Suez Canal Blockage: ಎವರ್ ಗಿವನ್ ಕಂಟೇನರ್ ಹಡಗು ಬಿಡಿಸಲು ಅಮೆರಿಕ ನೆರವು; ವಿಶ್ವ ವಾಣಿಜ್ಯ ಚಟುವಟಿಕೆ ಅಯೋಮಯ
ಸೂಯೆಜ್ ಕಾಲುವೆಯಲ್ಲಿ ಅಡ್ಡಡ್ಡ ತಿರುಗಿ ಸಿಲುಕಿಕೊಂಡಿರುವ ಎವರ್ ಗಿವನ್ ಹಡಗನ್ನು ಮುಕ್ತಗೊಳಿಸಲು ಬೆಂಬಲ ನೀಡುವುದಕ್ಕೆ ಈಜಿಪ್ಟ್ ಜತೆಗೆ ಮಾತುಕತೆ ನಡೆಸಿರುವುದಾಗಿ ಅಮೆರಿಕದ ವೈಟ್ ಹೌಸ್ ಶುಕ್ರವಾರ ಹೇಳಿದೆ.
ಸೂಯೆಜ್ ಕಾಲುವೆಯಲ್ಲಿ ಅಡ್ಡಡ್ಡ ತಿರುಗಿ ನಿಂತು, ಸಂಚಾರ ದಟ್ಟಣೆಗೆ ಕಾರಣವಾಗಿರುವ 1312 ಅಡಿ ಉದ್ದ ಹಾಗೂ 193 ಅಡಿ ಅಗಲದ ಎವರ್ ಗಿವನ್ (ever given) ಸಮಸ್ಯೆಯನ್ನು ಬಗೆಹರಿಸುವುದಕ್ಕೆ ನೆರವಾಗುವುದಾಗಿ ಅಮೆರಿಕವು ಈಜಿಪ್ಟ್ಗೆ ಹೇಳಿದೆ. ಮಾರ್ಚ್ 22ರಂದು ಈ ಘಟನೆ ನಡೆದಿದ್ದು, ಈಗಾಗಲೇ ಅದರ ಗಾಂಭೀರ್ಯ ಅರಿವಿಗೆ ಬರುತ್ತಿದೆ. ವಿಶ್ವದ ಅತಿ ದೊಡ್ಡ ಶಿಪ್ಪಿಂಗ್ ಕಂಪೆನಿಯ ಮಾಲೀಕರೊಬ್ಬರು ಎಚ್ಚರಿಕೆ ನೀಡಿದ್ದು, ಅಗತ್ಯ ವಸ್ತುಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವುದರಲ್ಲೇ ಪೂರೈಕೆ ಜಾಲದ (ಸಪ್ಲೈ ಚೈನ್) ವ್ಯವಹಾರ ನಿಂತಿರುತ್ತದೆ ಎಂದಿದ್ದಾರೆ. ಎಪಿ ಮೊಲ್ಲರ್- ಮೆರೆಸ್ಕ್ ಮುಖ್ಯಾಧಿಕಾರಿ ಸೊರೆನ್ ಸ್ಕೌ ಹೇಳುವಂತೆ, ಜಾಗತಿಕ ವ್ಯಾಪಾರ- ವಹಿವಾಟುಗಳ ಮೇಲೆ ಇದರ ಪ್ರಭಾವ ಆರಂಭವಾಗಲಿದೆ. ಈಗಾಗಲೇ ಕಾರಿನಿಂದ ಪ್ಲಾಸ್ಟಿಕ್ ತನಕ ಉತ್ಪಾದನಾ ಕೈಗಾರಿಕೆಗಳ ಮೇಲೆ ಪ್ರಭಾವ ಶುರುವಾಗಿದೆ. ಕಂಟೇನರ್ ಹಡಗು ಎವರ್ ಗಿವನ್ ಅನ್ನು ಮುಕ್ತಗೊಳಿಸಲು ಶುಕ್ರವಾರ ಮಾಡಿದ ಪ್ರಯತ್ನ ಕೂಡ ವಿಫಲವಾದ ಮೇಲೆ ಆತಂಕ ಹೆಚ್ಚಾಗಿದೆ.
