Kannada News National NCP Chief Sharad Pawar says 'happy to continue my service' after declining Presidential poll offer
ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ನನ್ನ ಸೇವೆಯನ್ನು ಮುಂದುವರಿಸಲು ಸಂತೋಷವಾಗಿದೆ: ಶರದ್ ಪವಾರ್
ಶರದ್ ಪವಾರ್ ಪ್ರಸ್ತಾಪವನ್ನು ನಿರಾಕರಿಸಿದ ನಂತರ, ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಸೂಚಿಸಿದ್ದಾರೆ
ದೆಹಲಿ: ಭಾರತದ ರಾಷ್ಟ್ರಪತಿ ಚುನಾವಣೆಗೆ (Presidential Election 2022) ತಮ್ಮ ಹೆಸರನ್ನು ಸೂಚಿಸುವ ವಿರೋಧ ಪಕ್ಷಗಳ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರು ಬುಧವಾರ ಹೇಳಿದ್ದಾರೆ. “ಸಾಮಾನ್ಯ ಜನರ ಯೋಗಕ್ಷೇಮಕ್ಕಾಗಿ ನನ್ನ ಸೇವೆಯನ್ನು ಮುಂದುವರಿಸಲು ನನಗೆ ಸಂತೋಷವಾಗಿದೆ” ಎಂದು ಟ್ವೀಟ್ ಮಾಡಿರುವ ಪವಾರ್, ನಾನು ಯಾಕೆ ರಾಷ್ಟ್ರಪತಿ ಚುನಾವಣೆಯ ಸ್ಪರ್ಧೆಗೆ ‘ಇಲ್ಲ’ ಅಂದೆ ಎಂಬುದಕ್ಕೆ ಈ ಕಾರಣ ನೀಡಿದ್ದಾರೆ. ಶರದ್ ಪವಾರ್ ಈ ಪ್ರಸ್ತಾಪವನ್ನು ನಿರಾಕರಿಸಿದ ನಂತರ, ಮಮತಾ ಬ್ಯಾನರ್ಜಿ (Mamata Banerjee) ಅವರು ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಸೂಚಿಸಿದ್ದಾರೆ ಎಂದು ನವದೆಹಲಿಯಲ್ಲಿ ನಡೆದ ವಿರೋಧ ಪಕ್ಷದ ನಾಯಕರ ಸಭೆಯಲ್ಲಿ ಭಾಗವಹಿಸಿದ್ದ ಆರ್‌ಎಸ್‌ಪಿಯ ಎನ್‌ಕೆ ಪ್ರೇಮಚಂದ್ರನ್ ಹೇಳಿದ್ದಾರೆ. ಜುಲೈ 18 ರ ಚುನಾವಣೆಗೆ ‘ವಿರೋಧ ಧ್ವನಿಗಳ ಸಂಗಮ’ ನಿರ್ಮಿಸಲು ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಳೆದ ವಾರ ವಿರೋಧ ರಾಜಕೀಯ ಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದರು. ಎನ್‌ಸಿಪಿಯ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ರಣದೀಪ್ ಸುರ್ಜೆವಾಲಾ, ಜೆಡಿಎಸ್‌ನ ಎಚ್‌ಡಿ ದೇವೇಗೌಡ ಮತ್ತು ಎಚ್‌ಡಿ ಕುಮಾರಸ್ವಾಮಿ, ಎಸ್‌ಪಿಯ ಅಖಿಲೇಶ್ ಯಾದವ್, ಪಿಡಿಪಿಯ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ ಒಮರ್ ಅಬ್ದುಲ್ಲಾ ಬುಧವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದು, ಟಿಆರ್‌ಎಸ್, ಎಎಪಿ ಮತ್ತು ಬಿಜೆಡಿ ದೂರ ಉಳಿದಿದ್ದವು. ಸಭೆಯಲ್ಲಿ ವಿಪಕ್ಷಗಳು ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ.
ಮತ್ತೊಂದೆಡೆ ಬಿಜೆಪಿಯು ರಾಷ್ಟ್ರಪತಿ ಚುನಾವಣೆಗೆ ಸಮಾಲೋಚನಾ ಕಸರತ್ತನ್ನು ಆರಂಭಿಸಿದ್ದು, ಪಕ್ಷದ ಹಿರಿಯ ನಾಯಕ ರಾಜನಾಥ್ ಸಿಂಗ್ ಅವರು ಮಮತಾ ಬ್ಯಾನರ್ಜಿ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇದೇ ವಿಷಯದ ಬಗ್ಗೆ ಚರ್ಚಿಸಲು ವಿರೋಧ ಪಕ್ಷಗಳು ಸಭೆಗೆ ಕುಳಿತಿದ್ದ ಅದೇ ದಿನ ರಾಜನಾಥ್ ಸಿಂಗ್ ಕರೆಗಳನ್ನು ಮಾಡಿದರು. ರಾಜನಾಥ ಸಿಂಗ್ ಅವರು ಜನತಾ ದಳ (ಯುನೈಟೆಡ್) ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜು ಜನತಾ ದಳ (ಬಿಜೆಡಿ) ಮುಖ್ಯಸ್ಥರು ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ರಾಷ್ಟ್ರಪತಿ ಚುನಾವಣೆಯ ಕುರಿತು ಚರ್ಚಿಸಲು ಕರೆದಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.