ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮುಖವಾಣಿ ಸಾಮ್ನಾ ಗುರುವಾರ ಸಂಪಾದಕೀಯದಲ್ಲಿ ಶರದ್ ಪವಾರ್ (Sharad Pawar) ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಷಯದ ಬಗ್ಗೆ ಬರೆದಿದ್ದು, ಪವಾರ್ ತಮ್ಮ ನಿರ್ಧಾರವನ್ನು ಘೋಷಿಸುವ ಭಾಷಣದೊಂದಿಗೆ ಸಿದ್ಧರಾಗಿ ಬಂದಿದ್ದರು. ಇದು ಅಸಾಮಾನ್ಯ ಆಗಿದ್ದರೂ, ಅದು ಗಟ್ಟಿ ನಿರ್ಧಾರ ಎಂಬುದು ಸ್ಪಷ್ಟ. ಶರದ್ ಪವಾರ್ ಅವರ ಘೋಷಣೆಯ ನಂತರ, ಎನ್‌ಸಿಪಿ ನಾಯಕರಲ್ಲಿ ಗೊಂದಲ ಉಂಟಾಗಿದೆ. ಆದರೆ ಅವರಲ್ಲಿ ಅನೇಕರು ಈಗಾಗಲೇ ಬಿಜೆಪಿ (BJP) ಹಡಗಿನಲ್ಲಿ ಒಂದು ಕಾಲು ಇಟ್ಟಿದ್ದಾರೆ. ಪಕ್ಷ ಈ ರೀತಿ ವಿಭಜನೆ ಆಗುವ ಮುನ್ನ ಶರದ್ ಪವಾರ್ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಘನತೆಯಿಂದ ನಿರ್ಗಮಿಸಲು ನಿರ್ಧರಿಸಿರಬಹುದು ಎಂದು ಸಂಪಾದಕೀಯ ಹೇಳಿದೆ. “ನೀವು ಪಕ್ಷ” ಎಂದು ಪವಾರ್‌ಗೆ ಜಯಂತ್ ಪಾಟೀಲ್ ಸರಿಯಾಗಿಯೇ ಹೇಳಿದ್ದಾರೆ. ಎನ್‌ಸಿಪಿ ಇಂದು ಶರದ್ ಪವಾರ್ ಹೆಸರಿನಲ್ಲಿ ನಿಂತಿದೆ.
ಪಕ್ಷದ ಭವಿಷ್ಯದ ಬಗ್ಗೆ ಹೇಳುವುದಾದರೆ, ಸುಪ್ರಿಯಾ ಸುಳೆ ಅವರು ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ದೆಹಲಿಯಲ್ಲಿಯೂ ಹಿಡಿತವನ್ನು ಹೊಂದಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿಯಾಗುವುದು ಅಜಿತ್ ಪವಾರ್ ಅವರ ಏಕೈಕ ಗುರಿಯಾಗಿದೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಿಗೆ ಪವಾರ್ ಅವರ ಕೊಡುಗೆಯನ್ನು ಗಮನಿಸಿದ ಸಂಪಾದಕೀಯವು ಪವಾರ್ ಅವರ ನಿರ್ಧಾರವು ನಿಜವಾಗಿಯೂ ಮಾಸ್ಟರ್ಸ್ಟ್ರೋಕ್ ಎಂದು ಉಲ್ಲೇಖಿಸಿದೆ. ಪಕ್ಷದೊಳಗೆ ಏನು ನಡೆಯುತ್ತಿದೆ ಎಂಬುದನ್ನು ಪವಾರ್ ಬಹಿರಂಗಪಡಿಸಿದ್ದಾರೆ. ಏನೆಲ್ಲಾ ನಡೆದಿದೆಯೋ ಅದಕ್ಕೆಲ್ಲ ಪವಾರ್ ಅವರೇ ನಾಯಕ. ಪವಾರ್ ಅವರು ಭಾರತೀಯ ರಾಜಕೀಯದ ಭೀಷ್ಮ, ಆದರೆ ಅವರು ಭೀಷ್ಮನಂತೆ ಮಲಗುವುದಿಲ್ಲ, ಮುನ್ನಡೆಸುತ್ತಾರೆ ಎಂದು ತೋರಿಸಿದರು.
ಇದನ್ನೂ ಓದಿ:ಶರದ್ ಪವಾರ್ ನಂತರ ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಯಾರು?; ನಾಳೆ ನಡೆಯಲಿರುವ ಸಭೆಯಲ್ಲಿ ನಿರ್ಧಾರ
ಶರದ್ ಪವಾರ್ ಅವರ ಈ ಘೋಷಣೆಯು ಎನ್‌ಸಿಪಿಗೆ ಮುಂದೇನು ಎಂಬ ಊಹಾಪೋಹವನ್ನು ಹುಟ್ಟುಹಾಕಿದೆ. ಅವರ ನಿರ್ಗಮನವು ಪಕ್ಷದ ಮುಖ್ಯಸ್ಥ ಹುದ್ದೆಯಿಂದ ಮಾತ್ರವೇ ಹೊರತು ರಾಜಕೀಯದಿಂದಲ್ಲ. ನಾನು ನಿಯಮಿತವಾಗಿ ಜನರನ್ನು ಭೇಟಿಯಾಗುತ್ತಿದೆ ಎಂದು ಪವಾರ್ ಹೇಳಿದ್ದಾರೆ. ಗುರುವಾರ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ ಅವರು, ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಸುಪ್ರಿಯಾ ಸುಳೆ ಅವರು ಪಕ್ಷದ ಅಧ್ಯಕ್ಷರಾಗುತ್ತಾರೆ ಮತ್ತು ಅಜಿತ್ ಪವಾರ್ ಅವರು ಪಕ್ಷದ ರಾಜ್ಯಾಧ್ಯಕ್ಷರಾಗುತ್ತಾರೆ. ಅವರೇ ಪಕ್ಷದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಆಗಲಿದ್ದಾರೆ ಎಂದು ಊಹಾಪೋಹವಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