ಒಂದು ವೇಳೆ ವಸ್ತುಗಳು ತುರ್ತಾಗಿ ಬೇಕಾಗಿದ್ದಲ್ಲಿ ಅವುಗಳನ್ನು ಮತ್ತೆ ಉತ್ಪಾದಿಸುವುದು ಹಾಗೂ ವಿಮಾನಗಳ ಮೂಲಕ ರವಾನೆ ಮಾಡುವುದೇ ಇರುವ ದಾರಿ. ಅಲ್ಲಿರುವ ಹಡಗುಗಳು ಕಾಯಲೇಬೇಕು. ಅದರ ಹೊರತಾಗಿ ಬೇರೆ ದಾರಿ ಇಲ್ಲ ಎಂದು ಮಾಧ್ಯಮಕ್ಕೆ ಸ್ಕೌ ತಿಳಿಸಿದ್ದಾರೆ. ಇತ್ತ ಅಮೆರಿಕದ ಶ್ವೇತ ಭವನ (ವೈಟ್ ಹೌಸ್) ಶುಕ್ರವಾರ ಹೇಳಿಕೆ ನೀಡಿ, ಸೂಯೆಜ್ ಕಾಲುವೆ ಮತ್ತೆ ಮುಕ್ತವಾಗಲು ಯಾವ ರೀತಿಯಲ್ಲಿ ಅತ್ಯುತ್ತಮವಾದ ಬೆಂಬಲ ನೀಡಬಹುದು ಎಂಬ ಬಗ್ಗೆ ಈಜಿಪ್ಟ್ ಜತೆಗೆ ಚರ್ಚೆ ನಡೆಸುತ್ತಿರುವುದಾಗಿ ತಿಳಿಸಿದೆ.
ಕಳ್ಳತನ ಆಗುವ ಆತಂಕ ಇನ್ನು ಹಡಗು ಕಂಪೆನಿಗಳು ತಮ್ಮ ಆತಂಕ ಹೇಳಿಕೊಂಡಿವೆ. ಸೂಯೆಜ್ ಕಾಲುವೆಯಲ್ಲಿ ಈಗ ತಗುಲಿಹಾಕಿಕೊಂಡಿರುವುದು ನೂರಾರು ಕೋಟಿ ಡಾಲರ್ ಮೌಲ್ಯದ ವಸ್ತುಗಳು. ಅವುಗಳು ಕಳ್ಳತನ ಆಗುವ ಆತಂಕವನ್ನು ಅಮೆರಿಕದ ನೌಕಾಪಡೆ ಬಳಿ ಈ ಕಂಪೆನಿಗಳು ಹಂಚಿಕೊಂಡಿವೆ. ಸ್ಕೌ ಹೇಳುವ ಪ್ರಕಾರ, ಸೂಯೆಜ್ ಕಾಲುವೆಯಲ್ಲಿ ಈಗ ಸಿಕ್ಕಿಕೊಂಡಿರುವ ಎವರ್ ಗಿವನ್ ಹಡಗು ತಕ್ಷಣಕ್ಕೆ ಮುಕ್ತವಾಯಿತು ಅಂದುಕೊಂಡರೂ ಜಾಗತಿಕ ಮಟ್ಟದಲ್ಲಿ ಬಾಕಿ ಉಳಿದುಹೋದ ಶಿಪ್ಪಿಂಗ್ಗಳು ಸರಿ ಹೋಗುವುದಕ್ಕೆ ಮತ್ತು ಈಗಿನ ಸರಣಿ ಅಡೆತಡೆಗಳಿಂದ ಪರಿಹಾರ ಕಂಡುಕೊಳ್ಳುವುದಕ್ಕೆ ತಿಂಗಳುಗಳೇ ಬೇಕಾಗುತ್ತದೆ.
