನಾಲಜಿ(ಬಳಕೆ, ಆಪ್ಲಿಕೇಷನ್) ನಿಯಂತ್ರಣ ಮಸೂದೆ 2019 3-ನ್ಯಾಯಾಧೀಕರಣ ಸುಧಾರಣೆ ಮಸೂದೆ, 2021 4-ಪೋಷಕರು, ಹಿರಿಯ ನಾಗರಿಕರ ನಿರ್ವಹಣೆ, ಕಲ್ಯಾಣ(ತಿದ್ದುಪಡಿ) ಮಸೂದೆ 2019 5-ಬಾಲಪರಾಧಿ ನ್ಯಾಯ(ಮಕ್ಕಳ ಕಾಳಜಿ, ರಕ್ಷಣೆ) ತಿದ್ದುಪಡಿ ಮಸೂದೆ, 2021 6-ಅಸಿಸ್ಟೆಡ್ ಮರುಉತ್ಪಾದನೆ ಟೆಕ್ನಾಲಜಿ(ನಿಯಂತ್ರಣ) ಮಸೂದೆ 2020 7-ಬಾಡಿಗೆ ತಾಯ್ತನ(ನಿಯಂತ್ರಣ) ಮಸೂದೆ 2019 8-ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಫುಡ್ ಟೆಕ್ನಾಲಜಿ, ಉದ್ಯಮಶೀಲತೆ, ನಿರ್ವಹಣೆ ಮಸೂದೆ, 2021 9-ನಾವಿಗೇಷನ್ ಬಿಲ್, 2021

ಇವುಗಳ ಜೊತೆಗೆ ಇನ್ನೂ 17 ಮಸೂದೆಗಳನ್ನು ಮಂಡಿಸಿ, ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಆದರೆ, ಇವುಗಳ ಪೈಕಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಸೂದೆ ಸೇರಿಲ್ಲ. ದೇಶದಲ್ಲಿ ಖಾಸಗಿ ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸಿ, ಅಧಿಕೃತ ಡಿಜಿಟಲ್ ಕ್ರಿಪ್ಟೋಕರೆನ್ಸಿಯನ್ನು ಬಿಡುಗಡೆ ಮಾಡಲು ಆರ್‌ಬಿಐ, ಕೇಂದ್ರ ಸರ್ಕಾರ ನಿರ್ಧರಿಸಿವೆ. ಆದರೆ, ಇದಕ್ಕೆ ಸಂಬಂಧಪಟ್ಟ ಮಸೂದೆಯನ್ನು ಈ ಬಾರಿಯ ಮಾನ್ಸೂನ್ ಅಧಿವೇಶನದಲ್ಲಿ ಮಂಡಿಸುತ್ತಿಲ್ಲ. ಸಂಸತ್ ನಲ್ಲಿ ಈ ಬಾರಿ ಮಂಡನೆಯಾಗುವ 17 ಹೊಸ ಮಸೂದೆಗಳ ಪೈಕಿ ಪ್ರಮುಖ ಮಸೂದೆಗಳ ಪಟ್ಟಿ ಇಲ್ಲಿದೆ:

