ಪ್ರಧಾನಿ ನಿವಾಸದ ಎದುರು ನಮಾಜ್ ಮಾಡುತ್ತೇನೆ ಅನುಮತಿ ಕೊಡಿ ಎಂದು ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದ ಎನ್ಸಿಪಿ ನಾಯಕಿ
ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ, ಪ್ರಧಾನಿ ನರೇಂದ್ರ ಮೋದಿ ನಿವಾಸದ ಹೊರಗೆ ನಾನು ನಮಾಜ್ ಮಾಡಲು ಬಯಸುತ್ತೇನೆ. ಅಷ್ಟೇ ಅಲ್ಲ, ಹನುಮಾನ್ ಚಾಲೀಸಾ, ದುರ್ಗಾ ಚಾಲೀಸಾ, ನಮೋಕರ್ ಮಂತ್ರಗಳನ್ನು ಪಠಿಸುವುದು ನನ್ನ ಇಚ್ಛೆಯಾಗಿದೆ ಎಂದು ಫಹ್ಮಿದಾ ಹಸನ್ ತಿಳಿಸಿದ್ದಾರೆ.
ಉದ್ಧವ್ ಠಾಕ್ರೆ ನಿವಾಸ ಮಾತೋಶ್ರಿಯ ಹೊರಗೆ ಕುಳಿತು ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದು ಹೇಳಿದ್ದ ಮಹಾರಾಷ್ಟ್ರ ಸ್ವತಂತ್ರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಮುಂಬೈ ಕೋರ್ಟ್ ಆದೇಶ ಹೊರಡಿಸಿದೆ. ಇವರು ಕೋಮು ಸೌಹಾರ್ದತೆ ಕದಡುವ ಪ್ರಯತ್ನ ಮಾಡಿದ್ದಾರೆಂಬ ಆರೋಪದಡಿ ಬಂಧಿಸಲಾಗಿದ್ದು, ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಲು ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ. ಈ ಮಧ್ಯೆ ಎನ್ಸಿಪಿ (ನ್ಯಾಶನಲ್ ಕಾಂಗ್ರೆಸ್ ಪಾರ್ಟಿ) ನಾಯಕಿ ಫಹ್ಮಿದಾ ಹಸನ್ ಖಾನ್ ಅವರು ಅಮಿತ್ ಶಾ ಅವರಿಗೊಂದು ಪತ್ರ ಬರೆದು, ಪ್ರಧಾನಿ ನರೇಂದ್ರ ಮೋದಿ ನಿವಾಸದ ಹೊರಭಾಗದಲ್ಲಿ ಹನುಮಾನ್ ಚಾಲೀಸಾ ಪಠಣ ಮತ್ತು ನಮಾಜ್ ಮಾಡಲು ನನಗೆ ಅನುಮತಿ ಕೊಡಿ ಎಂದು ಕೇಳಿದ್ದಾರೆ.
ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ, ಪ್ರಧಾನಿ ನರೇಂದ್ರ ಮೋದಿ ನಿವಾಸದ ಹೊರಗೆ ನಾನು ನಮಾಜ್ ಮಾಡಲು ಬಯಸುತ್ತೇನೆ. ಅಷ್ಟೇ ಅಲ್ಲ, ಹನುಮಾನ್ ಚಾಲೀಸಾ, ದುರ್ಗಾ ಚಾಲೀಸಾ, ನಮೋಕರ್ ಮಂತ್ರಗಳನ್ನು ಪಠಿಸುವುದು ನನ್ನ ಇಚ್ಛೆಯಾಗಿದೆ. ನಾನು ಇದನ್ನೆಲ್ಲ ಪ್ರತಿದಿನವೂ ಮನೆಯಲ್ಲೂ ಮಾಡುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಣ ಮಾಡುತ್ತಾರೆ ಎಂದಾದರೆ, ನಾವ್ಯಾಕೆ ಪ್ರಧಾನಿ ನಿವಾಸದ ಎದುರು ಇದನ್ನು ಮಾಡಬಾರದು ಎಂದು ಪ್ರಶ್ನಿಸಿರುವ ಫಹ್ಮಿದಾ ಹಸನ್ ಖಾನ್, ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆ ಮಿತಿ ಮೀರುತ್ತಿದೆ. ಪ್ರಧಾನಿ ಮೋದಿಯವರು ಇನ್ನಾದರೂ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.
ಇನ್ನು ನವನೀತ್ ರಾಣಾ ಮತ್ತು ರವಿ ರಾಣಾರನ್ನು ಪೊಲೀಸ್ ಕಸ್ಟಡಿಗೆ ಕೊಡುವಂತೆ ಮುಂಬೈ ಪೊಲೀಸರು ಕೇಳಿದ್ದರು. ಆದರೆ ಅವರನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅದರಲ್ಲಿ ನವನೀತ್ ರಾಣಾರನ್ನು ಬೈಕುಲ್ಲಾ ಮಹಿಳಾ ಕಾರಾಗೃಹಕ್ಕೆ ಕಳಿಸಲಾಗುವುದು ಮತ್ತು ರವಿ ರಾಣಾರನ್ನು ಆರ್ತೂರು ರಸ್ತೆಯಲ್ಲಿರುವ ಜೈಲಿಗೆ ಕಳಿಸಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪೇಪರ್ ಸೋರಿಕೆ ಪ್ರಕರಣ; ಮೈಸೂರಿನಲ್ಲಿ ಆರೋಪಿ ಸೌಮ್ಯಾ ಅರೆಸ್ಟ್