Suez Canal Blockage: ಮುಂದಕ್ಕೆ ಚಲಿಸುತ್ತಿದೆ ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿರುವ ದೈತ್ಯ ಹಡಗು
Suez Canal: ಹಡಗಿನ ಅಡಿಯಲ್ಲಿರುವ ಮರಳು ತೆರವುಗೊಳಿಸಲು ಡ್ರೆಡ್ಜರ್ಗಳು (ಹೂಳೆತ್ತುವ ಯಂತ್ರಗಳು) ಯತ್ನಿಸುತ್ತಿವೆ. ಕಾಲುವೆ ಪ್ರಾಧಿಕಾರದ ಬಳಿಯಿರುವ ಟಗ್ ಬೋಟ್ಗಳ (ದೈತ್ಯ ಹಡಗನ್ನು ಎಳೆಯಬಲ್ಲ ದೋಣಿ) ಜೊತೆಗೆ ಹಾಲೆಂಡ್ ಮತ್ತು ಇಟಲಿಯ ಇನ್ನೆರೆಡು ಟಗ್ ಬೋಟ್ಗಳು ಭಾನುವಾರ ಸೂಯೆಜ್ ಕಾಲುವೆಗೆ ಬಂದಿತ್ತು.
ಕೈರೋ: ಈಜಿಪ್ಟ್ನ ಸೂಯೆಜ್ ಕಾಲುವೆಯಲ್ಲಿ ದಡಕ್ಕೆ ಅಪ್ಪಳಿಸಿ ನಿಂತಿರುವ ದೈತ್ಯ ಸರಕು ಸಾಗಣೆ ಹಡಗು ಎವರ್ ಗಿವನ್ ಮುಂದೆ ಸಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ಕಳೆದ ಒಂದು ವಾರದಿಂದ ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿರುವ ಹಡಗನ್ನು ರಕ್ಷಣಾ ತಂಡಗಳು ಮುಂದೆ ಚಲಿಸುವಂತೆ ಮಾಡಿದ್ದಾರೆ ಎಂದು ಕಡಲ ಸೇವಾ ಪೂರೈಕೆದಾರ ಇಂಚ್ ಕೇಪ್ ಹೇಳಿದೆ. ಎರಡೂ ದಡಕ್ಕೆ ತಾಗಿಕೊಂಡು ನಿಂತಿರುವ ಎವರ್ ಗಿವನ್ ಹಡಗನ್ನು ಕದಲಿಸಿ ಅದರ ಮಾರ್ಗದಲ್ಲಿ ಸಾಗುವಂತೆ ಮಾಡಿ, ಇತರ ಹಡಗುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಪ್ರಯತ್ನ ಭಾನುವಾರವೂ ಮುಂದುವರಿದಿತ್ತು. ಆದಾಗ್ಯೂ, ಅಲ್ಲಿ ಯಾವತ್ತು ಟ್ರಾಫಿಕ್ ಮುಕ್ತವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸುಮಾರು 450 ಹಡಗುಗಳು ಇಲ್ಲಿ ಸಿಲುಕಿದ್ದು, ಮುಂದಿನ ಗಮ್ಯ ತಲುಪಲಿರುವ ಜಲಮಾರ್ಗ ಯಾವಾಗ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಸೂಯೆಜ್ ಕಾಲುವೆ ಜಾಗತಿಕ ವ್ಯಾಪಾರದ ಸುಮಾರು ಶೇಕಡಾ 12% ಮಾರ್ಗವಾಗಿದೆ. ಕೊರೊನಾ ಸಾಂಕ್ರಾಮಿಕದ ನಡುವೆ ಜಾಗತಿಕ ಪೂರೈಕೆ ಸರಪಳಿಗೆ ಇದು ದೊಡ್ಡ ಹೊಡೆತ ನೀಡಿದೆ. ಕೆಲವು ಹಡಗುಗಳು ಈಗಾಗಲೇ ಸೂಯೆಜ್ ಬದಲಿಗೆ ಆಫ್ರಿಕಾದ ದಕ್ಷಿಣ ತುದಿಯಲ್ಲಿ ಸುದೀರ್ಘ ಮತ್ತು ದುಬಾರಿ ಪ್ರವಾಸವನ್ನು ಆಯ್ದುಕೊಂಡಿವೆ. ತಜ್ಞರ ನೆರವು ಪಡೆದುಕೊಂದು ಎವರ್ ಗಿವನ್ ಸುತ್ತ ಇರುವ 27,000 ಕ್ಯುಬಿಕ್ ಮೀಟರ್ ಮರಳು ಹಾಗೂ ಮಣ್ಣು ತೆಗೆಯಲಾಗಿದೆ.
