ಪುದುಚೇರಿ: ಕಾಂಗ್ರೆಸ್ ಪಕ್ಷದ ಶಾಸಕರು ಮುಕ್ತವಾಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಅವರೆಲ್ಲರೂ ಮಾಜಿ ಮುಖ್ಯಮಂತ್ರಿಯ ಕುಟುಂಬದೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ಸಂಜೆ ಪುದುಚೇರಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೋದಿ, ಕೆಲಸ ಮಾಡದೇ ಇರುವ ಕಾಂಗ್ರೆಸ್ ಸರ್ಕಾರಗಳ ಪೈಕಿ ಪುದುಚೇರಿ ಸರ್ಕಾರಕ್ಕೆ ವಿಶೇಷ ಸ್ಥಾನವಿದೆ. ಪುದುಚೇರಿಯ ಸರ್ಕಾರ ಎಲ್ಲಾ ರೀತಿಯಲ್ಲಿಯೂ ವಿಫಲವಾಗಿದೆ. ಶಿಕ್ಷಣ, ವೈದ್ಯಕೀಯ ಸೀಟುಗಳನ್ನು ಭರ್ತಿ ಮಾಡುವುದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ- ಎಲ್ಲ ವಿಧದಲ್ಲಿಯೂ ಕಾಂಗ್ರೆಸ್ ವಿಫಲವಾಗಿದ್ದು, ಲೂಟಿ ಮಾಡುವುದೊಂದೇ ಅವರ ಕೆಲಸ ಎಂದಿದ್ದಾರೆ.
ಚುನಾವಣೆ ನಡೆಯಲಿರುವ ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಎನ್ ಡಿಎ ಪರ ಅಲೆಯನ್ನು ನಾನು ಕಾಣುತ್ತಿದ್ದೇನೆ. ನಾನು ಹಲವಾರು ಚುನಾವಣೆಗಳನ್ನು ನೋಡಿದ್ದೇನೆ. ಆದರೆ ಪುದುಚೇರಿ ವಿಧಾನಸಭಾ ಕ್ಷೇತ್ರದ ಚುನಾವಣೆ ವಿಭಿನ್ನವಾದುದು. ಯಾಕೆಂದರೆ ಇಲ್ಲಿನ ಮುಖ್ಯಮಂತ್ರಿಗೇ ಸ್ಪರ್ಧಿಸಲು ಸೀಟು ಸಿಕ್ಕಿಲ್ಲ ಎಂದು ಮೋದಿ ಹೇಳಿದ್ದಾರೆ.
ಹಲವು ವರ್ಷಗಳ ನಿಷ್ಠೆ, ನಾಯಕರ ಚಪ್ಪಲಿಯನ್ನು ಹೊರುವುದು, ನಾಯಕನನ್ನು ಮೆಚ್ಚಿಸಲು ಮತದಾರನ ಮಾತನ್ನು ತಪ್ಪಾಗಿ ಅನುವಾದ ಮಾಡುವುದು- ಇದೆಲ್ಲ ಮಾಡಿದರೂ ಅವರಿಗೆ ಟಿಕೆಟ್ ಸಿಗಲಿಲ್ಲ. ಅವರ ಸರ್ಕಾರ ಯಾವ ಹಂತಕ್ಕೆ ಬಂದಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಮೋದಿ ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರ ಹೆಸರನ್ನು ಉಲ್ಲೇಖಿಸದೆಯೇ ಟಾಂಗ್ ನೀಡಿದ್ದಾರೆ.
ಬಿಜೆಪಿ ಅಧಿಕಾರಕ್ಕೇರಿದರೆ ಪುದುಚೇರಿಯಲ್ಲಿ ಶೈಕ್ಷಣಿಕ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುವುದು, ತಾಂತ್ರಿಕ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲಿ ನೀಡುತ್ತೇವೆ. ಇಲ್ಲಿ ಈ ಹಿಂದೆ ಇದ್ದ ವಿ.ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ದುರಂತವಾಗಿತ್ತು. ಬಿಜೆಪಿ ಅಧಿಕಾರಕ್ಕೇರಿದರೆ ನಾವು ಇಲ್ಲಿ ಆರ್ಥಿಕ ಸುಧಾರಣೆಗಳನ್ನು ತರಲಿದ್ದೇವೆ ಎಂದು ಮೋದಿ ಭರವಸೆ ನೀಡಿದ್ದಾರೆ.