ಈ ಘಟನೆಯಿಂದ ವಿಶ್ವದ ಆರ್ಥಿಕತೆ ಮೇಲೆ ಏನು ಪ್ರಭಾವ ಎಂಬ ಬಗ್ಗೆ ಹೆಸರಾಂತ ಅರ್ಥಶಾಸ್ತ್ರಜ್ಞರೊಬ್ಬರು ಹೇಳಿದ್ದು, ಎವರ್ ಗಿವನ್ ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡ ದಿನದಿಂದ ಒಂದು ದಿನಕ್ಕೆ 1000 ಕೋಟಿ ಅಮೆರಿಕನ್ ಡಾಲರ್ ಅಂದರೆ ಭಾರತ ರೂಪಾಯಿ ಲೆಕ್ಕದಲ್ಲಿ 72,000 ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ.
ಏನೇನು ಸಿಕ್ಕಿಹಾಕಿಕೊಂಡಿದೆ? ಸೂಯೆಜ್ ಕಾಲುವೆಯಲ್ಲಿ ಈಗ ಸಿಕ್ಕಿಹಾಕಿಕೊಂಡಿರುವುದು ಒಟ್ಟು 12 ಮಿಲಿಯನ್ ಟನ್ ಸರಕು. 1 ಟನ್ ಅಂದರೆ ಸಾವಿರ ಕೇಜಿ. ಅಂಥ ಸಾವಿರ ಕೇಜಿಯನ್ನು 1.2 ಕೋಟಿಯಿಂದ ಗುಣಿಸಿದರೆ ಎಷ್ಟು ಮೊತ್ತ ಬರುತ್ತದೋ ಅಷ್ಟು ಸರಕು ಸಿಕ್ಕಿಹಾಕಿಕೊಂಡಿದೆ. ಅದರಲ್ಲಿ ಶೇ 34.1ರಷ್ಟು ಕಂಟೇನರ್ಗಳು, ಶೇ 24.6 ಕಚ್ಚಾ ತೈಲ, ಶೇ 6.4ರಷ್ಟು ಸ್ವಚ್ಛ ಪೆಟ್ರೋಲಿಯಂ ಉತ್ಪನ್ನಗಳು, ಧಾನ್ಯಗಳು ಶೇ 6.1, ಕಲ್ಲಿದ್ದಲು ಶೇ 6, ಎಲ್ಪಿಜಿ (ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ಶೇ 3.1, ಎಲ್ಎನ್ಜಿ (ಲಿಕ್ವಿಡ್ ನ್ಯಾಚುರಲ್ ಗ್ಯಾಸ್) ಶೇ 2.9, ಕಬ್ಬಿಣ ಶೇ 6.7, ಗೊಬ್ಬರ ಶೇ 5.2, ಇತರ ಶೇ 2.7 ಮತ್ತು ವಾಹನಗಳು ಶೇ 2.2ರಷ್ಟಿದೆ.
ತಜ್ಞರ ನೆರವು ಪಡೆದುಕೊಂದು ಎವರ್ ಗಿವನ್ ಸುತ್ತ ಇರುವ ಮರಳು ಹಾಗೂ ಮಣ್ಣು ತೆಗೆಯಲಾಗುತ್ತಿದೆ. ಇತ್ತ ಈ ಘಟನೆ ನಡೆದ ನಂತರದಿಂದ ಸೂಯೆಜ್ ಬಳಿ 200ಕ್ಕೂ ಹೆಚ್ಚು ಹಡಗುಗಳು ಲಂಗರು ಹಾಕಿವೆ. ಇನ್ನು ಐದು ದಿನದೊಳಗೆ ಮತ್ತೆ 137 ಸೇರ್ಪಡೆ ಆಗಲಿವೆ ಎನ್ನಲಾಗುತ್ತಿದೆ. ಈಗಾಗಲೇ ಶಿಪ್ಪಿಂಗ್ ಕಂಪೆನಿಗಳು ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಮೂಲಕ ಸಾಗಾಟ ಆರಂಭಿಸಿವೆ. ಆದರೂ ಈ ಮಾರ್ಗವು ಏಷ್ಯಾ ಹಾಗೂ ಯುರೋಪ್ ಮಧ್ಯದ ಪ್ರಯಾಣಕ್ಕೆ ಸರಾಸರಿಯಾಗಿ ಕನಿಷ್ಠ 7 ದಿನಗಳನ್ನು ತೆಗೆದುಕೊಳ್ಳುತ್ತದೆ.
