PM Modi in Kerala: ಚಿನ್ನಕ್ಕಾಗಿ ಎಲ್ಡಿಎಫ್ ಸರ್ಕಾರ ಜನರಿಗೆ ಮೋಸ ಮಾಡಿದೆ: ನರೇಂದ್ರ ಮೋದಿ
Kerala Assembly Elections 2021: ಕೇರಳ ರಾಜಕೀಯದಲ್ಲಿ ಎಲ್ಡಿಎಫ್ ಮತ್ತು ಯುಡಿಎಫ್ ಸೌಹಾರ್ದ ಒಪ್ಪಂದ ಮಾಡಿಕೊಂಡಿದೆ ಎಂಬುದು ಹಲವು ವರ್ಷಗಳಿಂದ ಕಾಪಾಡಿಕೊಂಡಿರುವ ಗೌಪ್ಯವಾದ ಗುಟ್ಟು. ಇದೇ ಮೊದಲ ಬಾರಿ ಕೇರಳದ ಮತದಾರರು ಏನಿದು ಮ್ಯಾಚ್ ಫಿಕ್ಸಿಂಗ್ ಎಂದು ಕೇಳುತ್ತಿದ್ದಾರೆ ಎಂದಿದ್ದಾರೆ ನರೇಂದ್ರ ಮೋದಿ.
ಪಾಲಕ್ಕಾಡ್: ಕೆಲವು ಬೆಳ್ಳಿ ತುಂಡುಗಳಿಗಾಗಿ ಜೂಡಸ್ ಯೇಸು ಕ್ರಿಸ್ತನನ್ನು ಮೋಸ ಮಾಡಿದ್ದನು. ಅದೇ ರೀತಿ ಚಿನ್ನದ ಕೆಲವೇ ತುಂಡುಗಳಿಗಾಗಿ ಎಲ್ಡಿಎಫ್ ಕೇರಳದ ಜನರಿಗೆ ಮೋಸ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮೆಟ್ರೊಮ್ಯಾನ್ ಇ.ಶ್ರೀಧರನ್ ಪರವಾಗಿ ಮೋದಿ ಇಂದು ಚುನಾವಣಾ ಪ್ರಚಾರ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಇ.ಶ್ರೀಧರನ್ ಅವರನ್ನು ಸನ್ಮಾನಿಸಿ ಮಾತನಾಡಿದ ಮೋದಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವದಿಸಿ. ಕೇರಳದ ಪ್ರಸ್ತುತ ಪರಿಸ್ಥಿತಿಯಿಂದ ಭಿನ್ನವಾದ ಕನಸುಗಳನ್ನು ಹೊತ್ತು ನಾನು ಬಂದಿದ್ದೇನೆ ಎಂದಿದ್ದಾರೆ.
ಕೇರಳ ರಾಜಕೀಯದಲ್ಲಿ ಎಲ್ಡಿಎಫ್ ಮತ್ತು ಯುಡಿಎಫ್ ಸೌಹಾರ್ದ ಒಪ್ಪಂದ ಮಾಡಿಕೊಂಡಿದೆ ಎಂಬುದು ಹಲವು ವರ್ಷಗಳಿಂದ ಕಾಪಾಡಿಕೊಂಡಿರುವ ಗೌಪ್ಯವಾದ ಗುಟ್ಟು. ಇದೇ ಮೊದಲ ಬಾರಿ ಕೇರಳದ ಮತದಾರರು ಏನಿದು ಮ್ಯಾಚ್ ಫಿಕ್ಸಿಂಗ್ ಎಂದು ಕೇಳುತ್ತಿದ್ದಾರೆ. ಯುಡಿಎಫ್ ಮತ್ತು ಎಲ್ಡಿಎಫ್ ಯಾವ ರೀತಿ ಜನರ ಹಾದಿ ತಪ್ಪಿಸುತ್ತಿದೆ ಎಂಬುದನ್ನು ಮತದಾರರು ಚಿಂತಿಸುತ್ತಿದ್ದಾರೆ . ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಂದಾಗಿವೆ. ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಯುಪಿಎ 1ಮೈತ್ರಿಕೂಟದಲ್ಲಿ ಅವು ಮೈತ್ರಿ ಪಕ್ಷಗಳಾಗಿದ್ದವು. ಎಡಪಕ್ಷವು ಕಾಂಗ್ರೆಸ್ನಿಂದ ಯುಪಿಎ2 ಮೈತ್ರಿಕೂಟಕ್ಕೆ ಬೆಂಬಲ ನೀಡುತ್ತಲೇ ಬಂದಿತ್ತು. ಆದರೆ ಕೇರಳದಲ್ಲಿ ಚುನಾವಣೆ ವೇಳೆ ಅವರು ಪರಸ್ಪರ ಆರೋಪ ಹೊರಿಸುತ್ತಿದ್ದಾರೆ.
