ಮೊದಲ ಮಾಧ್ಯಮ ಗೋಷ್ಠಿಯಲ್ಲಿ ತಮ್ಮನ್ನೇ ತಾವು ಹೊಗಳಿಕೊಂಡ ಅಮೆರಿಕ ಅಧ್ಯಕ್ಷ ಜೋ ಬೈಡೆನ್!
ಅಮೇರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎರಡು ತಿಂಗಳ ನಂತರ ಮೊದಲ ಮಾಧ್ಯಮ ಗೋಷ್ಠಿ ನಡೆಸಿದ ಅಧ್ಯಕ್ಷ ಜೋ ಬೈಡೆನ್ ಯಾವ ವಿಷಯಕ್ಕೂ ಸ್ಪಷ್ಟ ಉತ್ತರ ನೀಡಲಿಲ್ಲ. ತಮ್ಮನ್ನು ತಾವೇ ಹೊಗಳಿಕೊಂಡ ಬೈಡನ್ ಅಮೇರಿಕಕ್ಕೆ ಮಂಬರುವ ದಿನಗಳಲ್ಲಿ ಒಳ್ಳೆಯ ಭವಿಷ್ಯ ತರುವ ಭರವಸೆ ನೀಡಿದರು.
ಡೋನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಅಮೇರಿಕದ ಅಧ್ಯಕ್ಷರಾಗಿ ಆರಿಸಿ ಬಂದ 65 ದಿನಗಳ ನಂತರ ಮೊದಲ ಮಾಧ್ಯಮ ಗೋಷ್ಠಿ ನಡೆಸಿದ ಜೋ ಬೈಡೆನ್, ನಮ್ಮ ದೇಶದ ರಾಜಕಾರಿಣಿಗಳನ್ನು ಮೀರಿಸಿದ್ದಾರೆ. ಹಿಂದಿನ ರಿಪಬ್ಲಿಕನ್ ಅಧ್ಯಕ್ಷ ಮತ್ತು ಆ ಪಕ್ಷವನ್ನು ಸಿಕ್ಕಾಪಟ್ಟೆ ಬಯ್ದಿದ್ದಾರೆ. ಸಿಕ್ಕ ಮೊದಲ ಅವಕಾಶದಲ್ಲಿ, ಈ ಜೋ ಬೈಡನ್ ತುಂಬಾ ಒಳ್ಳೆಯವನು ಎಂದು ಹೇಳುತ್ತ ತಮ್ಮನ್ನೇ ತಾವು ಹೊಗಳಿಕೊಂಡಿದ್ದಾರೆ. ಹೆಚ್ಚಿನ ಪ್ರಶ್ನೆಗಳಿಗೆ ಸುತ್ತು ಬಳಸಿ ಉತ್ತರ ಕೊಟ್ಟಿದ್ದಾರೆ. ಎಂದಿನಂತೆ ಪತ್ರಕರ್ತರು ಮುಂದಿನ ಚುನಾವಣೆಗೆ ನಿಲ್ಲುತ್ತೀರಾ ಎಂದು ಕೇಳಿ ಬೈಡನ್ಗೆ ಸಣ್ಣ ಸಿಟ್ಟು ಬರುವಂತೆ ಮಾಡಿದರು.
ವೈಟ್ ಹೌಸ್ನಲ್ಲಿ ನಡೆದ ಮೊದಲ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಚೀನಾ, ಅಫ್ಘಾನಿಸ್ತಾನದಲ್ಲಿ ಇರವು ಅಮೇರಿಕ ಸೇನೆಯ ಹಿಂಪಡೆತ, ಅಮೇರಿಕಾ-ಮೆಕ್ಸಿಕೋ ಗಡಿ ನಡುವೆ ಸಿಕ್ಕಿ ಹಾಕಿಕೊಂಡಿರುವ ಮಕ್ಕಳ ವಿಷಯ, ಕೊವಿಡ್ ಚುಚ್ಚುಮದ್ದು ನೀಡುವ ವಿಚಾರವನ್ನು ಮಾತನಾಡಿದರು. ತಮ್ಮ ಅಧಿಕಾರಾವಧಿಯ ಪ್ರಾರಂಭದಲ್ಲಿ ಕೊವಿಡ್ ತಡೆಯವು ವಿಚಾರಕ್ಕೆ ಅನೇಕ ಕ್ರಮ ಕೈಗೊಂಡಿದ್ದು, 100 ದಿನಗಳಲ್ಲಿ 200 ಮಿಲಿಯನ್ ಚುಚ್ಚುಮದ್ದು ನೀಡಲು ನಿರ್ಧರಿಸಲಾಗಿದೆ ಎಂದರು. ಅದರ ಜೊತೆಗೆ 100 ಮಿಲಿಯನ್ ಜನರ ಖಾತೆಗೆ ತಲಾ 1400 ಡಾಲರ್ ಹಾಕಲಾಗಿದೆ ಎಂದರು.
ಚೀನಾ ಬಗ್ಗೆ ಬೈಡನ್ ಹೇಳಿದ್ದೇನು? ತಾವು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಜೊತೆ ಮಾತನಾಡಿದ್ದು, ಯಾರ ಜೊತೆಗೂ ಜಗಳಕ್ಕಿಳಿಯುವ ಮನಸ್ಸು ಮಾಡುವ ಆಡಳಿತ ನಮ್ಮದಲ್ಲ. ಮುಂದುವರಿದು, ತಮ್ಮ ಆಡಳಿತ ಸಂಶೋಧನೆ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ತುಂಬಾ ಹಣ ಖರ್ಚು ಮಾಡಲಿದೆ ಎಂದು ವಿವರಿಸಿದರು. ಚೀನಾ ಮತ್ತು ರಶಿಯಾದಲ್ಲಿ ನಿರಂಕುಶಾಧಿಕಾರ ಇದ್ದು, ಆ ದೇಶಗಳು ಪ್ರಜಾಪ್ರಭುತ್ವವವನ್ನು ಒಪ್ಪಿಕೊಳ್ಳದ ವಿಚಾರ ನಮಗೆ ತಲೆನೋವಾಗಿದೆ ಎಂದರು. ಇದೇ ರೀತಿ ಅಫ್ಘಾನಿನಿಸ್ತಾನದಲ್ಲಿ ಇರುವ ಅಮೇರಿಕದ ಸೇನೆ ಹಿಂಪಡೆತದ ವಿಚಾರದಲ್ಲಿ ಅವರು ಸುದೀರ್ಘವಾಗಿ ಮಾತನಾಡಿದರೂ, ಯಾವ ಸಮಯಕ್ಕೆ ಸೇನೆ ಹಿಂಪಡೆತ ಆಗಬಹುದು ಎಂಬ ವಿಚಾರವನ್ನು ಖಚಿತವಾಗಿ ಹೇಳಲು ಹಿಂದೇಟು ಹಾಕಿದರು.
ಹಾಂಡುರಾಸ್, ಎಲ್ ಸಾಲ್ವಾಡಾರ್ ಮತ್ತು ಮೆಕ್ಸಿಕೋ ಮುಂತಾದ ದೇಶಗಳಿಂದ ಯಾವ ವೀಸಾ ಅಥವಾ ಪಾಸ್ಪೋರ್ಟ್ ಇಲ್ಲದೇ ಗಡಿ ದಾಟಿರುವ ಜನರನ್ನು ವಾಪಸ್ ಕಳಿಸಿದ್ದಾರೆ. ಅವರ ಮಕ್ಕಳು ಈಗ ಅಮೇರಿಕದಲ್ಲಿ ಇದ್ದಾರೆ. ಆ ಮಕ್ಕಳ ಸ್ಥಿತಿ ಗತಿ ಬಗ್ಗೆಯೇ ತುಂಬಾ ಪ್ರಶ್ನೆಗಳಿದ್ದವು. ಈ ಪ್ರಶ್ನೆಗಳಿಗೆ ಉತ್ತರ ಕೊಡುವಾಗ, ಬೈಡನ್ ಕನಿಷ್ಠ ಮೂರು ಬಾರಿಯಾದರೂ ಈ ಬೈಡನ್ ತುಂಬಾ ಒಳ್ಳೆಯವರು ಎಂದು ತಮಗೆ ಶಾಭಾಶ್ಗಿರಿ ಕೊಟ್ಟುಕೊಂಡರು. I am a nice guy ಎಂಬುದಾಗಿ, ಇನ್ನೊಮ್ಮೆ Joe Biden is a nice man ಎಂದು ಹೇಳಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಹಿಂದಿನ ಅಧ್ಯಕ್ಷ ಟ್ರಂಪ್ ಹೇಗೆ ಅಮಾನವೀಯವಾಗಿ ನಡೆದುಕೊಂಡರು ತಪ್ಪು ನಿರ್ಧಾರ ತೆಗೆದುಕೊಂಡರು ಎಂದು ಅವರು ಹೇಳಿದರು.
ನಮ್ಮ ದೇಶದಂತೆಯೇ ಅಲ್ಲಿ ಕೂಡ ಪತ್ರಕರ್ತರು ನಾಯಕರುಗಳಿಗೆ ಇಲ್ಲಸಲ್ಲದ ಪ್ರಶ್ನೆ ಕೇಳುವುದು ಇದೆ. ಬೈಡನ್ ಮಾಧ್ಯಮ ಗೋಷ್ಠಿಯಲ್ಲಿ ಕೂಡ ಇದು ನಡೆಯಿತು. ಈಗಿನ್ನೂ 65 ದಿನ ಕಳೆದಿರುವ ಬೈಡನ್ಗೆ ನೀವು ಮುಂದಿನ ಚುನಾವಣೆಗೆ ನಿಲ್ಲುತ್ತೀರಾ ಎಂದು ಪತ್ರಕರ್ತರು ಕೇಳಿದರು. ಆ ಪ್ರಶ್ನೆಗೆ ಸ್ವಲ್ಪ ಗಲಿಬಿಲಿ, ಸ್ವಲ್ಪ ಸಿಟ್ಟಾದ, ಬೈಡನ್ ಮತ್ತೆ ಚುನಾವಣೆಗೆ ನಿಲ್ಲುವ ಆಸೆ ವ್ಯಕ್ತಪಡಿಸಿದರು. 74 ವರ್ಷದ ಬೈಡನ್ ಅಮೇರಿಕದ ಹಿರಿಯ ಅಧ್ಯಕ್ಷರುಗಳಲ್ಲಿ ಒಬ್ಬರು. ಇತ್ತೀಚೆಗೆ ವಿಮಾನ ಏರುವಾಗ ಮೂರು ಬಾರಿ ಎಡವಿದ್ದ ಬೈಡನ್ ಅವರ ಆರೋಗ್ಯದ ಬಗ್ಗೆ ಪ್ರಶ್ನೆ ಇದ್ದಿತ್ತು. ಆಗ ಅವರ ಕಾರ್ಯಾಲಯ ಈ ಕುರಿತು ಸ್ಪಷ್ಟೀಕರಣ ನೀಡಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ:
Published On - 4:40 pm, Sat, 27 March 21