AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Elections 2021: ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಇಂದು ನರೇಂದ್ರ ಮೋದಿ ರ‍್ಯಾಲಿ, ಟ್ವಿಟರ್​ನಲ್ಲಿ ಮೋದಿ ಗೋಬ್ಯಾಕ್ ಟ್ರೆಂಡ್

PM Narendra Modi: ಬಿಜೆಪಿ ಮೂಲಗಳ ಪ್ರಕಾರ ಮೋದಿಯವರು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ರ‍್ಯಾಲಿ ಆರಂಭಿಸಿ ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ ತಮಿಳುನಾಡಿನಲ್ಲಿ, ಸಂಜೆ ಪುದಚೇರಿಯಲ್ಲಿ ಮೋದಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

Assembly Elections 2021: ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಇಂದು ನರೇಂದ್ರ ಮೋದಿ ರ‍್ಯಾಲಿ, ಟ್ವಿಟರ್​ನಲ್ಲಿ ಮೋದಿ ಗೋಬ್ಯಾಕ್ ಟ್ರೆಂಡ್
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on:Mar 30, 2021 | 4:05 PM

Share

ದೆಹಲಿ: ವಿಧಾನಸಭೆ ಚುನಾವಣೆಗೆ ಸಿದ್ಧವಾಗಿರುವ ಕೇರಳ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಮೋದಿಯವರು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ರ‍್ಯಾಲಿ ಆರಂಭಿಸಿ ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎನ್​ಡಿಎ ಅಭ್ಯರ್ಥಿ ಮೆಟ್ರೊಮ್ಯಾನ್ ಇ. ಶ್ರೀಧರನ್ ಪರವಾಗಿ ಮೋದಿ ಮತಯಾಚಿಸಲಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಕೇರಳಕ್ಕೆ ಭೇಟಿ ನೀಡಿದ್ದ ಮೋದಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದ್ದರು. ಈ ಎಲ್ಲ ಯೋಜನೆಗಳು ಆತ್ಮನಿರ್ಭರ್ ಭಾರತದ ಭಾಗವಾಗಿತ್ತು. ಮೋದಿ ಭೇಟಿ ಹಿನ್ನೆಲೆಯಲ್ಲಿ ಪಾಲಕ್ಕಾಡ್​ನಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ಶಬರಿಮಲೆ ವಿಷಯವನ್ನು ಉಲ್ಲೇಖಿಸಿಯೇ ಬಿಜೆಪಿ ಇಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದೆ. ಭಾನುವಾರ ಕೋಟ್ಟಯಂನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿ ಹಿರಿಯ ನಾಯಕ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚುನಾವಣೆ ವೇಳೆ ಬಿಜೆಪಿ ನೀಡಿದ ಎಲ್ಲ ಭರವಸೆಗಳನ್ನು ನಾವು ಪೂರೈಸುತ್ತೇವೆ ಎಂದು ಹೇಳಿದ್ದಾರೆ. ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಎಎ ಮತ್ತು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಸಿಂಗ್ ಹೇಳಿದ್ದಾರೆ..

ಕೇರಳದ 140 ಚುನಾವಣಾ ಕ್ಷೇತ್ರಗಳ ಪೈಕಿ ಬಿಜೆಪಿ 115 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಿರುವನಂತಪುರಂ ಜಿಲ್ಲೆಯ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಹೆಚ್ಚಿನ ಸೀಟು ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ.

ಮಧ್ಯಾಹ್ನ ತಮಿಳುನಾಡಿನಲ್ಲಿ ಪ್ರಚಾರ ಕೇರಳಕ್ಕೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ತಮಿಳುನಾಡಿನ ಧಾರಾಪುರಂನಲ್ಲಿ ಮಧ್ಯಾಹ್ನ 12.50ಕ್ಕೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷ ಎಲ್.ಮುರುಗನ್ ಅವರು ಧಾರಾಪುರಂ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಫೆಬ್ರವರಿ 25ರಂದು ಮೋದಿ ಈ ಚುನಾವಣಾ ಕ್ಷೇತದಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ತಮಿಳುನಾಡಿನ ಆಡಳಿತಾರೂಢ ಪಕ್ಷ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (AIADMK) ಮೈತ್ರಿ ಪಕ್ಷವಾಗಿ ಬಿಜೆಪಿ ಇಲ್ಲಿ ಕಣಕ್ಕಿಳಿದಿದೆ. ಏಪ್ರಿಲ್ 6ರಂದು ಇಲ್ಲಿ ಚುನಾವಣೆ ನಡೆಯಲಿದ್ದು ಮೇ.2ರಂದು ಫಲಿತಾಂಶ ಪ್ರಕಟವಾಗಲಿದೆ.

ಸಂಜೆ ಪುದುಚೇರಿಯಲ್ಲಿ ಮೋದಿ ಚುನಾವಣಾ ಪ್ರಚಾರ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ನಂತರ ಸಂಜೆ 4.35ಕ್ಕೆ ಮೋದಿ ಪುದುಚೇರಿಯಲ್ಲಿ ಎನ್​ಡಿಎ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಫೆಬ್ರವರಿ 25ರಂದು ಕೇಂದ್ರ ಸರ್ಕಾರದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಮೋದಿ ಪುದುಚೇರಿಗೆ ಬಂದಿದ್ದರು.

ಪುದುಚೇರಿಯಲ್ಲಿ ಎಐಎನ್​ಆರ್​ಸಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 30 ಚುನಾವಣಾ ಕ್ಷೇತ್ರಗಳ ಪೈಕಿ 16ರಲ್ಲಿ ಸ್ಪರ್ಧಿಸುತ್ತಿದೆ. ಎಐಎನ್​ಆರ್​ಸಿ ನಾಯಕ, ಮಾಜಿ ಮುಖ್ಯಮಂತ್ರಿ ಎನ್.ರಂಗಸ್ವಾಮಿ ಥಟ್ಟನ್​ಚವಡಿ ಮತ್ತು ಯಾನಂನಿಂದ ಕಣಕ್ಕಿಳಿದಿದ್ದಾರೆ.

ಟ್ವಿಟರ್​ನಲ್ಲಿ ಮೋದಿ ಗೋಬ್ಯಾಕ್ ಟ್ರೆಂಡ್ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ನೀಡುವುದನ್ನು ವಿರೋಧಿಸಿ ತಮಿಳುನಾಡಿನ ನೆಟ್ಟಿಗರು ಟ್ವಿಟರ್​ನಲ್ಲಿ #GoBackModi ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

ಈ ಹಿಂದೆಯೂ ಮೋದಿ ತಮಿಳುನಾಡಿಗೆ ಭೇಟಿ ನೀಡಿದಾಗಲೂ ಮೋದಿ ಗೋಬ್ಯಾಕ್ ಹ್ಯಾಷ್​ಟ್ಯಾಗ್ ಟ್ರೆಂಡ್ ಆಗಿತ್ತು.

ಇದನ್ನೂ ಓದಿ: ನರೇಂದ್ರ ಮೋದಿ ಭೇಟಿಯ ನಂತರ ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರ, ಹಿಂದೂ ದೇವಾಲಯಗಳ ಮೇಲೆ ದಾಳಿ

ಕೇರಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸದೇ ಇರುವುದಕ್ಕೆ ಕಾರಣ ಅಲ್ಲಿ ಶೇ.90 ಸಾಕ್ಷರತೆ ಇದೆ: ಒ.ರಾಜಗೋಪಾಲ್

Published On - 10:47 am, Tue, 30 March 21