ನರೇಂದ್ರ ಮೋದಿ ಭೇಟಿಯ ನಂತರ ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರ, ಹಿಂದೂ ದೇವಾಲಯಗಳ ಮೇಲೆ ದಾಳಿ
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಮುಸ್ಲಿಮರ ಬಗ್ಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಇಸ್ಲಾಮಿಕ್ ತೀವ್ರವಾದಿಗಳು ಮೋದಿ ಭೇಟಿ ವಿರೋಧಿಸಿ ಬಾಂಗ್ಲಾದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದರು.
ಢಾಕಾ: ಭಾರತದ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶ ಭೇಟಿ ವಿರೋಧಿಸಿ ಇಸ್ಲಾಮಿಕ್ ತೀವ್ರಗಾಮಿಗಳು ನಡೆಸುತ್ತಿದ್ದ ಪ್ರತಿಭಟನೆಯು ನರೇಂದ್ರ ಮೋದಿ ಬಾಂಗ್ಲಾ ದೇಶದಿಂದ ನಿರ್ಗಮಿಸಿದ ನಂತರ ಹಿಂಸಾಚಾರಕ್ಕೆ ತಿರುಗಿದೆ. ಉತ್ತರ ಬಾಂಗ್ಲಾದೇಶದಲ್ಲಿ ಕೆಲ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದೆ. ರೈಲೊಂದನ್ನು ತಡೆದ ತೀವ್ರಗಾಮಿಗಳು ಎಂಜಿನ್ ಮತ್ತು 10 ಬೋಗಿಗಳನ್ನು ಹಾಳು ಮಾಡಿದ್ದಾರೆ. ಈ ಘಟನೆಯಲ್ಲಿ ಸುಮಾರು 10 ಪ್ರಯಾಣಿಕರಿಗೆ ಗಾಯಗಳಾಗಿವೆ. ಬಾಂಗ್ಲಾದೇಶದ ವಿವಿಧೆಡೆ ಪೊಲೀಸರೊಂದಿಗೆ ಪ್ರತಿಭಟನೆಕಾರರು ಘರ್ಷಣೆಗಿಳಿದಿದ್ದಾರೆ. ಈ ಸಂದರ್ಭ 10 ಪ್ರತಿಭಟನಾನಿರತರು ಸಾವನ್ನಪ್ಪಿದ್ದಾರೆ.
ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರಕ್ಕೆ ನರೇಂದ್ರ ಮೋದಿ ಶುಕ್ರವಾರ ಭೇಟಿ ನೀಡಿದ್ದರು. ಬಾಂಗ್ಲಾದೇಶವು ಅಸ್ತಿತ್ವಕ್ಕೆ ಬಂದ 50ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡಿದ್ದ ಮೋದಿ, ಶನಿವಾರ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಅವರಿಗೆ 12 ಲಕ್ಷ ಕೋವಿಡ್-19 ಲಸಿಕೆಗಳನ್ನು ನೀಡಿ, ಭಾರತಕ್ಕೆ ಹಿಂದಿರುಗಿದರು.
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಮುಸ್ಲಿಮರ ಬಗ್ಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಇಸ್ಲಾಮಿಕ್ ತೀವ್ರವಾದಿಗಳು ಮೋದಿ ಭೇಟಿ ವಿರೋಧಿಸಿ ಬಾಂಗ್ಲಾದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದರು. ಜನದಟ್ಟಣೆ ಹೆಚ್ಚಾಗಿರುವ ಢಾಕಾ ಮತ್ತು ಚಿತ್ತಗಾಂಗ್ ಮಹಾನಗರಗಳಲ್ಲಿ ಶುಕ್ರವಾರ ಸಾವಿರಾರು ಮಂದಿ ಬೀದಿಗಳಿದು ಪ್ರತಿಭಟಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ರಬ್ಬರ್ ಬುಲೆಟ್ಗಳನ್ನು ಹಾರಿಸಿದ್ದರು.
