10 ಭರ್ಜರಿ ಸಿಕ್ಸ್, 13 ಫೋರ್: ತೂಫಾನ್ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ
England U19 vs India U19: ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ (143) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ಭಾರತ ಅಂಡರ್ 19 ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 363 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಅಂಡರ್ 19 ತಂಡ 308 ರನ್ಗಳಿಸಿ ಆಲೌಟ್ ಆಗಿದೆ.
Updated on: Jul 06, 2025 | 7:23 AM

ಭಾರತದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Suryavanshi) ಏಕದಿನ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ವಿಸ್ಫೋಟಕ ಸೆಂಚುರಿ ಸಿಡಿಸುವ ಮೂಲಕ. ವೋರ್ಸೆಸ್ಟರ್ನಲ್ಲಿ ನಡೆದ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧದ ಪಂದ್ಯದಲ್ಲಿ ಭಾರತ ಅಂಡರ್-19 ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ವೈಭವ್ ಆಂಗ್ಲ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ಯುವ ಎಡಗೈ ದಾಂಡಿಗನ ಬ್ಯಾಟ್ನಿಂದ ಕೇವಲ 52 ಎಸೆತಗಳಲ್ಲಿ ಶತಕ ಮೂಡಿಬಂತು. ಇದರೊಂದಿಗೆ ಯೂತ್ ಒಡಿಐ ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆ ವೈಭವ್ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ಪಾಕಿಸ್ತಾನದ ಕಮ್ರಾನ್ ಗುಲಾಮ್ ಹೆಸರಿನಲ್ಲಿತ್ತು. 2013 ರಲ್ಲಿ ಇಂಗ್ಲೆಂಡ್ ವಿರುದ್ಧ ಕಮ್ರಾನ್ ಕೇವಲ 53 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಈ ದಾಖಲೆ ಬರೆದಿದ್ದರು. ಇದೀಗ 52 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅಷ್ಟೇ ಅಲ್ಲದೆ ಯೂತ್ ಒಡಿಐ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಕೂಡ ವೈಭವ್ ಸೂರ್ಯವಂಶಿ ಪಾಲಾಗಿದೆ. ಈ ಮೊದಲು ಈ ದಾಖಲೆ ಬಾಂಗ್ಲಾದೇಶ್ ತಂಡದ ನಜ್ಮುಲ್ ಹೊಸೈನ್ ಶಾಂತೊ ಹೆಸರಿನಲ್ಲಿತ್ತು. 2013 ರಲ್ಲಿ ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದಾಗ ನಜ್ಮುಲ್ ಹೊಸೈನ್ ಶಾಂತೊ ಅವರ ವಯಸ್ಸು 14 ವರ್ಷ 241 ದಿನಗಳು ಮಾತ್ರ.

ಇದೀಗ 14 ವರ್ಷ, 100 ದಿನಗಳ ವಯಸ್ಸಿನಲ್ಲಿ ವೈಭವ್ ಸೂರ್ಯವಂಶಿ ಶತಕ ಸಿಡಿಸಿದ್ದಾರೆ. ಈ ಮೂಲಕ ಯೂತ್ ಒಡಿಐ ಕ್ರಿಕೆಟ್ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ., ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆಗಳನ್ನು ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ 78 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ 10 ಭರ್ಜರಿ ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 143 ರನ್ ಚಚ್ಚಿದರು. ಈ ಭರ್ಜರಿ ಶತಕದ ನೆರವಿನೊಂದಿಗೆ ಭಾರತ ಅಂಡರ್ 19 ತಂಡ 50 ಓವರ್ಗಳಲ್ಲಿ 363 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಅಂಡರ್-19 ತಂಡವು 308 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ-U19 ತಂಡವು 55 ರನ್ಗಳ ಭರ್ಜರಿ ಜಯ ಸಾಧಿಸಿದೆ.