ಮಂಡನೆಯಾಗುವ ಪ್ರಮುಖ ಮಸೂದೆಗಳು (Bills) 1-ದಿವಾಳಿತನ ಸಂಹಿತೆ(ತಿದ್ದುಪಡಿ) ಮಸೂದೆ 2021 2-ಸೀಮಿತ ಬಾಧ್ಯತೆಯ ಪಾಲುದಾರಿಕೆಯ ತಿದ್ದುಪಡಿ ಮಸೂದೆ, 2021 3-ಪೆನ್ಷನ್ ಫಂಡ್ ನಿಯಂತ್ರಣ, ಅಭಿವೃದ್ದಿ ಪ್ರಾಧಿಕಾರ ತಿದ್ದುಪಡಿ ಮಸೂದೆ 2021 4-ಸೆಂಟ್ರಲ್ ಯೂನಿರ್ವಸಿಟಿ ತಿದ್ದುಪಡಿ ಮಸೂದೆ, 2021 5-ವಿದ್ಯುತ್(ತಿದ್ದುಪಡಿ) ಮಸೂದೆ 2021 6-ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೇಜ್ ಮೆಂಟ್ ಮಸೂದೆ 2021 7-ಡಿಫಾಸಿಟ್ ಇನ್ಸೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್(ತಿದ್ದುಪಡಿ) ಮಸೂದೆ 2021 8-ಅಗತ್ಯ ರಕ್ಷಣಾ ಸೇವೆ ಮಸೂದೆ 2021-ಸುಗ್ರೀವಾಜ್ಞೆ ಬದಲು ಮಸೂದೆ ಮಂಡನೆ 9-ಎನ್‌ಸಿಆರ್‌, ಸುತ್ತಲಿನ ನಗರಗಳ ವಾಯುಗುಣಮಟ್ಟ ನಿರ್ವಹಣೆ ಆಯೋಗ ಮಸೂದೆ, 2021 10-ಕಂಟೋನ್ ಮೆಂಟ್ ಮಸೂದೆ 2021 11-ಇಂಡಿಯನ್ ಅಂಟಾರ್ಟಿಕಾ ಮಸೂದೆ, 2021 12-ಚಾರ್ಟೆಡ್ ಅಕೌಂಟೆಂಟ್, ವೆಚ್ಚ, ಅಕೌಂಟ್ಸ್, ಕಂಪನಿ ಸೆಕ್ರೆಟರಿ, ತಿದ್ದುಪಡಿ ಮಸೂದೆ 2021 13-ಮಾನವ ಕಳ್ಳಸಾಗಣೆ(ತಡೆ, ರಕ್ಷಣೆ, ಪುನರ್ವಸತಿ) ಮಸೂದೆ 2021 14-ಜಲಸಾರಿಗೆ ಹಡಗು ಮಸೂದೆ 2021 15-ಭಾರತದ ಸಮುದ್ರದ ಮೀನುಗಾರಿಕೆ ಮಸೂದೆ 2021 16-ಕಲ್ಲಿದ್ದಲು ಬೇರಿಂಗ್ ಏರಿಯಾ(ಸ್ವಾಧೀನ, ಅಭಿವೃದ್ದಿ) ಮಸೂದೆ 2021 17-ಪೆಟ್ರೋಲಿಯಂ ಮತ್ತು ಮಿನರಲ್ಸ್ ಪೈಪ್ ಲೈನ್(ತಿದ್ದುಪಡಿ) ಮಸೂದೆ 2021

ಬಿಜೆಪಿ ಸಂಸದರು, ಈ ಬಾರಿಯ ಮಾನ್ಸೂನ್ ಅಧಿವೇಶನದಲ್ಲಿ (Parliament monsoon session 2021) ದೇಶದಲ್ಲಿ ಜನಸಂಖ್ಯಾ ನಿಯಂತ್ರಣ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಖಾಸಗಿ ಮಸೂದೆಗಳನ್ನ ಮಂಡಿಸುವ ಸಾಧ್ಯತೆ ಇದೆ. ವಿದ್ಯುತ್ ತಿದ್ದುಪಡಿ ಮಸೂದೆ ಅಂಗೀಕರಿಸಿದರೇ, ದೇಶದಲ್ಲಿ ಖಾಸಗಿ ರಂಗ ಕೂಡ ವಿದ್ಯುತ್ ಪೂರೈಕೆ ಮಾಡಲು ಸರ್ಕಾರಿ ಸ್ವಾಮ್ಯದ ಕಂಪನಿಗಳ ಜೊತೆಗೆ ಸ್ಪರ್ಧೆ ನಡೆಸಲು ಅವಕಾಶ ಸಿಗಲಿದೆ. ವಿದ್ಯುತ್ ಪೂರೈಕೆ ವಲಯವನ್ನು ಖಾಸಗೀಕರಣ ಮಾಡಿದಂತೆ ಆಗುತ್ತೆ. ವಿದ್ಯುತ್ ಬಳಕೆದಾರ ಗ್ರಾಹಕರು ತಮಗೆ ಬೇಕಾದ ವಿದ್ಯುತ್ ಪೂರೈಕೆದಾರ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಗುತ್ತೆ.

ಅಂಗೀಕಾರವಾದ ಮಸೂದೆ 2 ತಿಂಗಳಲ್ಲಿ ಜಾರಿ ಸಂಸತ್‌ನಲ್ಲಿ ಅಂಗೀಕಾರವಾದ ಮಸೂದೆಗಳು ಆರೇಳು ತಿಂಗಳುಗಳು ಕಳೆದರೂ ಜಾರಿಯಾಗುತ್ತಿಲ್ಲ. ಮಸೂದೆ ಅಂಗೀಕಾರದ ಬಳಿಕ ಸಂಬಂಧಪಟ್ಟ ಇಲಾಖೆಯು ಮಸೂದೆಯು ಕಾಯಿದೆಯಾಗಿ ಜಾರಿಯಾಗಲು ನಿಯಮಗಳನ್ನು ರೂಪಿಸಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಆದರೆ, ಮಸೂದೆ ಜಾರಿಗೆ ನಿಯಮಗಳನ್ನ ರೂಪಿಸಿ ಬೇಗನೇ ಜಾರಿಗೆ ತರುತ್ತಿಲ್ಲ. ಪೌರತ್ವ ತಿದ್ದುಪಡಿ ಕಾಯಿದೆಯು ಎರಡು ಸದನಗಳಲ್ಲಿ ಅಂಗೀಕಾರವಾಗಿದೆ.