ಮೆಟ್ರೊಮ್ಯಾನ್ ಶ್ರೀಧರನ್ ಜೀ ಅವರು ಭಾರತವನ್ನು ಆಧುನೀಕರಣಗೊಳಿಸಲು, ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಹಲವಾರು ಕಾರ್ಯಗಳನ್ನು ಮಾಡಿದ್ದಾರೆ. ಎಲ್ಲ ವಿಭಾಗದ ಜನರು ಅವರನ್ನು ಗೌರವಿಸುತ್ತಿದ್ದಾರೆ. ಕೇರಳದ ಅಭಿವೃದ್ಧಿಗಾಗಿ ಅವರು ಬದ್ಧರಾಗಿದ್ದಾರೆ. ಕೇರಳದ ನಿಜವಾದ ಮಗನಾಗಿರುವ ಅವರು ಕೇರಳದ ಅಭಿವೃದ್ಧಿಗಾಗಿ ಅಚಲ ನಿಲುವು ಹೊಂದಿದ್ದಾರೆ ಎಂದು ಮೋದಿ ಹೇಳಿದ್ದಾರೆ.
#WATCH | In Kerala’s Palakkad, PM Modi says, “Judas betrayed Lord Christ for a few pieces of silver. LDF has betrayed Kerala for a few pieces of gold.” pic.twitter.com/9C675xtzw3
— ANI (@ANI) March 30, 2021
ಕೇರಳದಲ್ಲಿ FAST ಅಭಿವೃದ್ಧಿಗೆ ಕಾಲ ಸನ್ನಿಹಿತವಾಗಿದೆ. F- fisheries and fertilisers (ಮೀನುಗಾರಿಕೆ ಮತ್ತು ರಸಗೊಬ್ಬರ), A – agriculture and Ayurveda (ಕೃಷಿ ಮತ್ತು ಆಯುರ್ವೇದ), S- skill development and social justice (ಕೌಶಲ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ) ಮತ್ತು T -tourism and technology (ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ) ಎಂದು ಮೋದಿ FAST ಎಂಬ ಪದಕ್ಕೆ ವಿವರಣೆ ನೀಡಿದ್ದಾರೆ. ರೈತರ ಕಲ್ಯಾಣ ಮತ್ತು ಕೃಷಿ ವಲಯದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಲವಾರು ವರ್ಷಗಳಿಂದ ಕನಿಷ್ಠ ಬೆಂಬಲ ಬೆಲೆ (MSP) ಏರಿಕೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ನಮ್ಮ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಿದೆ ಎಂದಿದ್ದಾರೆ.