ಪೂರ್ವ ಬಾಂಗ್ಲಾದೇಶದ ಬ್ರಹ್ಮನ್ಬರಿಯಾ ಜಿಲ್ಲೆಯಲ್ಲಿ ಭಾನುವಾರ ಹೆಫಾಝಾತ್-ಎ-ಇಸ್ಲಾಂ ಸಂಘಟನೆಯ ಕಾರ್ಯಕರ್ತರು ರೈಲೊಂದರ ಮೇಲೆ ದಾಳಿ ನಡೆಸಿದರು. ಈ ಪ್ರಕರಣದಲ್ಲಿ 10 ಪ್ರಯಾಣಿಕರಿಗೆ ಗಾಯಗಳಾಗಿವೆ. ರೈಲಿನ ಎಂಜಿನ್ ಮತ್ತು ಎಲ್ಲ 10 ಬೋಗಿಗಳು ಹಾಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಬ್ರಹ್ಮನ್ಬರಿಯಾ ಜಿಲ್ಲೆಯಲ್ಲಿ ಹಲವು ಸರ್ಕಾರಿ ಕಚೇರಿಗಳನ್ನು ಸುಟ್ಟುಹಾಕಲಾಗಿದೆ. ಅಲ್ಲಿನ ಪ್ರೆಸ್ಕ್ಲಬ್ ಮೇಲೆಯೂ ದಾಳಿ ನಡೆದಿದ್ದು, ಹಲವು ಪತ್ರಕರ್ತರು ಗಾಯಗೊಂಡಿದ್ದಾರೆ. ಇಡೀ ಜಿಲ್ಲೆಯ ಹೊತ್ತಿ ಉರಿಯುತ್ತಿದೆ, ನಾವು ಭಯ ಮತ್ತು ಅಸಹಾಯಕತೆಯಿಂದ ಕಂಗಾಲಾಗಿದ್ದೇವೆ. ನಗರದ ಕೆಲ ಹಿಂದೂ ದೇವಾಲಯಗಳ ಮೇಲೆಯೂ ದಾಳಿ ನಡೆದಿದೆ ಎಂದು ಪತ್ರಕರ್ತ ಜಾವೇದ್ ರಹೀಂ ಹೇಳಿಕೆಯನ್ನು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಶ್ಚಿಮ ಬಾಂಗ್ಲಾದೇಶದ ರಾಜ್ಶಹಿ ಜಿಲ್ಲೆಯಲ್ಲಿ ಎರಡು ಬಸ್ಗಳಿಗೆ ಬೆಂಕಿಹಚ್ಚಲಾಗಿದೆ. ನಾರಾಯಣಗಂಜ್ನಲ್ಲಿ ನೂರಾರು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ರಸ್ತೆಗಳಿಗೆ ಅಡ್ಡಲಾಗಿ ಮರದದಿಮ್ಮಿ ಮತ್ತು ಮರಳುಚೀಲಗಳನ್ನು ಹಾಕಲಾಗಿದೆ. ಮೋದಿ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದನ್ನು ಖಂಡಿಸಿ ಹೆಫಾಝಾತ್-ಎ-ಇಸ್ಲಾಂ ಸಂಘಟನೆಯು ಭಾನುವಾರ ಬಾಂಗ್ಲಾದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು.
ಶಾಂತಿಯಿಂದ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ನಮ್ಮ ಸೋದರರ ಬಲಿದಾನವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೆಫಾಝಾತ್-ಎ-ಇಸ್ಲಾಂ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಅಜೀಜ್ಉಲ್ ಹಕ್ ಚಿತ್ತಗಾಂಗ್ನ ಪ್ರತಿಭಟನೆಯಲ್ಲಿ ಶನಿವಾರ ಹೇಳಿದರು.
ಇದನ್ನೂ ಓದಿ: ಮೋದಿ ವೀಸಾ ರದ್ದುಗೊಳಿಸಬೇಕು: ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶ ಪ್ರವಾಸ ಉದ್ದೇಶಿಸಿ ಮಮತಾ ಬ್ಯಾನರ್ಜಿ ವಾಗ್ದಾಳಿ
ಇದನ್ನೂ ಓದಿ: ಸೇನಾ ಆಸ್ಪತ್ರೆಯಿಂದ ಏಮ್ಸ್ಗೆ ದಾಖಲಾದ ರಾಷ್ಟ್ರಪತಿ ರಾಮನಾಥ ಕೋವಿಂದ್; ಬಾಂಗ್ಲಾದೇಶದಿಂದ ಕರೆ ಮಾಡಿದ ಪ್ರಧಾನಿ ಮೋದಿ
Published On - 6:55 pm, Sun, 28 March 21