Puducherry is going to vote NDA. Watch. https://t.co/tl6emSgkEJ
— Narendra Modi (@narendramodi) March 30, 2021
ಪುದುಚೇರಿಯನ್ನು ಉತ್ತಮ ಪಡಿಸಲು ಎನ್ಡಿಎ ಕೆಲಸ ಮಾಡಲಿದೆ. BEST ಅಂದರೆ ಬ್ಯುಸಿನೆಸ್ ಹಬ್, ಎಡ್ಯುಕೇಷನ್ ಹಬ್,ಸ್ಪಿರಿಚುವಲ್ ಹಬ್, ಟೂರಿಸಂ ಹಬ್ ಆಗಿ ಪರಿವರ್ತಿಸುವ ಉದ್ದೇಶ ನಮ್ಮದು.
ಪುದುಚೇರಿ ಬಗ್ಗೆ ಹೇಳುವಾಗ ನಾನು ಭಾರತೀಯರ್ ಬಗ್ಗೆ, ಶ್ರೀ ಅರೊಬಿಂದೊ ಅವರ ಬಗ್ಗೆ ಯೋಚಿಸುತ್ತೇನೆ. ನಾನು ಸೀತಾನಂದ ಸ್ವಾಮಿ, ತೊಲ್ಲೈಕತ್ತು ಸಿದ್ಧರ್ ಅವರನ್ನೂ ನೆನಪಿಸಿಕೊಳ್ಳುತ್ತೇನೆ. ನಾನು ಮನಕುಲ ವಿನಾಯಗರ್ ಸ್ವಾಮಿ ದೇವಾಲಯ ಮತ್ತು ಶ್ರಮತ್ ಗುರು ಸೀತಾನಂದ ಸ್ವಾಮಿಗಳ್ ದೇವಸ್ಥಾನಕ್ಕೆ ನಾನು ತಲೆಬಾಗುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಪುದುಚೇರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇಲ್ಲಿನ ಅಸ್ಮಿತೆಯೇ ಕಳೆದುಹೋಗುತ್ತದೆ: ವಿ.ನಾರಾಯಣ ಸ್ವಾಮಿ
ಪುದುಚೇರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇಲ್ಲಿನ ಪ್ರತ್ಯೇಕ ಅಸ್ಮಿತೆಯೇ ಕಳೆದುಹೋಗಲಿದೆ ಎಂದು ಕಾಂಗ್ರೆಸ್ನ ಹಿರಿಯ ನೇತಾರ ವಿ.ನಾರಾಯಣಸ್ವಾಮಿ ಹೇಳಿದ್ದಾರೆ. ಪಿಟಿಐ ಸುದ್ದಿಸಂಸ್ಥೆ ಜತೆ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಪುದುಚೇರಿಯನ್ನು ರಾಜ್ಯವನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್ನ ಬೇಡಿಕೆಯಾಗಿದೆ. ಆದರೆ ಬಿಜೆಪಿ ಈ ಬಗ್ಗೆ ಮೌನವಹಿಸಿದೆ. ದೆಹಲಿಯ ಪರಿಸ್ಥಿತಿಯನ್ನೇ ಪುದುಚೇರಿಯಲ್ಲಿ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಪುದುಚೇರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಅಜೆಂಡಾಗಳ ಬಗ್ಗೆ ಮಾತನಾಡಿದ ಅವರು ಪುದುಚೇರಿಯನ್ನು 15ನೇ ಹಣಕಾಸು ಆಯೋಗದಲ್ಲಿ ಸೇರಿಸುವುದು, ಸಾಲ ಮತ್ತು ವೈದ್ಯಕೀಯ ಪರೀಕ್ಷೆಗಾಗಿರುವ NEET ಪರೀಕ್ಷೆ ರದ್ದು ಮಾಡಬೇಕು ಎಂದು ಅವರು ಹೇಳಿದ್ದಾರೆ.
ಚುನಾವಣೆಯಲ್ಲಿ ನಾನೇಕೆ ಸ್ಪರ್ಧಿಸುತ್ತಿಲ್ಲ: ಕಾರಣ ವಿವರಿಸಿದ ಪುದುಚೇರಿ ಮಾಜಿ ಸಿಎಂ ವಿ. ನಾರಾಯಣಸ್ವಾಮಿ