ಆದರೆ, ನಿಯಮಗಳನ್ನು ರೂಪಿಸಿ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಪೌರತ್ವ ತಿದ್ದುಪಡಿ ಕಾಯಿದೆ ದೇಶದಲ್ಲಿ ಇನ್ನೂ ಅಧಿಕೃತವಾಗಿ ಜಾರಿಯಾಗಿಲ್ಲ. ಹೀಗಾಗಿ ಈ ಸಮಸ್ಯೆ ಹೋಗಲಾಡಿಸಲು ಸಂಸತ್‌ನ ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳ ಜಾರಿಗೆ 2 ತಿಂಗಳಲ್ಲಿ ನಿಯಮ ರೂಪಿಸಿ ಸಂಬಂಧಪಟ್ಟ ಇಲಾಖೆಗಳು ಜಾರಿಗೆ ತರಬೇಕು. ಈ ವಿಷಯದಲ್ಲಿ ಅನಗತ್ಯ ವಿಳಂಬ ಮಾಡಬಾರದು ಎಂದು ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ಎಲ್ಲ ಇಲಾಖೆಗಳಿಗೂ ಪತ್ರ ಬರೆದು ಸೂಚನೆ ನೀಡಿದ್ದಾರೆ.

ಇನ್ನೂ ಕೆಲ ಇಲಾಖೆಗಳ ಮಸೂದೆಗಳು ಲ್ಯಾಪ್ಸ್ ಆಗಿವೆ. ಅಂಥ ಮಸೂದೆಗಳನ್ನು ಮತ್ತೆ ಸಂಸತ್ ಅಧಿವೇಶನದಲ್ಲಿ ಮಂಡಿಸಲು ಬಯಸುತ್ತೀರೋ, ಇಲ್ಲವೇ ಹೊಸ ಮಸೂದೆಯನ್ನು ಮಂಡಿಸಲು ಬಯಸುತ್ತೀರೋ ಎಂಬ ಬಗ್ಗೆ ಮಾಹಿತಿ ನೀಡಿ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಇಲಾಖೆಯಿಂದ ಎಲ್ಲ ಇಲಾಖೆಗಳಿಗೂ ಪತ್ರ ಬರೆಯಲಾಗಿದೆ.

ವಿಪಕ್ಷಗಳಿಂದ ಸರ್ಕಾರಕ್ಕೆ ತರಾಟೆಗೆ ಸಿದ್ದತೆ; ಜ್ವಲಂತ ವಿಷಯ ಪ್ರಸ್ತಾಪಿಸಿ ಮುಗಿಬೀಳಲು ರೆಡಿ

ದೇಶದಲ್ಲಿ ಸದ್ಯ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಇವುಗಳನ್ನು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಕೂಡ ಸಜ್ಜಾಗಿವೆ. ಪ್ರಾನ್ಸ್ ನಲ್ಲಿ ರಫೇಲ್ ಜೆಟ್ ಮಾರಾಟದಲ್ಲಿ ಅವ್ಯವಹಾರ ಆಗಿದೆ ಎಂದು ತನಿಖೆಗೆ ಆದೇಶ ನೀಡಲಾಗಿದೆ. ಭಾರತದಲ್ಲೂ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಆದೇಶ ನೀಡಬೇಕೆಂದು ಪ್ರಸ್ತಾಪಿಸಲು ಕಾಂಗ್ರೆಸ್ ಸಿದ್ದವಾಗಿದೆ. ಕಾಂಗ್ರೆಸ್ ಅಜೆಂಡಾದಲ್ಲಿ ಮತ್ತೆ ರಫೇಲ್ ಫೈಟರ್ ಜೆಟ್ ಖರೀದಿ ಡೀಲ್ ಪ್ರಸ್ತಾಪವೂ ಸೇರಿದೆ. ಕೇಂದ್ರ ಸರ್ಕಾರ ಕೊರೊನಾದ 2ನೇ ಅಲೆ ನಿರ್ವಹಣೆ ಮಾಡಲು ವಿಫಲವಾಗಿದೆ, 2ನೇ ಅಲೆಯಲ್ಲಿ ಜನರು ಆಸ್ಪತ್ರೆ ಬೆಡ್, ಔಷಧಿ, ಆಕ್ಸಿಜನ್ ಸಿಗದೇ ಪರದಾಡಿದ್ದಾರೆ.