ವಾಹನೋದ್ಯಮಕ್ಕೆ ಭರ್ತಿ ಪೆಟ್ಟು ಅಂದ ಹಾಗೆ ನಿಮಗೆ ಗೊತ್ತಿರಲಿ, ಏಷ್ಯಾದ ಹಲವು ಕಾರು ತಯಾರಕರು ಯುರೋಪ್ ಕಾರ್ಖಾನೆಗಳಿಗೆ ಬಿಡಿಭಾಗಗಳ ಸಾಗಾಟಕ್ಕೆ ಅವಲಂಬಿತರಾಗಿರುವುದು ಸೂಯೆಜ್ ಕಾಲುವೆ ಮಾರ್ಗವನ್ನೇ. ಕಾಲುವೆಯಲ್ಲಿ ಕಾಲು ಮುರಿದಂತೆ ನಿಂತಿರುವ ಈ ದೈತ್ಯ ಗಾತ್ರದ ಹಡಗಿನಿಂದಾಗಿ ಯುನೈಟೆಡ್ ಕಿಂಗ್ಡಮ್ ಮತ್ತು ಯುರೋಪ್ನಲ್ಲಿ ಕೈಗಾರಿಕೆ ಘಟಕಗಳು ಉತ್ಪಾದನೆಯನ್ನು ನಿಲ್ಲಿಸಿವೆ. ನಿಸಾನ್ ಈ ಬಗ್ಗೆ ಮಾತನಾಡಿದ್ದು, ಏಷ್ಯಾದಿಂದ ಯುರೋಪ್ಗೆ ಸಮುದ್ರ ಮಾರ್ಗದ ರವಾನೆಗಳನ್ನು ಮಾಡುತ್ತಿದ್ದದ್ದು ಸೂಯೆಜ್ ಮೂಲಕವೇ ಎಂದಿದೆ. ಈಗಿನ ಘಟನೆಯಿಂದ ಕಂಪೆನಿಯ ಕಾರ್ಯ ನಿರ್ವಹಣೆ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ ಎಂದು ತಿಳಿಸಿದೆ. ಹೋಂಡಾ ಕಂಪೆನಿ ಕೂಡ ಸನ್ನಿವೇಶವನ್ನು ಮೌಲ್ಯಮಾಪನ ಮಾಡುತ್ತಿರುವುದಾಗಿ ಹೇಳಿದೆ. ಇನ್ನೊಂದು ಕಡೆ ಪೂರ್ವ ಆಫ್ರಿಕಾ ಭಾಗದ ಸಮುದ್ರ ಮಾರ್ಗದಲ್ಲಿ ಬರುವುದು ಅಪಾಯಕಾರಿ ಎಂಬ ಆತಂಕ ಕೂಡ ಇದೆ.