ಹಡಗಿನ ಅಡಿಯಲ್ಲಿರುವ ಮರಳು ತೆರವುಗೊಳಿಸಲು ಡ್ರೆಡ್ಜರ್ಗಳು (ಹೂಳೆತ್ತುವ ಯಂತ್ರಗಳು) ಯತ್ನಿಸುತ್ತಿವೆ. ಕಾಲುವೆ ಪ್ರಾಧಿಕಾರದ ಬಳಿಯಿರುವ ಟಗ್ ಬೋಟ್ಗಳ (ದೈತ್ಯ ಹಡಗನ್ನು ಎಳೆಯಬಲ್ಲ ದೋಣಿ) ಜೊತೆಗೆ ಹಾಲೆಂಡ್ ಮತ್ತು ಇಟಲಿಯ ಇನ್ನೆರೆಡು ಟಗ್ ಬೋಟ್ಗಳು ಭಾನುವಾರ ಸೂಯೆಜ್ ಕಾಲುವೆಗೆ ಬಂದಿತ್ತು. ಎವರ್ಗಿವನ್ ಹಡಗನ್ನು ಸಂಚಾರಯೋಗ್ಯ ಸ್ಥಿತಿಗೆ ತರುವ ಪ್ರಯತ್ನಕ್ಕೆ ಹವಾಮಾನದ ಅಡಚಣೆಯೂ ದೊಡ್ಡ ತಲೆನೋವಾಗಿದೆ. ಅಲೆಗಳು ಮತ್ತು ಗಾಳಿ ಮನುಷ್ಯಪ್ರಯತ್ನಕ್ಕೆ ಪೂರಕವಾಗಿಲ್ಲ ಎಂದು ಪ್ರಾಧಿಕಾರ ಟ್ವೀಟ್ನಲ್ಲಿ ತಿಳಿಸಿದೆ.
ಸರಕುಸಾಗಣೆ ಹಡಗಿನಲ್ಲಿರುವ ಕಂಟೇನರ್ಗಳನ್ನು ಕೆಳಗಿಳಿಸುವ ಪ್ರಯತ್ನಕ್ಕೂ ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಡಗಿನಿಂದ ತುರ್ತಾಗಿ ಕಂಟೇನರ್ಗಳನ್ನು ಕೆಳಗಿಳಿಸಲು ಬೇಕಾದ ವಿಶೇಷ ಉಪಕರಣಗಳ ಖರೀದಿಗೂ ಈಜಿಪ್ಟ್ ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ. ಕಾಲುವೆಯಲ್ಲಿ ಸಿಲುಕಿರುವ ಎವರ್ಗಿವನ್ ಅಲ್ಲಿಂದ ಕದಲುವಂತೆ ಮಾಡುವ ಪ್ರಯತ್ನಕ್ಕೆ ಶನಿವಾರ ರಾತ್ರಿ ತುಸು ಫಲ ಸಿಕ್ಕಿದೆ. ಹಡಗಿನ ಅಡಿಯಲ್ಲಿರುವ ಹೂಳನ್ನು ತೆರವುಗೊಳಿಸಲು ಸತತ ಪ್ರಯತ್ನ ಸಾಗಿದೆ. ಕಾಲುವೆಯಲ್ಲಿ ಹಡಗು ಸಿಲುಕಿಕೊಳ್ಳಲು ವಾತಾವರಣವೇ ಕಾರಣ. ಎಂಜಿನ್ ಅಥವಾ ಮನುಷ್ಯ ತಪ್ಪುಗಳು ಅಲ್ಲ ಎಂದು ಹಡಗಿನ ಸಿಬ್ಬಂದಿ ಮತ್ತು ನಿರ್ವಹಣೆಯ ಹೊತ್ತಿರುವ ಬರ್ನ್ಹಾರ್ಡ್ ಶಟಲ್ ಶಿಪ್ಮ್ಯಾನೇಜ್ಮೆಂಟ್ ಕಂಪನಿಯ ಟೆಕ್ನಿಕಲ್ ಮ್ಯಾನೇಜರ್ ಹೇಳಿದ್ದಾರೆ.