ಕೇರಳ ಮತ್ತು ಪ್ರವಾಸೋದ್ಯಮ ಪರಸ್ಪರ ಬೆಸೆದುಕೊಂಡಿದೆ. ವಿಷಾದದ ಸಂಗತಿ ಏನೆಂದರೆ ಎಲ್ಡಿಎಫ್ ಮತ್ತು ಯುಡಿಎಫ್ ಇಲ್ಲಿ ಪ್ರವಾಸೋದ್ಯಮದ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಕೆಲಸ ಮಾಡಿಲ್ಲ. ತಂತ್ರಜ್ಞಾನದ ಮೂಲಕ ಅಭಿವೃದ್ಧಿಯಾಗಬೇಕು ಎಂದು ನಾವು ಬಯಸುತ್ತೇವೆ. ಎಡಪಕ್ಷಗಳು ಹಲವಾರು ಬಾರಿ ಇಲ್ಲಿ ಆಡಳಿತ ನಡೆಸಿವೆ. ಆದರೆ ಅವರು ಜೂನಿಯರ್ ಲೆವೆಲ್ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ರಾಜಕೀಯ ವಿರೋಧಿಗಳ ಹತ್ಯೆಯಾಗುತ್ತದೆ, ಹಲ್ಲೆಯಾಗುತ್ತದೆ. ಕೇರಳದಲ್ಲಿ ಬಿಜೆಪಿ ಸರ್ಕಾರ ಬಂದರೆ ಇದೆಲ್ಲವನ್ನೂ ನಾವು ನಿಲ್ಲಿಸುತ್ತೇವೆ. ನಮ್ಮ ನೆಲದ ಸಂಸ್ಕೃತಿಯನ್ನು ಎಲ್ಡಿಎಫ್ ಮತ್ತು ಯುಡಿಎಫ್ ಪಕ್ಷಗಳು ಗೌರವಿಸುತ್ತಿಲ್ಲ. ಅವರ ನಾಯಕರು ನಮ್ಮ ಸಂಪ್ರದಾಯಗಳನ್ನು ಗೌರವಿಸುತ್ತಿಲ್ಲ. ಮುಗ್ದ ಭಕ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದಕ್ಕೆ ಎಲ್ಡಿಎಫ್ಗೆ ನಾಚಿಕೆಯಾಗಬೇಕು. ಇದೆಲ್ಲ ನಡೆಯುತ್ತಿರುವಾಗ ಮೌನ ವಹಿಸಿದ್ದಕ್ಕೆ ಯುಡಿಎಫ್ ಗೆ ನಾಚಿಕೆಯಾಗಬೇಕು ಎಂದಿದ್ದಾರೆ ಮೋದಿ
Kerala: ‘Metro Man’ E Sreedharan felicitates PM Narendra Modi in Palakkad where the latter will address a rally shortly. #KeralaAssemblyElections2021 pic.twitter.com/32Fj1L3ZeR
— ANI (@ANI) March 30, 2021
ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಇ.ಶ್ರೀಧರನ್, ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ 24 ಗಂಟೆ ನೀರು ಪೂರೈಕೆ, ಘನ ತ್ಯಾಜ್ಯ ನಿರ್ವಹಣೆ ಯೋಜನೆಗೆ ಬೇಕಾಗಿರುವ ಮಾಸ್ಟರ್ ಪ್ಲಾನ್ ನಾನು ಸಿದ್ಧಪಡಿಸಿದ್ದೇನೆ. ಮುಂದಿನ 5 ವರ್ಷಗಳಲ್ಲಿ 25 ಲಕ್ಷ ಗಿಡನೆಡುವ ಮೂಲಕ ಇಲ್ಲಿ ಹಸಿರು ಹೊದಿಕೆ ಸೃಷ್ಟಿಸುವ ಕಾರ್ಯ ಯೋಜನೆ ನನ್ನದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸದೇ ಇರುವುದಕ್ಕೆ ಕಾರಣ ಅಲ್ಲಿ ಶೇ.90 ಸಾಕ್ಷರತೆ ಇದೆ: ಒ.ರಾಜಗೋಪಾಲ್
Published On - 12:27 pm, Tue, 30 March 21