ಆಫ್ರಿಕಾದ ಜಲ ಮಾರ್ಗದಲ್ಲಿ ಬೆಲೆಬಾಳುವ ಪದಾರ್ಥ ರವಾನಿಸುವುದು ಅಪಾಯಕಾರಿ ಅಮೆರಿಕ ನೌಕಾ ಸೇನೆ ಹೇಳುವಂತೆ, ಈ ತನಕ ನೌಕಾ ಸೇನಾ ಕಾರ್ಯಾಚರಣೆಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಸೂಯೆಜ್ ಕಾಲುವೆಯ ತಡೆ ಮುಂದುವರಿದಲ್ಲಿ ಹಡಗುಗಳು ಅಪಾಯಕ್ಕೆ ಸಿಲುಕುತ್ತವೆ ಎಂದು ಶಿಪ್ಪಿಂಗ್ ಕಂಪೆನಿಗಳು ಆತಂಕಗೊಂಡಿವೆ. ಇನ್ನು ಪೂರ್ವ ಆಫ್ರಿಕಾದಲ್ಲಿ ಕಳ್ಳತನಕ್ಕೆ ಕುಖ್ಯಾತವಾಗಿದೆ. ಅಲ್ಲಿ ಸಮುದ್ರ ಮಾರ್ಗದಲ್ಲಿ ಅಪಹರಣ ಪ್ರಕರಣಗಳು ಹೆಚ್ಚು. ಅಷ್ಟೇ ಅಲ್ಲ, ಈಚಿನ ತಿಂಗಳುಗಳಲ್ಲಿ ಹಡಗಿಗೆ ಸಂಬಂಧಿಸಿದ ಇತರ ಅಪರಾಧ ಪ್ರಕರಣಗಳು ಕೂಡ ಹೆಚ್ಚಾಗಿದೆ. ಇನ್ನು ಕೇಪ್ ಆಫ್ ಗುಡ್ ಹೋಪ್ ಅನ್ನು ಸುತ್ತಿಬರುವುದರಿಂದ ಇಂಧನ, ಭದ್ರತೆ, ಇನ್ಷೂರೆನ್ಸ್ ಇವೆಲ್ಲ ಹೆಚ್ಚಾಗುತ್ತದೆ.
ಆದರೆ, ಅದೇ ಸೂಯೆಜ್ ಕಾಲುವೆಯಿಂದ ಹಾದುಬರುವುದಕ್ಕೆ ಇದಕ್ಕೆ ಹತ್ತಿರ ಹತ್ತಿರ 5,00,000 ಅಮೆರಿಕನ್ ಡಾಲರ್ ವೆಚ್ಚ ಬರುತ್ತದೆ. ಹಡಗುಗಳ ಮಾಲೀಕರ ಚಿಂತೆ ಏನೆಂದರೆ, ವೆಚ್ಚಕ್ಕಿಂತ ಹೆಚ್ಚಾಗಿ ಸರಿಯಾದ ಸಮಯಕ್ಕೆ ಸರಕು ತಲುಪಿಸಲು ಸಾಧ್ಯವೇ? ಅದರಲ್ಲೂ ಆಟೋಮೋಟಿವ್ಯಿಂದ ಔಷಧಗಳ ತನಕ ಸಾಗಣೆ ಅಪಾಯಕಾರಿ. ತೈಲ, ಅನಿಲ, ಕಾಫೀಯಂಥ ಬಹುಬೇಡಿಕೆ ಇರುವ ಪದಾರ್ಥಗಳನ್ನು ಆಫ್ರಿಕಾದ ಮಾರ್ಗದಲ್ಲಿ ಕಳಿಸುವುದು ಕಷ್ಟ ಎನ್ನುತ್ತಾರೆ.
(ಮಾಹಿತಿ ಮೂಲ: ಫೈನಾನ್ಷಿಯಲ್ ಟೈಮ್ಸ್)
ಇದನ್ನೂ ಓದಿ: ಸೂಯೆಜ್ ಕಾಲುವೆಯಲ್ಲಿ 1312 ಅಡಿ ಉದ್ದದ ಹಡಗಿನಿಂದ ಟ್ರಾಫಿಕ್ ಜಾಮ್; ದಿನಕ್ಕೆ 70 ಸಾವಿರ ಕೋಟಿ ರೂ. ನಷ್ಟ