ಹೋಲಾ ಮೊಹಲ್ಲಾ ಮೆರವಣಿಗೆ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ಸಿಖ್ ಯುವಕರು; ಕತ್ತಿ ಹಿಡಿದು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ವಾಹನಗಳೆಲ್ಲ ಪುಡಿಪುಡಿ
Nanded Violence: ಮಹಾರಾಷ್ಟ್ರದ ಎಲ್ಲೆಡೆ ಕೊರೊನಾ ವೈರಸ್ ಪ್ರಸರಣ ಮಿತಿಮೀರಿದೆ. ಹಾಗಾಗಿ ಸಿಖ್ರ ಹಬ್ಬವಾದ ಹೋಲಾ ಮೊಹಲ್ಲಾದ ಮೆರವಣಿಗೆಗೆ ಅನುಮತಿ ನೀಡಿರಲಿಲ್ಲ. ನಾವಿದನ್ನು ಗುರುದ್ವಾರ ಸಮಿತಿಗೆ ತಿಳಿಸಿದ್ದೆವು. ನಿಮ್ಮ ಆದೇಶವನ್ನು ಪಾಲಿಸುವುದಾಗಿ ಅವರೂ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾಂದೇಡ್: ಕೊವಿಡ್-19 ಸೋಂಕು ಮಿತಿಮೀರುತ್ತಿರುವ ಕಾರಣಕ್ಕೆ ಹೋಲಾ ಮೊಹಲ್ಲಾ ಮೆರವಣಿಗೆ ಅನುಮತಿ ನೀಡದೆ ಇರುವ ಕಾರಣಕ್ಕೆ ಸಿಟ್ಟಿಗೆದ್ದ ಸಿಖ್ ಗುಂಪೊಂದು ಕತ್ತಿಗಳನ್ನು ಹಿಡಿದು ಗಲಾಟೆ ಸೃಷ್ಟಿಸಿದ್ದಲ್ಲದೆ, ಪೊಲೀಸರ ಮೇಲೆ ಹಲ್ಲೆಯನ್ನೂ ಮಾಡಿದೆ. ಈ ಗಲಾಟೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ನಾಂದೇಡ್ನಲ್ಲಿ ಸೋಮವಾರ ನಡೆದಿದೆ. ಅನೇಕ ವಾಹನಗಳನ್ನೂ ಜಖಂಗೊಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗುಂಪೊಂದು ಕತ್ತಿಗಳನ್ನು ಹಿಡಿದು ಗುರುದ್ವಾರದಿಂದ ಹೊರಬಂದು ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಮುರಿದು, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಎಲ್ಲೆಡೆ ಕೊರೊನಾ ವೈರಸ್ ಪ್ರಸರಣ ಮಿತಿಮೀರಿದೆ. ಹಾಗಾಗಿ ಸಿಖ್ರ ಹಬ್ಬವಾದ ಹೋಲಾ ಮೊಹಲ್ಲಾದ ಮೆರವಣಿಗೆಗೆ ಅನುಮತಿ ನೀಡಿರಲಿಲ್ಲ. ನಾವಿದನ್ನು ಗುರುದ್ವಾರ ಸಮಿತಿಗೆ ತಿಳಿಸಿದ್ದೆವು. ನಿಮ್ಮ ಆದೇಶವನ್ನು ಪಾಲಿಸುವುದಾಗಿ ಅವರೂ ಹೇಳಿದ್ದರು. ಗುರುದ್ವಾರದ ಒಳಗೇ ಕಾರ್ಯಕ್ರಮ ನಡೆಸುವುದಾಗಿಯೂ ಭರವಸೆ ನೀಡಿದ್ದರು. ಆದರೆ ಸಂಜೆ 4 ಗಂಟೆ ಹೊತ್ತಿಗೆ ಅವರ ನಿಶಾನ್ ಸಾಹಿಬ್ ಧ್ವಜವನ್ನು ಗುರುದ್ವಾರದ ಗೇಟ್ ಬಳಿ ತರುತ್ತಿದ್ದಂತೆ ವರಸೆಯೇ ಬದಲಾಗಿ ಹೋಯಿತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಲವರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. 300ಕ್ಕೂ ಹೆಚ್ಚು ಯುವಕರು ಗೇಟ್ನ್ನು ತೆರೆದು, ನುಗ್ಗಿಬಂದು ಬ್ಯಾರಿಕೇಡ್ಗಳನ್ನು ಮುರಿದರು. ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಲು ತೊಡಗಿದರು ಎಂದು ನಾಂದೇಡ್ ವಲಯದ ಡಿಐಜಿ ನಿಸಾರ್ ತಾಂಬೋಲಿ ತಿಳಿಸಿದ್ದಾರೆ.
ಗಾಯಗೊಂಡ ನಾಲ್ವರು ಪೊಲೀಸ್ ಸಿಬ್ಬಂದಿಯಲ್ಲಿ ಓರ್ವ ಕಾನ್ಸ್ಟೆಬಲ್ ಸ್ಥಿತಿ ಗಂಭೀರವಾಗಿದೆ. ಸುಮಾರು 6 ಪೊಲೀಸ್ ವಾಹನಗಳು ಜಖಂಗೊಂಡಿವೆ. ಸುಮಾರು 200 ಜನರ ವಿರುದ್ಧ ಕೊಲೆ ಯತ್ನ ಸೆಕ್ಷನ್ನಡಿ ಎಫ್ಐಆರ್ ದಾಖಲಿಸಲಾಗಿದೆ. ಈ ಹಿಂಸಾಚಾರ ನಡೆಸಿದವರನ್ನು ಎಲ್ಲರನ್ನೂ ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಏನಿದು ಹೋಲಾ ಮೊಹಲ್ಲಾ(ಹೋಲಾ)? ಹೋಲಾ ಮೊಹಲ್ಲಾ ಎಂಬುದು ಸಿಖ್ರು ಆಚರಿಸುವ ಹಬ್ಬ. ಹೋಳಿ ಹಬ್ಬದ ಮರುದಿನ ಈ ಹಬ್ಬ ಆಚರಿಸಲಾಗುತ್ತದೆ. ಹೋಳಿ ಹಬ್ಬದಲ್ಲಿ ಹಿಂದುಗಳು ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸಿದರೆ, ಹೋಲಾ ಮೊಹಲ್ಲಾದಲ್ಲಿ ಸಿಖ್ರು ತಮ್ಮ ಸಮರ ಕೌಶಲಗಳನ್ನು ಪ್ರದರ್ಶಿಸುತ್ತಾರೆ. ಮಹಾರಾಷ್ಟ್ರದ ನಾಂದೇಡ್ ಸಿಖ್ರ ಪ್ರಮುಖ ಯಾತ್ರಾಸ್ಥಳವಾಗಿದೆ. ಅಲ್ಲಿ ಪ್ರತಿವರ್ಷವೂ ಹೋಲಾ ಮೊಹಲ್ಲಾವನ್ನು ಅದ್ದೂರಿ, ಸಂಭ್ರಮದಿಂದ ಆಚರಿಸಲಾಗುತ್ತದೆ.
ಇದನ್ನೂ ಓದಿ: ಕಾಯಕ ಯೋಗಿ ಹುಟ್ಟುಹಬ್ಬ ಆಚರಣೆಗೆ ಕೊರೊನಾ ಅಡ್ಡಿ.. ಸರಳ ಆಚರಣೆಗೆ ಸಿದ್ಧತೆ