ಇದಕ್ಕೆಲ್ಲಾ ಸರ್ಕಾರದ ವೈಫಲ್ಯವೇ ಕಾರಣ ಎಂದು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿವೆ. ದೇಶದಲ್ಲಿ ಜನವರಿಯಿಂದಲೇ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಿದೆ. ಆರು ತಿಂಗಳು ಕಳೆದರೂ, 7 ಕೋಟಿ ಜನರಿಗೆ ಮಾತ್ರವೇ 2 ಡೋಸ್ ಲಸಿಕೆ ನೀಡಲಾಗಿದೆ. ಲಸಿಕೆಯ ಉತ್ಪಾದನೆ ಹೆಚ್ಚಾಗಿಲ್ಲ. ಸರ್ಕಾರ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಸರಿಯಾದ ಪ್ಲ್ಯಾನ್ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ರೆಡಿಯಾಗಿವೆ. ಕೊರೊನಾದಿಂದ ಮೃತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸಲಿವೆ. ಸುಪ್ರೀಂಕೋರ್ಟ್ ನೀಡಿರುವ ಆದೇಶವು ವಿಪಕ್ಷಗಳ ವಾದಕ್ಕೆ ಬೆಂಬಲ ನೀಡಲಿದೆ. ರೈತರು ಕೃಷಿ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದಾರೆ.

ಇದನ್ನು ಪ್ರಸ್ತಾಪಿಸಲು ವಿಪಕ್ಷಗಳು ಸಿದ್ಧವಾಗಿವೆ. ಗಡಿಯಲ್ಲಿ ಚೀನಾದ ಆಕ್ರಮಣಕಾರಿ ಧೋರಣೆ ಮುಂದುವರಿದಿದೆ. ಜಮ್ಮು ವಾಯುನೆಲೆ ಮೇಲೆ ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸಲಾಗಿದೆ. ದೇಶದ ಭದ್ರತಾ ವ್ಯವಸ್ಥೆಯಲ್ಲಿ ರಾಜೀ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ತಮ್ಮ ಬತ್ತಳಿಕೆಯ ಅಸ್ತ್ರವನ್ನು ರೆಡಿ ಮಾಡಿಕೊಂಡಿವೆ. ಅಸ್ಸಾಂ, ಯುಪಿ ರಾಜ್ಯಗಳಲ್ಲಿ ವಿವಾದಾತ್ಮಕ ಜನಸಂಖ್ಯೆ ನಿಯಂತ್ರಣ ಮಸೂದೆಗಳನ್ನು ಸಿದ್ದಪಡಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಕೊಂಗನಾಡು ಎಂಬ ಪ್ರತೇಕ ರಾಜ್ಯ ರಚನೆಗೆ ಬಿಜೆಪಿ ಸರ್ಕಾರ ಸಿದ್ದವಾಗಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಲು ವಿಪಕ್ಷಗಳು ಸಜ್ಜಾಗಿವೆ. ಜೊತೆಗೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಇದರಿಂದ ಜನಸಾಮಾನ್ಯರಿಗೆ ಬಾರಿ ಹೊರೆಯಾಗಿದೆ. ತೈಲದ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿಲ್ಲ.

ಈ ಬಗ್ಗೆಯೂ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿ ಜನ ಸಾಮಾನ್ಯರ ಪರ ಹೋರಾಟ ನಡೆಸಲು ನಾವು ಸಿದ್ದ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗುತ್ತಿವೆ. ಹಣದುಬ್ಬರ ಏರಿಕೆಯಾಗಿದೆ. ಇವೆಲ್ಲವೂ ಈಗ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ವಿರೋಧ ಪಕ್ಷಗಳ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳು. ಇವೆಲ್ಲ ವಿಷಯ ಪ್ರಸ್ತಾಪವಾದರೇ ಸಂಸತ್ ಮಾನ್ಸೂನ್ ಅಧಿವೇಶನದಲ್ಲಿ ಕಾವೇರಿದ ಚರ್ಚೆ, ವಾಗ್ವಾದ ನಡೆಯುವ ನಿರೀಕ್ಷೆ ಇದೆ. ಪ್ರಧಾನಿ ಮೋದಿ, ತಮ್ಮ ಸಂಪುಟ ಪುನರ್ ರಚನೆ ಮಾಡಿರುವುದರಿಂದ ಹೊಸ ಕ್ಯಾಬಿನೆಟ್ ಸದಸ್ಯರನ್ನು ಲೋಕಸಭೆ, ರಾಜ್ಯಸಭೆಗೆ ಪರಿಚಯಿಸಲಿದ್ದಾರೆ. ಕ್ಯಾಬಿನೆಟ್ ನಿಂದ ಕೆಲ ಸಚಿವರನ್ನು ಕೈ ಬಿಟ್ಟಿರುವುದರಿಂದ, ಆಯಾ ಇಲಾಖೆಯಲ್ಲಿ ಸಚಿವರು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂಬ ಸಂದೇಶವೇ ರವಾನೆಯಾಗಿದೆ.

(Parliament monsoon session 2021 many Bills pending for approval )

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada