ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಮಾಹಿತಿ ಸಂಗ್ರಹಕ್ಕೆ ಗೃಹ ಸಚಿವ ಪರಮೇಶ್ವರ್ ಸೂಚನೆ: ಗಡೀಪಾರಿಗೆ ಕ್ರಮ ಕೈಗೊಳ್ಳುವ ಭರವಸೆ
ಕರ್ನಾಟಕದಲ್ಲಿ ಅಕ್ರಮವಾಗಿ ವಾಸಿಸುವ ವಿದೇಶಿಯರನ್ನು ಪತ್ತೆಹಚ್ಚಲು ರಾಜ್ಯಾದ್ಯಂತ ಪೊಲೀಸ್ ಠಾಣೆಗಳ ಮೂಲಕ ಮಾಹಿತಿ ಸಂಗ್ರಹಿಸಲು ಗೃಹ ಸಚಿವರು ಆದೇಶಿಸಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಕ್ರಮ ವಲಸಿಗರು ಶಾಮೀಲಾಗಿರುವ ಅಪರಾಧ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು. ಕಾಫಿ ಎಸ್ಟೇಟ್‌ಗಳಲ್ಲಿಯೂ ಅಕ್ರಮ ವಲಸಿಗರು ಇರುವ ಸಾಧ್ಯತೆಯಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಬೆಂಗಳೂರು, ಮೇ 28: ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ (Foreigners) ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಕ್ಕಾಗಿ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಾಸಿಸುವ ವಿದೇಶಿಯರ ಮಾಹಿತಿ ಸಂಗ್ರಹಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ (G Parameshwara) ತಿಳಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಬೆಂಗಳೂರು ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎಷ್ಟು ವಿದೇಶಿಯರು ಇದ್ದಾರೆ ಎಂಬುದರ ಕುರಿತು ದತ್ತಾಂಶ ಸಂಗ್ರಹಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಅಕ್ರಮ ಬಾಂಗ್ಲಾದೇಶಿ ವಲಸಿಗರರು ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುತ್ತಿರಬಹುದು, ಅದು ನಮಗೆ ತಿಳಿಯುವುದಿಲ್ಲ. ಈ ಬಗ್ಗೆ ನಾನು ಹಲವು ಬಾರಿ ಹೇಳಿದ್ದೇನೆ. ಕಾಫಿ ಎಸ್ಟೇಟ್‌ಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರ ಬಗ್ಗೆ ಕಂಡುಹಿಡಿಯಲು ನಾವು ಹಾಸನ, ಚಿಕ್ಕಮಗಳೂರು, ಕೊಡಗು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಆ ಕೆಲಸ ನಡೆಯುತ್ತಿದೆ. ಬೆಂಗಳೂರಿನಲ್ಲಿ ಆನೇಕಲ್ ಹಾಗೂ ಬೆಂಗಳೂರು ದಕ್ಷಿಣದಂಥ ಕೆಲವು ಪ್ರದೇಶಗಳಲ್ಲಿ ಅನೇಕ ವಿದೇಶಿಯರಿದ್ದಾರೆ. ನಾವು ದತ್ತಾಂಶ ಪಡೆಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಬಾಣಸವಾಡಿ, ಹೆಣ್ಣೂರು ಮುಂತಾದ ಪ್ರದೇಶಗಳಲ್ಲಿ ಕೆಲವು ದೇಶಗಳ ವಿದೇಶಿಯರು ಮಾದಕವಸ್ತು ಸಂಬಂಧಿತ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅಂಥವರ ಮೇಲೆ ನಿಗಾ ಇಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 200 ಕ್ಕೂ ಹೆಚ್ಚು ಜನರನ್ನು ಗುರುತಿಸಿ ಗಡೀಪಾರು ಮಾಡಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.
ಅಪರಾಧ ಎಸಗಿ ಗಡೀಪಾರಿನಿಂದ ಬಚಾವಾಗುವ ಖದೀಮರು!
ಅಕ್ರಮ ವಲಸಿಗರಲ್ಲಿ ಕೆಲವರು ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಹಲ್ಲೆಯಂತಹ ಅಪರಾಧಗಳಲ್ಲಿ ಕೃತ್ಯಗಳಲ್ಲಿ ಶಾಮೀಲಾಗುವ ಮೂಲಕ ತಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ನೋಡಿಕೊಳ್ಳುತ್ತಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೆ ಅವರನ್ನು ಗಡೀಪಾರು ಮಾಡಲು ಸಾಧ್ಯವಿಲ್ಲ. ನಂತರ ಅವರು (ಪೊಲೀಸ್ ಕಸ್ಟಡಿಯಿಂದ) ಹೊರಬರುತ್ತಾರೆ ಮತ್ತು ಸಾಮಾನ್ಯವಾಗಿ ಬದುಕುತ್ತಾರೆ. ಇಂಥದ್ದೊಂದು ಜಾಲವೂ ಇದೆ. ಹೀಗಾಗಿ ನಾವು ಸಂಬಂಧಪಟ್ಟ ರಾಯಭಾರ ಕಚೇರಿಗಳಿಗೆ ಪತ್ರ ಬರೆದಿದ್ದೇವೆ. ಅಂತಹ ಜನರನ್ನು ಬಂಧನ ಕೇಂದ್ರಗಳಲ್ಲಿ ಇರಿಸಿದ್ದೇವೆ ಮತ್ತು ನಂತರ ಅವರನ್ನು ತಮ್ಮ ದೇಶಗಳಿಗೆ ಕಳುಹಿಸಲಾಗಿದೆ. ನಾವು ಅಂತಹ 200 ಜನರನ್ನು ಅವರ ದೇಶಗಳಿಗೆ ಕಳುಹಿಸಿದ್ದೇವೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.
ರಿಯಲ್ ಎಸ್ಟೇಟ್ ಚಟುವಟಿಕೆ ಮಾಡದಂತೆ ಪೊಲೀಸರಿಗೆ ಸೂಚನೆ
ಯಾವುದೇ ರಿಯಲ್ ಎಸ್ಟೇಟ್ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಪರಮೇಶ್ವರ್, ಒಂದು ವೇಳೆ ಅಂಥ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಗೊತ್ತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಆರ್ಟಿಪಿಸಿಆರ್ ಲ್ಯಾಬ್ ಪುನರಾರಂಭ, ಟೆಸ್ಟಿಂಗ್ಗೆ ಸಿದ್ಧತೆ
‘ಪೊಲೀಸ್ ಠಾಣೆಯಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳ ಬಗ್ಗೆ ಹಲವು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ. ಅದನ್ನು ಕೊನೆಗೊಳಿಸಬೇಕಿದೆ. ಈ ಸಂಬಂಧ ನಾನು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇನೆ. ರಿಯಲ್ ಎಸ್ಟೇಟ್ ಸಂಬಂಧಿತ ಚಟುವಟಿಕೆಗಳಲ್ಲಿ ಯಾರಾದರೂ ಭಾಗಿಯಾಗಿರುವುದು ನಮ್ಮ ಗಮನಕ್ಕೆ ಬಂದರೆ ಗಂಭೀರ ಸ್ವರೂಪದ ಕ್ರಮ ಕೈಗೊಳ್ಳುವಂತೆ ನಮ್ಮ ಆಯುಕ್ತರು ಅಥವಾ ಹಿರಿಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.