ಏನೇನು ಸಿಕ್ಕಿಹಾಕಿಕೊಂಡಿದೆ? ಸೂಯೆಜ್ ಕಾಲುವೆಯಲ್ಲಿ ಈಗ ಸಿಕ್ಕಿಹಾಕಿಕೊಂಡಿರುವುದು ಒಟ್ಟು 1.2 ಕೋಟಿ ಟನ್ ಸರಕು. 1 ಟನ್ ಅಂದರೆ ಸಾವಿರ ಕೆಜಿ. ಅಂಥ ಸಾವಿರ ಕೆಜಿಯನ್ನು 1.2 ಕೋಟಿಯಿಂದ ಗುಣಿಸಿದರೆ ಎಷ್ಟು ಮೊತ್ತ ಬರುತ್ತದೋ ಅಷ್ಟು ಸರಕು ಸಿಕ್ಕಿಹಾಕಿಕೊಂಡಿದೆ. ಅದರಲ್ಲಿ ಶೇ 34.1ರಷ್ಟು ಕಂಟೇನರ್ಗಳು, ಶೇ 24.6 ಕಚ್ಚಾ ತೈಲ, ಶೇ 6.4ರಷ್ಟು ಸ್ವಚ್ಛ ಪೆಟ್ರೋಲಿಯಂ ಉತ್ಪನ್ನಗಳು, ಧಾನ್ಯಗಳು ಶೇ 6.1, ಕಲ್ಲಿದ್ದಲು ಶೇ 6, ಎಲ್ಪಿಜಿ (ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ಶೇ 3.1, ಎಲ್ಎನ್ಜಿ (ಲಿಕ್ವಿಡ್ ನ್ಯಾಚುರಲ್ ಗ್ಯಾಸ್) ಶೇ 2.9, ಕಬ್ಬಿಣ ಶೇ 6.7, ಗೊಬ್ಬರ ಶೇ 5.2, ಇತರ ಶೇ 2.7 ಮತ್ತು ವಾಹನಗಳು ಶೇ 2.2ರಷ್ಟಿದೆ.
ತಜ್ಞರ ನೆರವು ಪಡೆದುಕೊಂದು ಎವರ್ ಗಿವನ್ ಸುತ್ತ ಇರುವ ಮರಳು ಹಾಗೂ ಮಣ್ಣು ತೆಗೆಯಲಾಗುತ್ತಿದೆ. ಇತ್ತ ಈ ಘಟನೆ ನಡೆದ ನಂತರದಿಂದ ಸೂಯೆಜ್ ಬಳಿ 200ಕ್ಕೂ ಹೆಚ್ಚು ಹಡಗುಗಳು ಲಂಗರು ಹಾಕಿವೆ.. ಈಗಾಗಲೇ ಶಿಪ್ಪಿಂಗ್ ಕಂಪನಿಗಳು ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಮೂಲಕ ಸಾಗಾಟ ಆರಂಭಿಸಿವೆ. ಆದರೂ ಈ ಮಾರ್ಗವು ಏಷ್ಯಾ ಹಾಗೂ ಯುರೋಪ್ ಮಧ್ಯದ ಪ್ರಯಾಣಕ್ಕೆ ಸರಾಸರಿಯಾಗಿ ಕನಿಷ್ಠ 7 ದಿನಗಳನ್ನು ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: ಸೂಯೆಜ್ ಕಾಲುವೆ ಸಂಕಷ್ಟ: 14 ಟಗ್ ಬೋಟ್ಗಳ ಸತತ ಪ್ರಯತ್ನಕ್ಕೆ ಕದಲಿತು ದೈತ್ಯ ಹಡಗು, ಸರಕು ಇಳಿಸಲು ಈಜಿಪ್ಟ್ ಸಿದ್ಧತೆ
Published On - 10:50 am, Mon, 29 March 21