ನೀರಜ್ ಚೋಪ್ರಾ ಕ್ಲಾಸಿಕ್ 2025; ಚೊಚ್ಚಲ ಆವೃತ್ತಿಯಲ್ಲಿ ಚಿನ್ನಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ
Neeraj Chopra Classic 2025: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ನೀರಜ್ ಚೋಪ್ರಾ ಕ್ಲಾಸಿಕ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ 86.18 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ. ಕೀನ್ಯಾದ ಜೂಲಿಯಸ್ ಯೆಗೊ ಮತ್ತು ಶ್ರೀಲಂಕಾದ ರುಮೇಶ್ ಪತಿರಾಜೆ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಮೂರನೇ ಪ್ರಯತ್ನದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಗೆ ಇದು ಸತತ ಮೂರನೇ ಪ್ರಶಸ್ತಿಯಾಗಿದೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ನೀರಜ್ ಚೋಪ್ರಾ ಕ್ಲಾಸಿಕ್ 2025 (Neeraj Chopra Classic 2025)ರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆಯೇ ಅದ್ಭುತ ಪ್ರದರ್ಶನ ನೀಡಿದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಚೊಚ್ಚಲ ಆವೃತ್ತಿಯಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ನೀರಜ್ ಈ ಸ್ಪರ್ಧೆಯಲ್ಲಿ 86.18 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಕೀನ್ಯಾದ ಜೂಲಿಯಸ್ ಯೆಗೊ 84.51 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರೆ, ಶ್ರೀಲಂಕಾದ ರುಮೇಶ್ ಪತಿರಾಜೆ 84.34 ಮೀಟರ್ ಎಸೆಯುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಹಾಗೆಯೇ ನಾಲ್ಕನೇ ಸ್ಥಾನ ಪಡೆದ ಭಾರತದ ಸಚಿನ್ ಯಾದವ್ 82.33 ಮೀಟರ್ ಎಸೆದರು.
3ನೇ ಪ್ರಯತ್ನದಲ್ಲಿ 86.18 ಮೀಟರ್ ದೂರ
ಡಬಲ್ ಒಲಿಂಪಿಕ್ ಪದಕ ವಿಜೇತ ಮತ್ತು ಪ್ರಸ್ತುತ ವಿಶ್ವ ಚಾಂಪಿಯನ್ ನೀರಜ್ ಫೌಲ್ ಥ್ರೋ ಮೂಲಕ ಪ್ರಾರಂಭಿಸಿದರು. ಎರಡನೇ ಪ್ರಯತ್ನದಲ್ಲಿ 82.99 ಮೀಟರ್ ದೂರ ಎಸೆದ ನೀರಜ್, ಮೂರನೇ ಪ್ರಯತ್ನದಲ್ಲಿ 86.18 ಮೀಟರ್ ದೂರ ಎಸೆದಿದ್ದು, ಅವರಿಗೆ ಚಿನ್ನದ ಪದಕವನ್ನು ತಂದುಕೊಟ್ಟಿತು. ನೀರಜ್ ಇಷ್ಟು ದೂರ ಜಾವೆಲಿನ್ ಎಸೆದ ಕೂಡಲೇ ಕ್ರೀಡಾಂಗಣದಲ್ಲಿ ಹಾಜರಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸಿದರು. ಆದರೆ ಅವರ ನಾಲ್ಕನೇ ಥ್ರೋ ಫೌಲ್ ಆಗಿತ್ತು. ಐದನೇ ಪ್ರಯತ್ನದಲ್ಲಿ 84.07 ಮೀಟರ್ ದೂರ ಎಸೆದ ನೀರಜ್ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ 82.22 ಮೀಟರ್ ದೂರ ಎಸೆದರು.
Neeraj. Yego. Pathirage. Three names, one moment etched in time. The podium stood tall — just like their journeys.#NeerajChopraClassic #GameOfThrows pic.twitter.com/Zqk99r60HK
— Neeraj Chopra Classic (@nc_classic) July 5, 2025
ತಮ್ಮ ಮೂರನೇ ಪ್ರಯತ್ನದಲ್ಲಿ 86.18 ಮೀಟರ್ ದೂರ ಎಸೆಯುವುದರೊಂದಿಗೆ ಚಿನ್ನದ ಪದಕ ಗೆದ್ದ ನೀರಜ್ಗೆ ಇದು ಸತತ ಮೂರನೇ ಪ್ರಶಸ್ತಿಯಾಗಿದೆ. ನೀರಜ್ ಈ ಹಿಂದೆ ಪ್ಯಾರಿಸ್ ಡೈಮಂಡ್ ಲೀಗ್ (ಜೂನ್ 20) ಮತ್ತು ಪೋಲೆಂಡ್‌ನ ಒಸ್ಟ್ರಾವಾದಲ್ಲಿ (ಜೂನ್ 24) ಗೋಲ್ಡನ್ ಸ್ಪೈಕ್ ಪ್ರಶಸ್ತಿಯನ್ನು ಗೆದ್ದಿದ್ದರು.
ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್; ಸ್ಪರ್ಧೆ ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್‌ನಲ್ಲಿ ಪ್ರಸಾರ?
12 ಜಾವೆಲಿನ್ ಎಸೆತಗಾರರು ಭಾಗಿ
ನೀರಜ್ ಚೋಪ್ರಾ ಕ್ಲಾಸಿಕ್ ಸ್ಪರ್ಧೆಯಲ್ಲಿ ಏಳು ಪ್ರಮುಖ ಅಂತರರಾಷ್ಟ್ರೀಯ ಜಾವೆಲಿನ್ ಎಸೆತಗಾರರು ಸೇರಿದಂತೆ 12 ಜಾವೆಲಿನ್ ಎಸೆತಗಾರರು ಭಾಗವಹಿಸಿದ್ದರು. ಚೋಪ್ರಾ ಸೇರಿದಂತೆ ಐದು ಭಾರತೀಯ ಆಟಗಾರರು ಸಹ ಇದರಲ್ಲಿ ಸ್ಪರ್ಧಿಸಿದ್ದರು. ವಾಸ್ತವವಾಗಿ ನೀರಜ್ ಚೋಪ್ರಾ ಕ್ಲಾಸಿಕ್ ಸ್ಪರ್ಧೆಯನ್ನು ಈ ಹಿಂದೆ ಮೇ 24 ರಂದು ಹರಿಯಾಣದ ಪಂಚಕುಲದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅಂತರರಾಷ್ಟ್ರೀಯ ಪ್ರಸಾರಕರ ಅಗತ್ಯಕ್ಕೆ ಅನುಗುಣವಾಗಿ ಬೆಳಕಿನ ವ್ಯವಸ್ಥೆಗಳ ಕೊರತೆಯಿಂದಾಗಿ ಅದನ್ನು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಸ್ಪರ್ಧೆಯನ್ನು ಮುಂದೂಡಲಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